ಸಾರಾಂಶ
ಬಳ್ಳಾರಿ: ರಾಜ್ಯ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು 2018ರ ಹಿಂದಿನ ಶಾಲೆಗಳಿಗೆ ಅನ್ವಯಿಸಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಆ. 15ರಂದು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಕರಾಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎನ್. ಮರಿಸ್ವಾಮಿ ರೆಡ್ಡಿ ಹಾಗೂ ಕಾರ್ಯದರ್ಶಿ ಎಸ್.ಕೆ. ರಿಯಾಜ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ರಾಜ್ಯ ಸರ್ಕಾರ ದಿನಕ್ಕೊಂದು ಶಿಕ್ಷಣ ನೀತಿ ಜಾರಿಗೊಳಿಸಿ ಆದೇಶ ಹೊರಡಿಸುತ್ತಿದೆ. ಇದರಿಂದ ಖಾಸಗಿ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಶಿಕ್ಷಣ ಇಲಾಖೆಯ ಜೊತೆಗೆ ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ, ಕಂದಾಯ, ಮಕ್ಕಳ ಹಕ್ಕು ಆಯೋಗ, ಪೊಲೀಸ್ ಇಲಾಖೆಗಳಿಗೆ ಒಂದಿಲ್ಲೊಂದು ದಾಖಲೆಗಳನ್ನು ನೀಡುವುದೇ ಕೆಲಸವಾಗಿಬಿಟ್ಟಿದೆ. ಈ ಇಲಾಖೆಗಳಿಂದ ಶಿಕ್ಷಣ ಸಂಸ್ಥೆಗಳಿಗೆ ನೆಮ್ಮದಿ ಇಲ್ಲವಾಗಿದೆ ಎಂದು ದೂರಿದರು.ಹಳೆಯ ಶಾಲೆಗಳೂ ನಿವೇಶನದ ಭೂ ಪರಿವರ್ತನೆ ಮಾಡಿಸಬೇಕು. ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಂದಾಯ, ಅಗ್ನಿಶಾಮಕ, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದು ಪ್ರತಿವರ್ಷ ನವೀಕರಣ ಮಾಡಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ನವೀಕರಣಕ್ಕಾಗಿ ವರ್ಷಕ್ಕೆ ಲಕ್ಷಾಂತರ ರು. ಹಣ ಖರ್ಚಾಗುತ್ತದೆ. ನವೀಕರಣಕ್ಕಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಣದ ಬೇಡಿಕೆ ಇಡುತ್ತಿದ್ದಾರೆ. ನಿರಾಕರಿಸಿದರೆ ನಾನಾ ಕಾರಣವೊಡ್ಡಿ ತಿರಸ್ಕರಿಸಲಾಗುತ್ತದೆ ಎಂದು ಆಪಾದಿಸಿದರಲ್ಲದೆ, ಹಳೆಯ ಶಾಲೆಗಳಿಗೂ ಜಾರಿಗೊಳಿಸಿರುವ ಶಿಕ್ಷಣ ಇಲಾಖೆಯ ಹೊಸ ನೀತಿಯಿಂದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ರು. ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟಂತಾಗಿದೆ ಎಂದು ಆಪಾದಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಯಬೇಕು ಎಂದು ಒತ್ತಾಯಿಸಿ ಒಕ್ಕೂಟದಿಂದ ಈಗಾಗಲೇ ಅನೇಕ ಬಾರಿ ಹೋರಾಟಗಳನ್ನು ನಡೆಸಿ, ಮುಖ್ಯಮಂತ್ರಿಗೂ ಮನವಿ ನೀಡಲಾಗಿದೆ. ಆದರೆ, ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಮತಗಳನ್ನು ಪಡೆದು ಜನಪ್ರತಿನಿಧಿಗಳಾದವರು ಖಾಸಗಿ ಶಾಲೆಗಳ ಪರ ಧ್ವನಿ ಎತ್ತಿಲ್ಲ. ಹೀಗಾಗಿ, ಆ. 15ರಂದು ಕರಾಳ ದಿನ ಆಚರಣೆಗೆ ನಿರ್ಧರಿಸಲಾಗಿದೆ. ಅಂದು ಖಾಸಗಿ ಶಾಲೆಗಳ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಲಿದ್ದಾರೆ. ನಗರದ ಎನ್‌ಸಿಸಿ ಮೈದಾನದ ಬಳಿ ಪ್ರತಿಭಟನೆ ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಒಕ್ಕೂಟದ ಮುಖಂಡರಾದ ಪಿ. ರಂಜಾನ್, ರಂಗಸ್ವಾಮಿ, ಮರ್ಚೇಡ್ ಮಲ್ಲಿಕಾರ್ಜುನ, ಎಂ. ಹನುಮಂತಪ್ಪ, ಕೆ.ಪರಮೇಶ್ವರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.