ಕನ್ನಡ ಮಾತಾಡು ಎಂದ ಪಿಡಿಒ ಮೇಲೆ ದರ್ಪ

| Published : Mar 13 2025, 12:51 AM IST

ಸಾರಾಂಶ

ಕನ್ನಡದಲ್ಲಿ ಮಾತನಾಡಲು ಹೇಳಿದ್ದಕ್ಕೆ ಮರಾಠಿ ಯುವಕರು ಬಸ್ ಕಂಡಕ್ಟರ್‌ ತಳಿಸಿದ ಘಟನೆ ಮಾಸುವ ಮುನ್ನವೇ ಮತ್ತೆ ಅಂಥದೆ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮ ಪಂಚಾಯಿತಿ ಪಿಡಿಒ ನಾಗೇಂದ್ರ ಪತ್ತಾರ ಕನ್ನಡದಲ್ಲಿ ಮಾತನಾಡಲು ಹೇಳಿದ್ದಕ್ಕೆ ಬುಧವಾರ ಮರಾಠಿ ಯುವಕನೊಬ್ಬ ಗೂಂಡಾಗಿರಿ ಪ್ರದರ್ಶಿಸಿ, ಬೆದರಿಕೆ ಹಾಕಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮದ್ಯದ ಅಮಲಿನಲ್ಲಿ ಸರ್ಕಾರಿ ಕಚೇರಿಗೆ ಬಂದ ತಿಪ್ಪಣ್ಣ ಡೊಕ್ರೆ ಮರಾಠಿ ಭಾಷೆಯಲ್ಲೇ ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾಗೇಂದ್ರ ಪತ್ತಾರ ಮೇಲೆ ದರ್ಪ ತೋರಿದ್ದಲ್ಲದೆ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ತಿಮ್ಮಣ್ಣ ಬೆದರಿಕೆ ಹಾಕಿದ್ದಾನೆ. ನಾಗೇಂದ್ರ ಪತ್ತಾರ ಮೇಲೆ ಮರಾಠಿ ಯುವಕ ದರ್ಪ ಮೆರೆದು ಉದ್ದಟತನ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ, ವಿಷಯ ತಿಳಿಯುತ್ತಿದ್ದಂತೆಯೇ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಕಿತ್ತೂರು ಕರ್ನಾಟಕ ಸೇನೆ ತೀವ್ರವಾಗಿ ಖಂಡಿಸಿ ಎಚ್ಚರಿಕೆ ನೀಡಿದವು. ಎಚ್ಚೆತ್ತುಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಕೂಡಲೇ ಆರೋಪಿ ಬಂಧಿಸಿ, ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಮರಾಠಿ ಪುಂಡರು ಸರ್ಕಾರಿ ಅಧಿಕಾರಿಗಳಿಗೆ ರಾಜಾರೋಷವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಶಾಂತಿ ಕದಡುವ ಕೆಲಸವನ್ನು ಎಂಇಎಸ್ ಪುಂಡರು ಮಾಡುತ್ತಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆಕ್ರೋಶ ಹೊರಹಾಕಿದರು.

ನಾಡದ್ರೋಹಿ ಎಂಇಎಸ್‌ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಆಗ್ರಹಿಸಿದರು.