ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ದರಕಾಸು ಸಮಿತಿ ಸಭೆ

| Published : Oct 26 2024, 01:08 AM IST

ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ದರಕಾಸು ಸಮಿತಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಶಾಸಕನಾದ ನಂತರ ದರಕಾಸು ಸಮಿತಿ ಎರಡನೇ ಸಭೆ ನಡೆಸಲಾಗಿದೆ. ಬಗರ್ ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಆಪ್ ಬಿಡುಗಡೆ ಮಾಡಿದ್ದು ಎಲ್ಲವೂ ಡಿಜಿಟಲೀಕರಣವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ರೈತಾಪಿ ಜನರ ಬಹ ನಿರೀಕ್ಷಿತ ದರಕಾಸು ಸಮಿತಿ ಸಭೆ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು.

ಕಳೆದೊಂದು ದಶಕದಿಂದ ತಾಲೂಕಿನ ಬಗರ್ ಹುಕುಂ ಸಾಗುವಳಿದಾರರು ತಾವು ಅನುಭವದಲ್ಲಿರುವ ಸರ್ಕಾರಿ ಭೂಮಿ ಸಕ್ರಮ ಮಂಜೂರಾತಿಗಾಗಿ ಸರ್ಕಾರಕ್ಕೆ ಅರ್ಜಿ ಸಲಿಸಿದ್ದು ದರಕಾಸು ಸಮಿತಿ ಸಭೆಗಾಗಿ ಕಾಯುತ್ತಿದ್ದರು.

ತಾಲೂಕಿನಲ್ಲಿ 3616 ಬಗರ್ ಹುಕುಂ ಅರ್ಜಿಗಳು ವಿಲೇಗಾಗಿ ಕಾಯುತ್ತಿದ್ದು ಶಾಸಕರ ನೇತೃತ್ವದಲ್ಲಿ ನಡೆದ ಎರಡನೇ ದರಕಾಸು ಸಮಿತಿ ಸಭೆಯಲ್ಲಿ ಮೊದಲು ನ್ಯಾಯಾಲಯದಿಂದ ಆದೇಶಗೊಂಡಿರುವ ಅರ್ಜಿಗಳ ಪರಿಶೀಲನೆ ನಡೆಯಿತು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ದರಕಾಸು ಸಮಿತಿ ಸದಸ್ಯರಾದ ಬಿ.ಎಲ್.ದೇವರಾಜು, ಬಸ್ತಿ ರಂಗಪ್ಪ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಸಭೆಯಲ್ಲಿದ್ದು ಅರ್ಜಿಗಳ ಪರಿಶೀಲನಾ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್.ಟಿ.ಮಂಜು, ನಾನು ಶಾಸಕನಾದ ನಂತರ ದರಕಾಸು ಸಮಿತಿ ಎರಡನೇ ಸಭೆ ನಡೆಸಲಾಗಿದೆ. ಬಗರ್ ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಆಪ್ ಬಿಡುಗಡೆ ಮಾಡಿದ್ದು ಎಲ್ಲವೂ ಡಿಜಿಟಲೀಕರಣವಾಗಿದೆ ಎಂದರು.

ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಹೊಸ ಆಪ್‌ನಲ್ಲಿ ನೋಂದಾಯಿಸಿಕೊಂಡಿದ್ದು ನಿಯಮಾನುಸಾರ ಸಭೆ ನಡೆಸಲಾಗಿದೆ. ನ್ಯಾಯಾಲಯದ ಪ್ರಕರಣಗಳನ್ನು ಮೊದಲು ಪರಿಶೀಲಿಸಲಾಗಿದೆ. ರಾಸುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಜಾಗಗಳನ್ನು ಮೀಸಲಿಡಬೇಕಾಗಿದೆ. ಆದರೆ, ಕೆಲವು ಗ್ರಾಮಗಳಲ್ಲಿ ರಾಸುಗಳ ಸಂಖ್ಯೆಯ ಅಂಕಿ-ಅಂಶಗಳ ಕೊರತೆಯಿದ್ದು ಮರು ಪರಿಶೀಲನೆ ಮಾಡಬೇಕಾಗಿದೆ ಎಂದರು.

ಗೋಮಾಳಕ್ಕೆ ಸಂಬಂಧಿಸಿದಂತೆ ತಿಂಗಳಲ್ಲಿ ಎರಡು ಮೂರು ಸಭೆ ನಡೆಸಿ ಬಗರ್ ಹುಕುಂ ಸಾಗುವಳಿದಾರರ ಹಿತರಕ್ಷಣೆಗೆ ತೀರ್ಮಾನಿಸಲಾಗಿದೆ. ಇದಕ್ಕೆ ಸದಸ್ಯರ ಸಹಕಾರವೂ ಇದೆ. ಸಣ್ಣಪುಟ್ಟ ಕಾರಣಗಳನ್ನು ಮುಂದೊಡ್ಡಿ ಯಾವುದೇ ಅರ್ಜಿಗಳನ್ನು ವಜಾ ಮಾಡದೆ ಪುನರ್ ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ ಎಂದರು.

ನಮೂನೆ 50ರ ಅಡಿ ಮಂಜೂರಾತಿಗಾಗಿ 60-70 ಅರ್ಜಿಗಳು ಬಂದಿವೆ. ಇವೆಲ್ಲವನ್ನೂ ಕ್ರೋಢೀಕರಿಸಲು ಸೂಚಿಸಲಾಗಿದೆ. ಅದೇ ರೀತಿ ನಮೂನೆ 53 ಮತ್ತು 57 ರ ಅಡಿಯಲ್ಲಿಯೂ ಸಾಕಷ್ಟು ಅರ್ಜಿಗಳು ಸಮಿತಿ ಮುಂದೆ ಬಂದಿವೆ. ಎಲ್ಲಾ ಅರ್ಜಿಗಳನ್ನು ರೈತರ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪರಿಶೀಲಿಸಿ ಗರಿಷ್ಠ ಪ್ರಮಾಣದಲ್ಲಿ ಕ್ಲಿಯರ್ ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.