ಏನೋ ಆಗೋಯ್ತು ಸಾರ್‌ ಎಂದು ತನಿಖೆ ವೇಳೆ ದರ್ಶನ್‌ ಕಣ್ಣೀರು

| Published : Jun 15 2024, 01:04 AM IST / Updated: Jun 15 2024, 08:40 AM IST

ಸಾರಾಂಶ

ಪ್ರಶ್ನೆಗೆ ಉತ್ತರಿಸಲಾಗದೆ ದರ್ಶನ್‌ ಗದ್ಗದಿತರಾದರೆ ನಟಿ ಪವಿತ್ರಾ ಮಾತ್ರ ಮೊಂಡಾಟ ಮುಂದುವರೆಸಿದ್ದಾರೆ. ಇಬ್ಬರನ್ನೂ ಇಂದೇ ಕೋರ್ಟ್‌ಗೆ ಹಾಜರ್‌ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

 ಬೆಂಗಳೂರು :  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 13 ಮಂದಿ ಆರೋಪಿಗಳ ವಿಚಾರಣೆಯನ್ನು ನಾಲ್ಕನೇ ದಿನವಾದ ಶುಕ್ರವಾರ ಸಹ ಪೊಲೀಸರು ನಡೆಸಿದ್ದಾರೆ. ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ದರ್ಶನ್‌ ಗದ್ಗದಿತರಾಗುತ್ತಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ವಿಚಾರಿಸಿದಾಗ ‘ಏನೋ ಆಗ್ಹೋಯ್ತು ಸರ್‌...’ ಎಂದು ಕಣ್ತುಂಬಿಕೊಂಡಿದ್ದಾರೆ. ಆದರೆ ಪವಿತ್ರಾಗೌಡ ಮಾತ್ರ ಹಟಮಾರಿ ಧೋರಣೆ ತೋರುತ್ತಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಗ್ಯಾಂಗ್ ಅನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ವಿಚಾರಣೆಗೆ ಕೊಸರಾಡುತ್ತಿದ್ದ ಆರೋಪಿಗಳು ಬಳಿಕ ಕೃತ್ಯದಲ್ಲಿ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ ಎಂದು ಗೊತ್ತಾಗಿದೆ.

ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಪ್ರಶ್ನಿಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾದ ಪುರಾವೆಗಳನ್ನು ಕೂಡ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಖರಾ ಬಿಡದ ಪವಿತ್ರಾಗೌಡ:

ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ದರ್ಶನ್‌ ಪ್ರಿಯತಮೆ ಪವಿತ್ರಾಗೌಡ ಸ್ಪಂದಿಸದೆ ಹಟಮಾರಿತನ ತೋರಿಸಿದ್ದಾಳೆ ಎಂದು ತಿಳಿದು ಬಂದಿದೆ.

ಕೃತ್ಯದ ಕುರಿತು ಕೇಳುವ ಯಾವುದೇ ಪ್ರಶ್ನೆಗಳಿಗೆ ಆಕೆ ಸೂಕ್ತವಾಗಿ ಉತ್ತರಿಸುತ್ತಿಲ್ಲ. ಈ ಬಗ್ಗೆ ಹೆಚ್ಚಾಗಿ ಪ್ರಶ್ನಿಸಿದರೆ ತನಗೇನೂ ಗೊತ್ತಿಲ್ಲವೆಂದು ಪವಿತ್ರಾ ಹೇಳುತ್ತಿದ್ದಾಳೆ. ದರ್ಶನ್‌ ಸೇರಿದಂತೆ ಉಳಿದ ಎಲ್ಲ ಆರೋಪಿಗಳು ವಿಚಾರಣೆಗೆ ಸ್ಪಂದಿಸಿದರೆ ಆಕೆ ಮಾತ್ರ ಅಸಹಕಾರ ತೋರಿದ್ದಾಳೆ ಎಂದು ಮೂಲಗಳು ಹೇಳಿವೆ.

ಏನೋ ಆಗ್ಹೋಯ್ತು ಸರ್‌.. ಎಂದ ದರ್ಶನ್:

ಕೊಲೆ ಪ್ರಕರಣದಲ್ಲಿ ಬಂಧಿತನಾದ ಬಳಿಕ ದರ್ಶನ್‌ ಪಶ್ಚಾತ್ತಾಪದ ಬೇಗುದಿಯಲ್ಲಿ ಬೇಯುವಂತಾಗಿದೆ. ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತನಗೆ ಒದಗಿದ ಪರಿಸ್ಥಿತಿ ನೆನೆದು ಗದ್ಗದಿತರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣದ ಕುರಿತು ಹಿರಿಯ ಅಧಿಕಾರಿಯೊಬ್ಬರು ವಿಚಾರಿಸಿದಾಗ ‘ಏನೋ ಆಗ್ಹೋಯ್ತು ಸರ್’ ಎಂದು ಹೇಳಿ ದರ್ಶನ್ ಕಣ್ತುಂಬಿಕೊಂಡ ಸನ್ನಿವೇಶ ಜರುಗಿದೆ.

ಇಂದು ಕೋರ್ಟ್‌ಗೆ ಹಾಜರು ಸಾಧ್ಯತೆ?:

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಸೇರಿದಂತೆ 13 ಆರೋಪಿಗಳ ವಿಚಾರಣೆಯನ್ನು ಬಹುತೇಕ ಮುಗಿಸಿರುವ ಪೊಲೀಸರು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. ಪೊಲೀಸ್ ಕಸ್ಟಡಿ ಅವಧಿ ಮುಗಿಯಲು ಒಂದು ದಿನ ಮುಂಚಿತವಾಗಿಯೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

 ಬಚಾವಾಗಲು ₹30 ಲಕ್ಷ ಕೊಟ್ಟಿದ್ದು ಸ್ವತಃ ದರ್ಶನ್‌!ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಹೇಳದೆ ಪೊಲೀಸರಿಗೆ ಶರಣಾಗತಿಯಾಗುವ ನಾಲ್ವರು ಸಹಚರರಿಗೆ ನೀಡುವಂತೆ ಖುದ್ದು ನಟ ದರ್ಶನ್‌ ತಮ್ಮ ಮನೆಯಲ್ಲೇ 30 ಲಕ್ಷ ರು.ಗಳನ್ನು ನೀಡಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.