ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಅಪಾಯಕಾರಿ ತಿರುವು: ಪ್ರತಿನಿತ್ಯ ಅಪಘಾತ

| Published : Sep 30 2025, 12:01 AM IST

ಸಾರಾಂಶ

ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿರುವ ಅಪಾಯಕಾರಿ ತಿರುವುಗಳಿಂದ ಪದೇ ಪದೇ ವಾಹನಗಳು ಉರುಳಿ ಬೀಳುತ್ತಿದ್ದು, ತಕ್ಷಣ ಸೂಚನಾ ಫಲಕ ಅಳವಡಿಸುವ ಮೂಲಕ ಅಪಘಾತ ತಪ್ಪಿಸುವ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸುವಂತೆ ಸಾರ್ವಜನಿಕರ ಆಗ್ರಹ

ಕನ್ನಡಪ್ರಭ ವಾರ್ತೆ ಶಿರಸಿ

ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿರುವ ಅಪಾಯಕಾರಿ ತಿರುವುಗಳಿಂದ ಪದೇ ಪದೇ ವಾಹನಗಳು ಉರುಳಿ ಬೀಳುತ್ತಿದ್ದು, ತಕ್ಷಣ ಸೂಚನಾ ಫಲಕ ಅಳವಡಿಸುವ ಮೂಲಕ ಅಪಘಾತ ತಪ್ಪಿಸುವ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಶಿರಸಿಯಿಂದ ಯಲ್ಲಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ 93ರಲ್ಲಿ ಹಲವಾರು ಕಡೆಗಳಲ್ಲಿ ಅಪಾಯಕಾರಿ ತಿರುವುಗಳಿವೆ. ಸೂಚನಾ ಫಲಕ ಅಳವಡಿಸದ ಕಾರಣ ವಾಹನ ಸವಾರರಿಗೆ ತಿರುವು ಗೋಚರವಾಗುವುದಿಲ್ಲ. ಹೀಗಾಗಿ ವೇಗವಾಗಿ ಬರುವ ವಾಹನಗಳು ಪಲ್ಟಿಯಾಗುತ್ತಿವೆ. ದೇವನಿಲಯ, ದಾಸನಗದ್ದೆ, ಭೈರುಂಬೆ ಘಟ್ಟದ ಬಳಿ, ಸೋಂದಾ ತಿರುವಿನಲ್ಲಿ ಕಳೆದ ಒಂದು ವಾರದಿಂದ ನಾಲ್ಕೈದು ಕಾರುಗಳು ಹೊಂಡಕ್ಕೆ ಬಿದ್ದಿವೆ. ಈ ಮೂರು ತಿರುವುಗಳು ಅಪಾಯಕಾರಿಯಾಗಿದೆ. ಚಾಲಕರಿಗೆ ತಿರುವು ಕಂಡ ತಕ್ಷಣ ಬ್ರೇಕ್‌ ಹಾಕಿದಾಗ ಮಳೆಗಾಲವಾದ್ದರಿಂದ ವಾಹನಗಳು ಜಾರಿ ಉರುಳಿ ಬೀಳುತ್ತಿವೆ. ಅಲ್ಲದೇ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳನ್ನು ತಪ್ಪಿಸುವ ಭರಾಟೆಯಲ್ಲಿಯೂ ಪಲ್ಟಿಯಾಗುತ್ತಿವೆ. ರಸ್ತೆಯಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸೂಚನಾ ನಾಮಫಲಕ ಅಳವಡಿಸುವಂತೆ ಹಲವು ಬಾರಿ ಲೋಕೋಪಯೋಗಿ ಇಲಾಖೆಯನ್ನು ಆಗ್ರಹಿಸಿದರೂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಜನರು ಹೇಳಿದ್ದಾರೆ. ಮರದ ರೆಂಬೆ-ಕೊಂಬೆಗಳ ಕಟಾವುಗೊಳಿಸಿ, ನಿರ್ವಹಣೆ ಮಾಡದ ಕಾರಣ ಮರಗಳೆಲ್ಲವೂ ರಸ್ತೆ ಕಡೆ ವಾಲಿದ್ದು, ಗಾಳಿ-ಮಳೆಯ ಆರ್ಭಟಕ್ಕೆ ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ. ವಾಹನ ಸಂಚಾರ ಮಾಡುತ್ತಿರುವಾಗ ಮರ ಬಿದ್ದು ಅಪಾಯ ಉಂಟಾದರೆ ಯಾರು ಹೊಣೆ? ಮಳೆಗಾಲದ ಪೂರ್ವದಲ್ಲಿ ರಸ್ತೆಗೆ ವಾಲಿದ ಮರಗಳನ್ನು ಕಟಾವು ಮಾಡುವಂತೆ ಅರಣ್ಯ ಮತ್ತು ಲೊಕೋಪಯೋಗಿ ಇಲಾಖೆಯನ್ನು ಆಗ್ರಹಿಸಿದರೂ, ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯಿಂದ ಮರಗಳ ಕಟಾವು ಆಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಸೋಂದಾ ಕ್ರಾಸ್‌ವರೆಗೆ ಬಹಳ ತಿರುವುಗಳು ಇದೆ. ಇಲ್ಲಿ ಸಹಸ್ರಲಿಂಗ ಸೋಂದಾ ಮಠ ಮತ್ತು ದೇವರ ಹೊಳೆ ಪ್ರವಾಸಿ ತಾಣಗಳು ಇವೆ. ರಾತ್ರಿ ಸಮಯದಲ್ಲಿ ಹೊರ ಭಾಗದಿಂದ ಆಗಮಿಸುವ ವಾಹನ ಸವಾರರಿಗೆ ತಿರುವು ಗೋಚರವಾಗದೇ ಅಪಘಾತ ಉಂಟಾಗುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳಲ್ಲಿ ಸೂಚನಾಫಲಕ ಅಳವಡಿಸುವ ಕಾರ್ಯ ಮಾಡಬೇಕು ಎಂದು ಭೈರುಂಬೆ ಗ್ರಾಪಂ ಸದಸ್ಯರ ಪ್ರಕಾಶ ಹೆಗಡೆ ಒತ್ತಾಯಿಸಿದ್ದಾರೆ.