ದರ್ಶನ್‌ ಬಚಾವ್ ಮಾಡಲು ನಾಲ್ವರಿಗೆ ₹30 ಲಕ್ಷ ಡೀಲ್‌!

| Published : Jun 13 2024, 01:45 AM IST / Updated: Jun 13 2024, 10:40 AM IST

ಸಾರಾಂಶ

ಪ್ರಿಯತಮೆ ಪವಿತ್ರಾ, ಆಪ್ತರಿಂದ ಮಾತುಕತೆ ನಡೆಸಿದ್ದು, ಇಬ್ಬರಿಗೆ 10 ಲಕ್ಷ ನಗದನ್ನೂ ಕೊಟ್ಟಿದ್ದ ಗ್ಯಾಂಗ್ ಪ್ರಕರಣದಲ್ಲಿ ದರ್ಶನ್‌ ಹೆಸರು ಹೇಳದಂತೆ ಸೂಚಿಸಿತ್ತು.

 ಬೆಂಗಳೂರು :  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಲನಚಿತ್ರ ರಂಗದ ‘ಚಾಲೆಂಜಿಂಗ್ ಸ್ಟಾರ್‌’ ದರ್ಶನ್ ಹೆಸರು ಹೇಳದೆ ಪೊಲೀಸರಿಗೆ ಶರಣಾಗುವಂತೆ ಆ ನಟನ ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಸೇರಿ ನಾಲ್ವರಿಗೆ 30 ಲಕ್ಷ ರು. ನೀಡಲು ದರ್ಶನ್ ಪ್ರಿಯತಮೆ ಹಾಗೂ ನಟನ ಆಪ್ತರು ಡೀಲ್‌ ನಡೆಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಈ ಹತ್ಯೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಮುಂದೆ ಸೋಮವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಗಿರಿನಗರ ಸಮೀಪದ ಚಾಮುಂಡಿ ನಗರದ ಕಾರ್ತಿಕ್ ಅಲಿಯಾಸ್ ಕಪ್ಪೆ, ಹೀರಣ್ಣನ ಗುಡ್ಡದ ಕೇಶವಮೂರ್ತಿ ಹಾಗೂ ಬನ್ನೇರುಘಟ್ಟ ರಸ್ತೆಯ ಕೆಂಬತ್ತನಹಳ್ಳಿಯ ನಿಖಿಲ್‌ ನಾಯಕ್‌ ಶರಣಾಗಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಈ ನಾಲ್ವರ ಪೈಕಿ ಕೇಶವಮೂರ್ತಿ ಮತ್ತು ನಿಖಿಲ್‌ಗೆ ತಲಾ 5 ಲಕ್ಷ ರು. ನಂತೆ 10 ಲಕ್ಷ ರು. ಹಣವನ್ನು ಕೊಟ್ಟಿದ್ದ ದರ್ಶನ್ ಆಪ್ತ ದೀಪಕ್‌, ಇನ್ನುಳಿದ ಇಬ್ಬರಿಗೆ ಜೈಲಿಗೆ ಹೋದ ನಂತರ ಹಣ ಕೊಡುವುದಾಗಿ ಹೇಳಿದ್ದ. ಈ ನಾಲ್ವರ ವಿಚಾರಣೆ ಬಳಿಕ 30 ಲಕ್ಷ ರು. ಡೀಲ್ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲದೆ ಇಬ್ಬರು ಆರೋಪಿಗಳಿಗೆ ದರ್ಶನ್‌ ಆಪ್ತರಿಂದ 10 ಲಕ್ಷ ರು. ಸಂದಾಯವಾಗಿರುವ ವಿಚಾರವನ್ನು ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಉಲ್ಲೇಖಿಸಿದ್ದಾರೆ. ಆರೋಪಿಗಳಿಂದ ಬುಧವಾರ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದರ್ಶನ್ ಹೆಸರು ಹೇಳಬೇಡಿ-ಪವಿತ್ರಾಗೌಡ:

