ಸಾರಾಂಶ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವುದನ್ನು ಬಿಂಬಿಸುವ ಫೋಟೋ ಮತ್ತು ವಿಡಿಯೋವೊಂದು ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದರ್ಶನ್ ಒಂದು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದುಕೊಂಡು, ಚೇರ್ ಮೇಲೆ ಆರಾಮವಾಗಿ ಕುಳಿತು ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ಸಹ ಆರೋಪಿಯಾದ ಆಪ್ತ ನಾಗರಾಜ್ ಜತೆಗೆ ಬಿಂದಾಸ್ ಆಗಿ ಹರಟೆ ಹೊಡೆಯುತ್ತಿರುವ ಫೋಟೋ ಬಹಿರಂಗವಾಗಿದೆ. ಅದರ ಬೆನ್ನಲ್ಲೇ, ವಿಡಿಯೋ ಕರೆಯಲ್ಲಿ ವ್ಯಕ್ತಿಯೊಬ್ಬನ ಜತೆಗೆ ದರ್ಶನ್ ಮಾತನಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಮಹಾನಿರ್ದೇಶಕಿ (ಡಿಜಿ) ಮಾಲಿನಿ ಕೃಷ್ಣಮೂರ್ತಿ ಅವರು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಕಾರಾಗೃಹ ಇಲಾಖೆ ಎಐಜಿ ಸೋಮಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭಾನುವಾರ ಸಂಜೆಯೇ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ, ಮಾಹಿತಿ ಸಂಗ್ರಹಿಸಿದೆ.
ಕೇಂದ್ರ ಕಾರಾಗೃಹದ ಒಳ ಆವರಣದಲ್ಲಿ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳು ಚೇರ್‌ಗಳ ಮೇಲೆ ಕುಳಿತು ನಗುಮುಖದಲ್ಲಿ ಹರಟುತ್ತಾ ಕುಳಿತಿರುವಾಗ ಬೇರೊಬ್ಬರು ಮೊಬೈಲ್‌ನಿಂದ ಫೋಟೋ ಸೆರೆ ಹಿಡಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಕೇಂದ್ರ ಕಾರಾಗೃಹದ ಆವರಣದಲ್ಲೇ ಸೆರೆ ಹಿಡಿದ ಫೋಟೋ ಎನ್ನುವುದಕ್ಕೆ ಪೂರಕವಾಗಿ ಫೋಟೋದ ಹಿನ್ನೆಲೆಯಲ್ಲಿ ದೊಡ್ಡ ಗೋಡೆ ಸೆರೆಯಾಗಿದೆ.
ವಿಡಿಯೋ ಕರೆಯಲ್ಲಿ ಮಾತು: ಇನ್ನು ವೈರಲ್ ವಿಡಿಯೋವೊಂದರಲ್ಲಿ ನಟ ದರ್ಶನ್, ವ್ಯಕ್ತಿಯೊಬ್ಬನ ಜತೆಗೆ ವಿಡಿಯೋ ಕರೆಯಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಯಾರೋ ಒಬ್ಬ ವಿಡಿಯೋ ಕರೆ ಮಾಡಿ ನಟ ದರ್ಶನ್‌ಗೆ ಮೊಬೈಲ್ ನೀಡುತ್ತಾನೆ. ಬಳಿಕ ದರ್ಶನ್, ಇನ್ನೊಬ್ಬ ವ್ಯಕ್ತಿಯ ಜತೆಗೆ ಕೆಲ ಸೆಕೆಂಡ್ ಮಾತನಾಡಿದ್ದಾರೆ. ಈ ವಿಡಿಯೋ ಕರೆಯ ವಿಡಿಯೋವನ್ನು ರೆಡ್ಡಿ ಎಂಬಾತ ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕೊಲೆ ಆರೋಪಿ ನಟ ದರ್ಶನ್‌ಗೆ ಜೈಲಿನಲ್ಲಿ ವಿವಿಐಪಿ ಟ್ರೀಟ್ ಮೆಂಟ್ ಸಿಗುತ್ತಿದೆ ಎಂದು ಜೈಲು ವ್ಯವಸ್ಥೆ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್ 65 ದಿನಗಳಿಂದ ಜೈಲುವಾಸ:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹೀಗಾಗಿ ಸುಮಾರು 65 ದಿನಗಳಿಂದ ನಟ ದರ್ಶನ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಕುಟುಂಬದ ಸದಸ್ಯರು, ಆಪ್ತ ರಾಜಕಾರಣಿಗಳು, ಕೆಲ ನಟ-ನಟಿಯರು ಜೈಲಿಗೆ ತೆರಳಿ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ.
