ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಪಟ್ಟಣದ ಹಜರತ್ ಸೈಯ್ಯದ್ ಮುರ್ತುಜಾ ಷಾ ಖಾದ್ರಿ ದರ್ಗಾದ ಆಸ್ತಿಯು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆಸ್ತಿಯಾಗಿದ್ದು, ಇದರ ಸಂಪೂರ್ಣ ರಕ್ಷಣೆಯ ಹೊಣೆ ಮಂಡಳಿಯದ್ದಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಮಹಬೂಬ ಸರಕಾವಸ ತಿಳಿಸಿದರು.ದರ್ಗಾ ವ್ಯಾಪ್ತಿಯ ಆಸ್ತಿಯನ್ನು ಸಾರ್ವಜನಿಕರ ದೂರಿನ ಮೇರೆಗೆ ಪರಿಶೀಲನೆ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಗಾದ ಆಡಳಿತ ನೋಡಿಕೊಳ್ಳಲು ಇಳಕಲ್ಲ ತಹಸೀಲ್ದಾರರನ್ನು ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದು, ಅವರು ಪ್ರಾಮಾಣಿಕವಾಗಿ ತಮ್ಮ ಕೆಲಸ ನಿಭಾಯಿಸುತ್ತಿದ್ದಾರೆ. ಆದರೆ ಸಾರ್ವಜನಿಕರು ದರ್ಗಾದಲ್ಲಿ ಧ್ವನಿವರ್ಧಕ, ಯುಪಿಎಸ್ ನಿಂತು ಹೊದ ಬಗ್ಗೆ ಮತ್ತು ದರ್ಗಾ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವ ಹಾಗೂ ಸಿ.ಸಿ. ಕ್ಯಾಮೆರಾ ಅಳವಡಿಕೆ, ಶೌಚಾಯಲಕ ದುರಸ್ತಿ ಬಗ್ಗೆ ದೂರಿದ್ದರಿಂದ ಅಲ್ಲಯ ನೈಜ ವರದಿ ಪರಿಶೀಲನೆಗೆ ಬಂದಿದ್ದು, ಪರಿಶೀಲನಾ ವರದಿ ಸಿದ್ಧಪಡಿಸಿ ಆಡಳಿತಾಧಿಕಾರಿಗೆ ನೀಡುತ್ತೇನೆ ಎಂದು ಹೇಳಿದರು.
ಸ್ಥಳದಲ್ಲೇ ನಗರ ಸಭೆ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ದರ್ಗಾ ಆವರಣದಲ್ಲಿನ ಗಲೀಜನ್ನು ಸ್ವಚ್ಛಗೊಳಿಸಲು ಮನವಿ ಮಾಡಿದರು.ದರ್ಗಾದ ೧೭ ಎಕರೆ ಪ್ರದೇಶದಲ್ಲಿನ ಅರ್ಧಕ್ಕೆ ನಿಂತಿರುವ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಅಕ್ರಮವಾಗಿ ಹಾಕಿಕೊಂಡಿರುವ ತಗಡಿನ ಶೆಡ್‌ಗಳ ಸ್ಥಳ ಪರಿಶೀಲನೆ ಮಾಡಿದ್ದು, ಇದೆಲ್ಲದರ ಮಾಹಿತಿ ಲಿಖಿತವಾಗಿ ಆಡಳಿತಾಧಿಕಾರಿಗಳಿಗೆ ನೀಡುತ್ತೇನೆ ಮತ್ತು ಅಕ್ರಮ ಶೆಡ್ ಗಳ ಸ್ಥಳಾಂತರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದ ಅವರು, ಪಶ್ಚಿಮ ಭಾಗದ ಬಿನ್‌ಶೆತ್ಕಿ ಪ್ಲಾಟುಗಳ ಮಾಲೀಕರು ದರ್ಗಾ ಆಸ್ತಿ ಅತಿಕ್ರಮಣ ಮಾಡಿದಂತೆ ಕಂಡುಬರುತ್ತಿದ್ದು, ಈ ಕೂಡಲೇ ಒತ್ತುವರಿ ತೆರುವುಗೊಳಿಸಿ ಕ್ರಮಕೈಗೊಳ್ಳಲು ಹಾಗೂ ಸಂಪೂರ್ಣ ಜಾಗದ ಸರ್ವೆ ಕಾರ್ಯ ಕೈಗೊಂಡು ಗಡಿ ಗುರ್ತಿಸಿ ವಕ್ಫ್ ಮಂಡಳಿಯಿಂದ ಮಂಜೂರಾಗಿರುವ ₹ ೨೦ ಲಕ್ಷ ಅನುದಾನದಲ್ಲಿ ಕಾಂಪೌಂಡ್ ನಿರ್ಮಿಸುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಸರಕಾವಸ ಹೇಳಿದರು.
ಈ ಸಂಧರ್ಭದಲ್ಲಿ ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ರಜಾಕ್ ತಟಗಾರ, ಕೆ.ಎಂ.ಯು. ರಾಜ್ಯಾಧ್ಯಕ್ಷ ಜಬ್ಬಾರ್ ಕಲಬುರ್ಗಿ, ರಾಜ್ಯ ನದಾಫ್ ಪಿಂಜಾರ ಸಂಘದ ಕಾರ್ಯದರ್ಶಿ ಲಾಲಸಾಬ ನದಾಫ್, ಹೋರಾಟಗಾರ ರಿಯಾಜ್ ಭನ್ನು, ರಫೀಕ್ ನದಾಫ್, ಇಮಾಮಹುಸೇನ್ ಲಟಗೇರಿ, ಅಜೀಜ್ ಜಮಾದಾರ, ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ಹಾಜಿ ನಿಯಾಜ್ ಅಹ್ಮದ ಹಾಜಿ ಎಂ.ವಿ. ಬೀಳಗಿ, ಶಾಮಿದ್ ರೇಶ್ಮಿ, ಜಾಫರ್ ಸಾರ್ಕ್ ಗಡಾದ, ಶೋಯೇಬ್ ಛಾವಣಿ, ಬಬ್ಲೂ ಬಾಗವಾನ, ಫಾರೂಕ್ ಯತ್ನಟ್ಟಿ, ರಫೀಕ್ ನೋಬೆಲ್ ಸೇರಿ ಹಲವರು ಇದ್ದರು.