ಮಾಗಡಿ ರಸ್ತೆ ಸುಮನಹಳ್ಳಿ ಮೇಲ್ಸೇತುವೆ ಸಮೀಪದ ರಾಜಕಾಲುವೆ ಬಳಿ ಪತ್ತೆಯಾದ ಅಪರಿಚಿತ ಮೃತದೇಹದ ತನಿಖೆ ನಡೆಸುತ್ತಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಎದುರು ಸೋಮವಾರ ರಾತ್ರಿ 7 ಗಂಟೆಗೆ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿ ಶರಣಾಗಿದ್ದರು. ತಾವುಗಳೇ ಕ್ಷುಲ್ಲಕ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ತಂದು ಅಪಾರ್ಟ್‌ಮೆಂಟ್‌ ಬಳಿ ಬಿಸಾಕಿರುವುದಾಗಿ ಆರೋಪಿಗಳು ತಿಳಿಸಿದ್ದರು. ನಂತರ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ತಮಗೆ ರೇಣುಕಾಸ್ವಾಮಿ ಕೊಲೆ ಮಾಡಿರುವ ಸಂಗತಿಯನ್ನು ರಾಜರಾಜೇಶ್ವರಿ ನಗರದ ಕೆಂಚೇನಹಳ್ಳಿ ರಸ್ತೆಯ ನಿವಾಸಿ ಪವಿತ್ರಾಗೌಡ ಹಾಗೂ ಆರ್‌ಪಿಸಿ ಲೇಔಟ್‌ನ ಲಕ್ಷ್ಮಣ್‌ ತಿಳಿಸಿದರು. ಆದರೆ ಈ ಕೊಲೆ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ದರ್ಶನ್‌ ಅವರ ಹೆಸರು ಪ್ರಸ್ತಾಪಿಸಬಾರದು ಎಂದು ಪವಿತ್ರಾಗೌಡ ಸೂಚಿಸಿದ್ದರು. ಬಳಿಕ ನಿಖಿಲ್ ಹಾಗೂ ಕೇಶವಮೂರ್ತಿ ಅವರುಗಳಿಗೆ ತಲಾ 5 ಲಕ್ಷ ರು. ಹಣವನ್ನು ದೀಪಕ್ ನೀಡಿದ್ದರು. ಇನ್ನುಳಿದ ರಾಘವೇಂದ್ರ ಹಾಗೂ ಕಾರ್ತಿಕ್‌ಗೆ ಜೈಲಿಗೆ ಹೋದ ನಂತರ ಕೊಡುವುದಾಗಿ ದೀಪಕ್ ತಿಳಿಸಿದ್ದರು ಎಂದು ಶರಣಾಗತಿಯಾಗಿದ್ದ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.

30 ಲಕ್ಷ ರು.ಗೆ ಪ್ರದೋಶ್ ಅಭಯ:

ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಾದ ಬಳಿಕ ಭೀತಿಗೊಂಡ ದರ್ಶನ್‌, ಮೃತದೇಹವನ್ನು ಯಾರಿಗೂ ತಿಳಿಯದೆ ಸಾಗಿಸುವಂತೆ ಸಹಚರರಿಗೆ ಸೂಚಿಸಿದ್ದರು. ಆಗ ದರ್ಶನ್‌ ಆಪ್ತ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮದ ಪವನ್‌, ತನಗೆ ಪರಿಚಿತವಿರುವ ಗಿರಿನಗರದ ಕಾರ್ತಿಕ್‌ ಅಲಿಯಾಸ್ ಕಪ್ಪೆ, ಕೇಶವಮೂರ್ತಿ ಹಾಗೂ ನಿಖಿಲ್ ನಾಯಕ್‌ನನ್ನು ಕರೆಸಿಕೊಂಡಿದ್ದ. ಆ ವೇಳೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಸಹ ಉಪಸ್ಥಿತನಿದ್ದ.

ಈ ನಾಲ್ವರಿಗೆ 30 ಲಕ್ಷ ರು. ನಗದು ಹಾಗೂ ಜೈಲು ಸೇರಿದ ಬಳಿಕ ಜಾಮೀನು ಪಡೆಯಲು ವಕೀಲರ ವೆಚ್ಚ ಭರಿಸುತ್ತೇವೆ ಎಂದು ದರ್ಶನ್ ಆಪ್ತ ಹೋಟೆಲ್ ಉದ್ಯಮಿ ಪ್ರದೋಶ್ ಅಭಯ ನೀಡಿದ್ದ. ಆಗ ಪವಿತ್ರಾಗೌಡ ಹಾಗೂ ದರ್ಶನ್ ಸಹಚರರಾದ ಪವನ್‌ ಮತ್ತು ದೀಪಕ್‌ ಸಹ, ಈ ಕೃತ್ಯದಲ್ಲಿ ಯಾವುದೇ ಕಾರಣಕ್ಕೂ ದರ್ಶನ್ ಹೆಸರು ಪ್ರಸ್ತಾಪವಾಗಬಾರದು ಎಂದಿದ್ದರು. ಅಂತೆಯೇ ನಾಲ್ವರ ಪೈಕಿ ಇಬ್ಬರಿಗೆ ದೀಪಕ್ ಮೂಲಕ ಹಣ ಸಂದಾಯವಾಗಿತ್ತು. ಶವ ಸಾಗಿಸಿ, ಶರಣಾಗಲು ಸೂಚಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಅಲ್ಲದೆ ದೀಪಕ್‌ಗೆ ಪ್ರದೋಶ್ ಹಣ ಕೊಟ್ಟಿದ್ದ. ಆ ಹಣವನ್ನು ಆರೋಪಿಗಳಿಗೆ ದೀಪಕ್ ಹಂಚಿದ್ದ. ಹಣ ಪಡೆದ ಬಳಿಕ ಮೃತದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ತಂದು ಸುಮನಹಳ್ಳಿ ಸಮೀಪದ ಮೋರಿಗೆ ಆರೋಪಿಗಳು ಎಸೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.