ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯ ರಸ್ತೆಗಳ ಇಕ್ಕೆಲಗಳ ರೈತರು ಸಾಕಷ್ಟು ರಸ್ತೆ ಒತ್ತುವರಿ ಮಾಡಿರುವ ಹಿನ್ನೆಲೆ ಅಪಾಯಕ್ಕೆ ಆಹ್ವಾನಿಸುತ್ತಿವೆ.ಹೌದು, ತಾಲೂಕಿನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 759 ಕಿಮೀ ಉದ್ದದ 326 ರಸ್ತೆಗಳಿವೆ, ಬಹುತೇಕ ರಸ್ತೆ ಅಕ್ಕಪಕ್ಕದ ರೈತರು ಡಾಂಬರು ರಸ್ತೆ ವರೆಗೂ, ಜೆಸಿಬಿ ಮೂಲಕ ರಸ್ತೆ ಕಿತ್ತು ಹಾಕಿದ್ದಾರೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ನಿರ್ಮಿಸಿದ್ದ ಮಣ್ಣಿನ ಚರಂಡಿಗಳು ಕೂಡಾ ಕಿತ್ತು ಹಾಕಿದ್ದಾರೆ.
ತಾಲೂಕಿನ ಮಾಗಳ-ಕೆ. ಅಯ್ಯನಹಳ್ಳಿಗೆ ಸಂಪರ್ಕ ಕಲ್ಪಿಸುವ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ರಸ್ತೆಯಾಗಿದ್ದು, ಈ ರಸ್ತೆಯ ಇಕ್ಕೆಲಗಳಲ್ಲಿರುವ ಬಹುತೇಕ ರೈತರು ಒತ್ತುವರಿ ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ರಸ್ತೆಯ ಬದಿ ಜಂಗಲ್ ಕಂಟಿಂಗ್ ಮಾಡಿ ಮಣ್ಣಿನ ಚರಂಡಿ ಮಾಡಿದ್ದಾರೆ, ಆದರೆ ರೈತರು ರಸ್ತೆ ಬದಿಯ ಗಿಡ ಮರಗಳನ್ನು ತೆರವು ಮಾಡಿ ಒತ್ತುವರಿ ಮಾಡಿದ್ದಾರೆ. ಇದರಿಂದ ನಿತ್ಯ ದೊಡ್ಡ ಪ್ರಮಾಣದ ವಾಹನಗಳು ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗಿದೆ. ಕೆಲ ಅಪಘಾತಗಳಾಗಿರುವ ಪ್ರಕರಣಗಳಿವೆ.ತಾಲೂಕಿನ ಮಾಗಳ-ಶಿವಪುರ ಜಿಲ್ಲಾ ಮುಖ್ಯ ರಸ್ತೆಯಾಗಿದೆ. 80 ಅಡಿ ರಸ್ತೆ ಇದ್ದು, ಈಗ ಈ ರಸ್ತೆ ಸಿಕ್ಕಾಪಟ್ಟೆ ಒತ್ತುವರಿಯಾಗಿದೆ. ರಸ್ತೆ ಬದಿ ಸಾಮಾಜಿಕ ವಲಯ ಅರಣ್ಯ ಇಲಾಖೆ ಬೆಳೆಸಿದ್ದ ಗಿಡ ಮರಗಳನ್ನು ಸಾಕಷ್ಟು ಕಡಿದು ಹಾಕಿ ರಸ್ತೆ ಜಮೀನು ಮಾಡಿಕೊಂಡಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ತಾಲೂಕಿನ ಇಟಿಗಿ-ಹೂವಿನಹಡಗಲಿ-ಹೊಳಲು ರಾಜ್ಯ ಹೆದ್ದಾರಿಯಾಗಿದೆ. ಅಲ್ಲಿಪುರ, ಮಾಗಳ, ಹೊಸಹಳ್ಳಿ, ಅಂಗೂರು, ಕೋಟಿಹಾಳ್ ವರೆಗೂ ಈ ಹಿಂದೆ ₹47 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ಇದಕ್ಕೆ ವಾಹನ ಸವಾರರ ರಕ್ಷಣೆಗಾಗಿ ಕಬ್ಬಿಣದ ಕಂಬಿ ಹಾಕಲಾಗಿದೆ. ಆದರೆ ಬಹುತೇಕ ಕಬ್ಬಿಣದ ಕಂಬಿ ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.ಈಗಾಗಲೇ ಸರ್ಕಾರ ಕಂದಾಯ ಇಲಾಖೆ ಸರ್ಕಾರಿ ಜಮೀನುಗಳನ್ನು ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಒತ್ತುವರಿ ಪತ್ತೆ ಮಾಡಿ ತೆರವಿಗೆ ಕ್ರಮಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯ ರಸ್ತೆ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.ರಸ್ತೆ ಒತ್ತುವರಿಯಾಗದಂತೆ ಜಂಗಲ್ ಕಟ್ಟಿಂಗ್ ಸಂದರ್ಭ ಮಣ್ಣಿನ ಚರಂಡಿ ನಿರ್ಮಿಸಲಾಗಿದೆ. ಅಷ್ಟಾಗಿ ರೈತರು ಒತ್ತುವರಿ ಮಾಡಿದ್ದರೇ ಅವರಿಗೆ ನೋಟಿಸ್ ಜಾರಿ ಮಾಡಿ ತಹಸೀಲ್ದಾರ್ ಗಮನಕ್ಕೆ ತಂದು ತೆರವಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಇಇ (ಪ್ರಭಾರ) ಕುಂಬೇಂದ್ರ ನಾಯ್ಕ ತಿಳಿಸಿದ್ದಾರೆ.ರಸ್ತೆಯ ಬದಿಯಲ್ಲಿ ವಾಹನ ಸವಾರರ ರಕ್ಷಣೆಗಾಗಿ ಹಾಕಿದ ಕಬ್ಬಿಣದ ಕಂಬಿಗಳು ಕಳ್ಳತನ ಹಾಗೂ ರಸ್ತೆ ಒತ್ತುವರಿ ತೆರವಿಗೆ ಕ್ರಮಕ್ಕೆ ಮುಂದಾಗುತ್ತೇವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಇಇ ಬಿ. ರಾಜಪ್ಪ.