ಮನೆಯೂಟಕ್ಕೆ ಅವಕಾಶ ನಿರಾಕರಿಸಿದ್ದ ಕೋರ್ಟ್:
ಈ ನಡುವೆ ನಟ ದರ್ಶನ್ ಜೈಲಿಗೆ ಮನೆಯೂಟ ತರಿಸಿಕೊಳ್ಳಲು ಅವಕಾಶ ಕೋರಿ ನ್ಯಾಯಾಲಯದ ಮೋರೆ ಹೋಗಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯವು ಆರೋಪಿ ದರ್ಶನ್‌ಗೆ ಮನೆಯೂಟಕ್ಕೆ ಅವಕಾಶ ನಿರಾಕರಿಸಿತ್ತು. ಇದರ ಬೆನ್ನಲ್ಲೇ ನಟ ದರ್ಶನ್ ಕುಖ್ಯಾತ ರೌಡಿಗಳ ಜತೆಗೆ ಕುಳಿತು ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದು ಚರ್ಚಿಸುತ್ತಾ ಕುಳಿತಿರುವ ಫೋಟೋ ಹೊರಬಿದ್ದಿದೆ.
ಕೈದಿ ಕ್ಲಿಕ್ಕಿಸಿ ಪತ್ನಿಗೆ ಕಳಿಸಿದ್ದ ಫೋಟೋ?
ಆರೋಪಿ ನಟ ದರ್ಶನ್ ಸಿಗರೇಟ್ ಸೇದುತ್ತಾ ಟೀ ಕಪ್ ಹಿಡಿದುಕೊಂಡು ನಾಲ್ವರು ಆರೋಪಿಗಳ ಜತೆಗೆ ವಿರಾಜಮಾನರಾಗಿ ಹರಟುತ್ತಾ ಕುಳಿತಿರುವ ವೈರಲ್ ಫೋಟೋವನ್ನು ಪರಪ್ಪನ ಅಗ್ರಹಾರದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಪತ್ನಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದ. ಬಳಿಕ ಆ ಫೋಟೋ ಬಹಿರಂಗವಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ. ಜೈಲಿನಲ್ಲಿರುವ ಕೈದಿ ಕೈಗೆ ಮೊಬೈಲ್ ಹಾಗೂ ಇಂಟರ್ ನೆಟ್ ಸಂಪರ್ಕ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗಳು ಎದುರಾಗಿವೆ
ರೌಡಿ ನಾಗನ ಗ್ಯಾಂಗ್‌ನಿಂದ ದರ್ಶನ್‌ಗೆ ಆತಿಥ್ಯ? ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಆರಂಭದಲ್ಲಿ ಜೈಲಿನಲ್ಲಿ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ ಮತ್ತು ಸೈಕಲ್ ರವಿ ಗ್ಯಾಂಗ್‌ಗಳ ನಡುವೆ ಪೈಪೋಟಿ ಏರ್ಪಟ್ಟಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು. 13 ವರ್ಷಗಳ ಹಿಂದೆ ಪತ್ನಿ ಮೇಲೆ ಹಲ್ಲೆ ನಡೆಸಿ ಮೊದಲ ಬಾರಿಗೆ ಜೈಲು ಸೇರಿದ್ದ ನಟ ದರ್ಶನ್‌ಗೆ ರೌಡಿ ಸೈಕಲ್ ರವಿ ಹಾಗೂ ಆತನ ಸಹಚರರು ಜೈಲಿನಲ್ಲಿ ಆತಿಥ್ಯ ನೀಡಿದ್ದರು. ಇದೀಗ ರೌಡಿ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ಕಳೆದ 11 ತಿಂಗಳಿಂದ ಜೈಲಿನಲ್ಲಿರುವ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತನ ಗ್ಯಾಂಗ್ ಜೈಲಿನಲ್ಲಿ ನಟ ದರ್ಶನ್ ಅವರ ಸೇವೆಯಲ್ಲಿ ತೊಡಗಿದೆ ಎನ್ನಲಾಗಿತ್ತು. ಇದಕ್ಕೆಪುಷ್ಟಿ ನೀಡುವಂತೆ ವೈರಲ್ ಫೋಟೋದಲ್ಲಿ ನಟ ದರ್ಶನ್, ರೌಡಿ ವಿಲ್ಸನ್ ಗಾರ್ಡನ್ ನಾಗನ ಜತೆಗೆ ಕುಳಿತು ಹರಟುತ್ತಿರುವುದು ಕಂಡುಬಂದಿದೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಪರಪ್ಪನ ಅಗ್ರಹಾರ ಜೈಲು ಸೆರೆಮನೆಯೋ ಅಥವಾ ಅರಮನೆಯೋ ಎಂಬುದನ್ನು ಗೃಹ ಸಚಿವರು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು. ದರ್ಶನ್‌ಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಿರುವುದು ಖಂಡನೀಯ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ. ರಾಜ್ಯದ ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವುದು ಇದರಿಂದ ಸಾಬೀತಾಗಿದೆ.
ಎನ್.ರವಿಕುಮಾರ್, ಬಿಜೆಪಿ ಸದಸ್ಯ