ದರ್ಶನ ನಟನೆಯೇ ಬೇರೆ, ವರ್ತನೆಯೇ ಬೇರೆ: ಮತಾಲಿಕ್‌

| Published : Jun 13 2024, 12:47 AM IST

ಸಾರಾಂಶ

ಕೊಲೆ ಪ್ರಕರಣ ಗಮನಿಸಿದರೆ ದರ್ಶನ ವರ್ತನೆ ತಪ್ಪು. ಕರ್ನಾಟಕ ಪೊಲೀಸರು ಈ ಕುರಿತು ಕ್ರಮ ಕೈಗೊಂಡಿದ್ದಾರೆ. ಅಭಿಮಾನಿಗಳ ಅಭಿಮಾನವು ನಟರ ಅಭಿನಯಕ್ಕೆ ಮಾತ್ರ ಇರಬೇಕು.

ಧಾರವಾಡ:

ದರ್ಶನ್ ಒಬ್ಬ ಶ್ರೇಷ್ಠ ನಟ. ಅವರ ನಟನೆಗೆ ನನ್ನ ಸೆಲ್ಯೂಟ್ ಇದೆ. ಅವರೊಂದಿಗೆ ನಾನು ಒಂದೇ ವೇದಿಕೆಯಲ್ಲಿ ಕುಳಿತು ಸಂಗೊಳ್ಳಿ ರಾಯಣ್ಣ ಸಿನಿಮಾ ನೋಡಿದ್ದೇನೆ. ಆದರೆ, ಈಗ ನಡೆದಿರುವ ಘಟನೆ ಅತ್ಯಂತ ಅಮಾನುಷ. ಇಂತಹ ಘಟನೆ ನಿರೀಕ್ಷಿಸಿರಲಿಲ್ಲ. ಅವರ ನಟನೆಯೇ ಬೇರೆ, ನಿಜ ಜೀವನದ ವರ್ತನೆಯೇ ಬೇರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೊಲೆ ಪ್ರಕರಣ ಗಮನಿಸಿದರೆ ದರ್ಶನ ವರ್ತನೆ ತಪ್ಪು. ಕರ್ನಾಟಕ ಪೊಲೀಸರು ಈ ಕುರಿತು ಕ್ರಮ ಕೈಗೊಂಡಿದ್ದಾರೆ. ಅಭಿಮಾನಿಗಳ ಅಭಿಮಾನವು ನಟರ ಅಭಿನಯಕ್ಕೆ ಮಾತ್ರ ಇರಬೇಕು. ನಟರ ಭಯಾನಕ ಹಾಗೂ ಅಮಾನುಷ ವರ್ತನೆಗೆ ಬೆಂಬಲ ನೀಡಬಾರದು. ಮುಂದಿನ ದಿನಗಳಲ್ಲಿ ನಟರ ಅಭಿಮಾನಿಗಳು ಇದನ್ನು ಗಮನಿಸಬೇಕು ಎಂದರು.

ಬ್ಯಾನ್‌ ಮಾಡಲಿ:

ಇನ್ನು, ನಟ ದರ್ಶನರನ್ನು ಸಿನಿಮಾ ಮಂಡಳಿಯಿಂದ ಶಾಶ್ವತವಾಗಿ ಹೊರಗಿಡಬೇಕು. ಸಿನಿಮಾದಲ್ಲಿ ಹಿರೋ ಎನಿಸಿಕೊಂಡ ದರ್ಶನ ಸಮಾಜಕ್ಕೆ ಆದರ್ಶಪ್ರಾಯರಾಗಬೇಕಿತ್ತು. ಆದರೆ, ಕೊಲೆಗೆ ಕುಮ್ಮಕ್ಕು ನೀಡಿ ಸಮಾಜಕ್ಕೆ ಕಂಟಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಮಂಡಳಿಯು ಅವರನ್ನು ಬ್ಯಾನ್‌ ಮಾಡಬೇಕು. ಇಲ್ಲದೇ ಹೋದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಕಪ್ಪು ಚುಕ್ಕೆ ಬಂದಂತಾಗುತ್ತದೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಲ್. ಹಗೇದಾರ ಆಗ್ರಹಿಸಿದ್ದಾರೆ.