ಗೃಹರಕ್ಷಕರಿಗೆ ಸಾಮಾಜಿಕ ಕಳಕಳಿ ಅಗತ್ಯ

| Published : May 21 2025, 12:06 AM IST

ಸಾರಾಂಶ

ಗೃಹರಕ್ಷಕರು ಪೊಲೀಸ್ ಇಲಾಖೆಯೊಂದಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಲು ಗೃಹರಕ್ಷಕ ದಳ ಉತ್ತಮ ವೇದಿಕೆಯಾಗಿದೆ. ಈ ಅವಕಾಶವನ್ನು ಶಿಬಿರಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಗೃಹರಕ್ಷಕರಿಗೆ ಸಾಮಾಜಿಕ ಕಳಕಳಿ ಇರಬೇಕು ಎಂದು ಜಿಲ್ಲಾ ಸಶಸ್ತ್ರಪಡೆಯ (ಡಿಎಆರ್‌) ಇನ್ಸ್‌ ಪೆಕ್ಟರ್ ಎಚ್.ವಿ. ದೇವಿಪ್ರಸಾದ್ ತಿಳಿಸಿದರು.

ಜ್ಯೋತಿನಗರದಲ್ಲಿನ ಡಿಎಆರ್ ಸಮುದಾಯ ಭವನದಲ್ಲಿ ಜಿಲ್ಲಾ ಗೃಹ ರಕ್ಷಕ ದಳವು ಮಂಗಳವಾರ ಆಯೋಜಿಸಿದ್ದ ಗೃಹರಕ್ಷಕರ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗೃಹರಕ್ಷಕರು ಪೊಲೀಸ್ ಇಲಾಖೆಯೊಂದಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗಲಿದೆ. ಈ ಮೂಲಕ ಸರ್ಕಾರದೊಂದಿಗೆ ಸಮಾಜ ಸೇವೆ ಸಹ ಮಾಡಬಹುದು ಎಂದು ಹೇಳಿದರು.

ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಎಂ. ಕಾಂತರಾಜು ಮಾತನಾಡಿ, ಗೃಹರಕ್ಷಕ ದಳಕ್ಕೆ ಸೇರ್ಪಡೆಯಾಗಲು 600 ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, 204 ಮಂದಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎಂದರು.

ಗೃಹರಕ್ಷಕ ದಳದ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಎಂ. ನಾಲತ್‌ ವಾಡ್, ಉಪ ಕಮಾಂಡೆಂಟ್ ಎಸ್.ಆರ್. ಗಾಯಕ್ವಾಡ್, ಬೋಧಕರಾದ ಎಂ.ಆರ್. ಚಂದನ್, ಎಸ್. ಮಂಜುನಾಥ್, ಸಿಬ್ಬಂದಿ ಎಂ. ಶಿಲ್ಪಾ, ಎಸ್. ವಿದ್ಯಾಶ್ರೀ, ಎ.ಎಸ್. ಶ್ರುತಿ ಇದ್ದರು.