ರಾಮನಗರ: ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿಯೇ ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ನಂಜನಗೂಡು ಕ್ಷೇತ್ರ ಶಾಸಕ ದರ್ಶನ್ ಧ್ರುವ ನಾರಾಯಣ್ ಅವರು ‘ಮಂತ್ರ ಮಾಂಗಲ್ಯ’ ಪದ್ಧತಿ ಮೂಲಕ ಡಾ. ಶ್ರೀನಿಧಿ ಅವರನ್ನು ವಿವಾಹವಾಗಿ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ರಾಮನಗರ: ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿಯೇ ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ನಂಜನಗೂಡು ಕ್ಷೇತ್ರ ಶಾಸಕ ದರ್ಶನ್ ಧ್ರುವ ನಾರಾಯಣ್ ಅವರು ‘ಮಂತ್ರ ಮಾಂಗಲ್ಯ’ ಪದ್ಧತಿ ಮೂಲಕ ಡಾ. ಶ್ರೀನಿಧಿ ಅವರನ್ನು ವಿವಾಹವಾಗಿ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರಾಮನಗರ ಹೊರವಲಯದಲ್ಲಿರುವ ಜಾನಪದ ಲೋಕದ ದೊಡ್ಡಮನೆಯಲ್ಲಿ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ ಮತ್ತು ಪ್ರೊ.ನರಸಿಂಹಮೂರ್ತಿ ಅವರು ದರ್ಶನ್ ಮತ್ತು ಶ್ರೀನಿಧಿ ಜೋಡಿಗೆ ಮಂತ್ರ ಮಾಂಗಲ್ಯದ ಪ್ರತಿಜ್ಞಾ ವಿಧಿ ಬೋಧಿಸಿ ಮದುವೆ ನೆರವೇರಿಸಿಕೊಟ್ಟರು. ಆನಂತರ ಬಯಲು ರಂಗ ಮಂದಿರದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು.

ಅದ್ಧೂರಿ ಆಡಂಬರ ಮತ್ತು ಕೃತಕ ಆಚರಣೆಗಳನ್ನು ನಿರಾಕರಿಸಿ ದರ್ಶನ್ ಧ್ರುವ ನಾರಾಯಣ್ ರವರು ಡಾ.ಶ್ರೀನಿಧಿ ಅವರೊಂದಿಗೆ ಸರಳ ಮಂತ್ರ ಮಾಂಗಲ್ಯ ಮೂಲಕ ಹೊಸ ಬದುಕಿಗೆ ಕಾಲಿಡುವ ಮೂಲಕ ಜೆನ್ ಜಿ ತಲೆ ಮಾರಿಗೆ ಆದರ್ಶರಾದರು.

ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ದಂಪತಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಈ ವೇಳೆ ದರ್ಶನ್ ಮತ್ತು ಶ್ರೀನಿಧಿರವರು ಡಿ.ಕೆ.ಶಿವಕುಮಾರ್ ರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ಸರಳತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾದ ಮಂತ್ರ ಮಾಂಗಲ್ಯದ ಮೂಲಕ ದರ್ಶನ್ ರವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನವಜೋಡಿಯ ಬಾಳ ಪಯಣದ ಪ್ರತಿ ಹೆಜ್ಜೆಯೂ ಸಂತಸ, ಸೌಹಾರ್ದ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಈ ವೇಳೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ, ರಿಜ್ವಾನ್ ಅರ್ಷದ್ , ಸಮಾಜ ಕಲ್ಯಾಣ ಇಲಾಖೆ ಸಚಿವ ಆರ್. ಮುನಿಯಪ್ಪ , ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸೇರಿದಂತೆ ಸಚಿವ ಸಂಪುಟದ ಕೆಲ ಸಚಿವರು, ಶಾಸಕರು, ಗಣ್ಯರು ಹಾಗೂ ಎರಡೂ ಕುಟುಂಬದ ಆಪ್ತರು ಪಾಲ್ಗೊಂಡು ನವ ದಂಪತಿಗೆ ಶುಭ ಹಾರೈಸಿದರು.

ಸರಳ ವಿವಾಹವಾಗಿದ್ದರೂ ಗಣ್ಯಾತಿ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಜಾನಪದ ಲೋಕದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಮಾತ್ರ ಮದುವೆ ಶಾಸ್ತ್ರದಲ್ಲಿ ಭಾಗಿಯಾಗಿದ್ದರು.

ಮದುವೆ ಆರತಕ್ಷತೆ ಮತ್ತು ಬೀಗರ ಔತಣ ದರ್ಶನ ಅವರ ಸ್ವಗ್ರಾಮವಾದ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನ.29ರಂದು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

26ಕೆಆರ್ ಎಂಎನ್ 2,3,4.ಜೆಪಿಜಿ

2.ಶಾಸಕ ದರ್ಶನ್ ಮತ್ತು ಶ್ರೀನಿಧಿ ದಂಪತಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಹೂಗುಚ್ಛ ನೀಡಿ ಶುಭ ಹಾರೈಸಿದರು.

3.ಶಾಸಕ ದರ್ಶನ್ ಮತ್ತು ಶ್ರೀನಿಧಿ ದಂಪತಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಶುಭ ಹಾರೈಸಿದರು.

4.ಶಾಸಕ ದರ್ಶನ್ ಮತ್ತು ಶ್ರೀನಿಧಿ ದಂಪತಿಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಶುಭು ಹಾರೈಸಿದರು.