ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ರಾಜ್ಯದ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ರಾಜ್ಯದ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು. ರಾಜ್ಯದ ೧,೨೮೧ ಶಾಲೆ-ಕಾಲೇಜುಗಳ ೧,೩೧,೦೩೯ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಆನ್‌ಲೈನ್ ಮೂಲಕ ಮಾಹಿತಿ ಪಡೆದರು.‘‘ಯುವ ಜನತೆ ನಮ್ಮ ದೇಶದ ಆಸ್ತಿ. ಅವರು ದುಶ್ಚಟಗಳ ಮೊರೆ ಹೋಗದಂತೆ ಜಾಗ್ರತೆ ವಹಿಸಬೇಕಾದ ಅಗತ್ಯ ಇಂದು ನಮ್ಮೆದುರಿಗಿದೆ. ಪಂಚೇಂದ್ರಿಯಗಳು ಆಕರ್ಷಿಸುತ್ತವೆ. ಆದರೆ ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದ ಕರ್ತವ್ಯ ನಮ್ಮದು. ಪ್ರಜ್ಞಾಪೂರ್ವಕವಾಗಿ ತಪ್ಪುಗಳಾಗದಂತೆ ಜಾಗೃತೆ ವಹಿಸಬೇಕು. ದುಶ್ಚಟಗಳು ನಮ್ಮ ಬದುಕನ್ನು ಹಾಳು ಮಾಡುತ್ತವೆ. ಕೆಟ್ಟದ್ದನ್ನು ತಿರಸ್ಕರಿಸುವ ಮನೋಭಾವ ನಮ್ಮಲ್ಲಿರಬೇಕು. ದುಶ್ಚಟಗಳಿಂದ ದೂರವಿದ್ದರೆ ಸುಂದರ ಬದುಕು ನಮ್ಮೆದುರಿಗಿದೆ. ಇವುಗಳು ತನ್ನನ್ನು ಮಾತ್ರ ಕೆಡಿಸುವುದಲ್ಲದೆ ಸಮಾಜವನ್ನೇ ಕೆಡಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದಾರಿ ತಪ್ಪದೆ ಸದಾ ಎಚ್ಚರಿಕೆಯಿಂದಿರಬೇಕು’’ ಎಂದು ಡಾ. ಹೆಗ್ಗಡೆ ಅವರು ಮಾರ್ಗದರ್ಶನ ನೀಡಿದರು.

ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ‘ಯುವ ಜನತೆ ಮತ್ತು ವಿದ್ಯಾರ್ಥಿಗಳನ್ನು ಮಾದಕ ವ್ಯಸನಗಳಿಂದ ದೂರವಿರಿಸುವ ಪ್ರಯತ್ನಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಮಾಡುತ್ತಾ ಬಂದಿದೆ. ಮದ್ಯಮುಕ್ತ ಸಮಾಜದ ನಿರ್ಮಾಣದ ಪ್ರಯತ್ನ ಆಂದೋಲನದ ರೀತಿಯಲ್ಲಿ ನಡೆಯುತ್ತಿದೆ. ಮಾದಕ ವ್ಯಸನದಲ್ಲಿ ನಮ್ಮ ದೇಶ ಬಹಳ ಮುಂದಿದೆ. ಜೀವನದಲ್ಲಿ ಎಂದಿಗೂ ಮೌಲ್ಯ ಮತ್ತು ನೈತಿಕತೆಯನ್ನು ಕಳೆದುಕೊಳ್ಳಬಾರದು. ನಾವು ನಮ್ಮಲ್ಲಿರುವ ದೌರ್ಬಲ್ಯಗಳಿಂದ ಬದುಕನ್ನು ಹಾಳುಗೆಡವಬಾರದು. ನಾವು ಜಾಗೃತರಾಗಿ ವಿದ್ಯಾವಂತರಾಗಿ, ಇತರರಿಗೆ ಮಾರ್ಗದರ್ಶಕರಾಗಿ ಬದುಕಬೇಕು. ಮಾದಕವಸ್ತು ವ್ಯಕ್ತಿ ಮತ್ತು ಸಮಾಜಕ್ಕೆ ನೋವನ್ನು ನೀಡುತ್ತದೆ. ನಾವು ಬದುಕಿರುವಷ್ಟು ದಿನ ಸುತ್ತಮುತ್ತಲಿನವರಿಗೆ ಬೆಳಕನ್ನು ನೀಡಬೇಕು. ಬೆಳಕು ನೀಡುವ ಶಕ್ತಿ ಇಂದಿನ ಯುವಕರಲ್ಲಿದೆ. ಅದನ್ನರಿತು ಈ ಸಮಾಜವನ್ನು ಮುನ್ನಡೆಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷ, ಭಾರತದ ಪ್ರಸಿದ್ಧ ಹೃದಯ ಚಿಕಿತ್ಸಕ ಡಾ. ದೇವಿಪ್ರಸಾದ್ ಶೆಟ್ಟಿ ಅವರು ‘ಯುವ ಸಮುದಾಯ ತಮ್ಮ ಜಾಗೃತ ಮನಸ್ಸನ್ನು ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉಪಯೋಗಿಸಬೇಕು. ಅವರು ಯಾವುದೇ ಮಾದಕ ವ್ಯಸನಕ್ಕೆ ಬಲಿಯಾಗದೆ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಜನಸೇವೆ, ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಈ ಸಮಾಜವನ್ನು ಕಾಪಾಡಬೇಕು ಎಂದು ಮಾರ್ಗದರ್ಶನ ನೀಡಿದರು.

ಬೆಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಎನ್. ವೆಂಕಟೇಶ ಪ್ರಸನ್ನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾದಕ ವಸ್ತುಗಳ ಬಳಕೆ, ದುರ್ಬಳಕೆ, ದುಷ್ಪರಿಣಾಮಗಳು, ಎದುರಿಸಬೇಕಾದ ಕಾನೂನು ಕ್ರಮ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು.

ಇದುವರೆಗೆ ಜನಜಾಗೃತಿ ವೇದಿಕೆ ಮೂಲಕ ಸುಮಾರು ೨೪,೫೦೦ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಆಯೋಜಿಸಿ ೨೧ ಲಕ್ಷ ವಿದ್ಯಾರ್ಥಿಗಳಲ್ಲಿ ದುಶ್ಚಟದ ವಿರುದ್ಧ ಜಾಗೃತಿ ಮೂಡಿಸಲಾಗಿದೆ. ಈ ನಿಟ್ಟಿನಲ್ಲಿ ೧೩೦೦ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತುದಾರರ ತರಬೇತಿಯನ್ನು ನೀಡಲಾಗಿದೆ.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಅವರ ವಿನೂತನ ಚಿಂತನೆ ಮತ್ತು ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ರ ಅವರು ಸ್ವಾಗತಿಸಿದರು. ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ, ಪ್ರಾದೇಶಿಕ ನಿರ್ದೇಕರಾದ ಡಿ. ಜಯರಾಮ್ ಉಪಸ್ಥಿತರಿದ್ದರು.