ರೇಣುಕಾಸ್ವಾಮಿ ಮೇಲೆ ದರ್ಶನ್‌ ಗ್ಯಾಂಗ್‌ ರೌದ್ರಾವತಾರ

| Published : Jun 12 2024, 12:36 AM IST

ರೇಣುಕಾಸ್ವಾಮಿ ಮೇಲೆ ದರ್ಶನ್‌ ಗ್ಯಾಂಗ್‌ ರೌದ್ರಾವತಾರ
Share this Article
  • FB
  • TW
  • Linkdin
  • Email

ಸಾರಾಂಶ

ನಟಿ ಪವಿತ್ರಾ ಗೌಡ ಕುರಿತು ಸೋಷಿಯಲ್‌ ಮೀಡಿಯಾ ಅವಹೇಳನಕಾರಿ ಕಾಮೆಂಟ್ ವಿಚಾರವಾಗಿ ಚಿತ್ರದುರ್ಗದಿಂದ ಅಪಹರಿಸಿಕೊಂಡು ನಗರಕ್ಕೆ ಕರೆತಂದ ರೇಣುಕಾಸ್ವಾಮಿ ಮೇಲೆ ನಟ ದರ್ಶನ್‌ ಗ್ಯಾಂಗ್‌, ಕೊಲೆಗೂ ಮುನ್ನ ಭಾರಿ ರೋಷಾವೇಷ ತೋರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟಿ ಪವಿತ್ರಾ ಗೌಡ ಕುರಿತು ಸೋಷಿಯಲ್‌ ಮೀಡಿಯಾ ಅವಹೇಳನಕಾರಿ ಕಾಮೆಂಟ್ ವಿಚಾರವಾಗಿ ಚಿತ್ರದುರ್ಗದಿಂದ ಅಪಹರಿಸಿಕೊಂಡು ನಗರಕ್ಕೆ ಕರೆತಂದ ರೇಣುಕಾಸ್ವಾಮಿ ಮೇಲೆ ನಟ ದರ್ಶನ್‌ ಗ್ಯಾಂಗ್‌, ಕೊಲೆಗೂ ಮುನ್ನ ಭಾರಿ ರೋಷಾವೇಷ ತೋರಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ ತಮ್ಮ ಸ್ನೇಹಿತ ದೀಪಕ್ ಪಾಲುದಾರಿಕೆಯ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ದರ್ಶನ್ ಅಕ್ರಮ ಬಂಧನದಲ್ಲಿಟ್ಟಿದ್ದರು. ಆನಂತರ ದರ್ಶನ್‌ ಗ್ಯಾಂಗ್‌ ಆತನನ್ನು ಪುಟ್ಬಾಲ್‌ನಂತೆ ಮನಬಂದಂತೆ ಒದ್ದು ಹಿಂಸಿಸಿದಲ್ಲದೆ ಬಳಿಕ ಆತನಿಗೆ ದೊಣ್ಣೆ ಹಾಗೂ ಬೆಲ್ಟ್‌ಗಳಿಂದ ಸಹ ಹೊಡೆದಿದೆ. ಖುದ್ದು ರೇಣುಕಾ ಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಲ್ಲೆ ಪರಿಣಾಮ ರೇಣುಕಾಸ್ವಾಮಿ ಮೃತದೇಹದ ಮೇಲೆ ಎದೆ, ಹೊಟ್ಟೆ, ಬೆನ್ನು ಹಾಗೂ ಕಾಲುಗಳಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದವು. ಈ ಹಲ್ಲೆ ವೇಳೆ ಉಪಸ್ಥಿತಳಿದ್ದ ಪವಿತ್ರಾಗೌಡ, ರೇಣುಕಾಸ್ವಾಮಿ ಮೇಲಿನ ಹಲ್ಲೆಯನ್ನು ಪ್ರಚೋದಿಸಿದ್ದಾಳೆ. ಈ ಕಾರಣಕ್ಕೆ ಆಕೆ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳಲ್ಲಿ ದರ್ಶನ್ ಪ್ರತ್ಯಕ್ಷ:

ಪಟ್ಟಣಗೆರೆಯ ಶೆಡ್‌ಗೆ ಶನಿವಾರ ಮಧ್ಯಾಹ್ನ ಹಾಗೂ ರಾತ್ರಿ ದರ್ಶನ್‌ ಬಂದು ಹೋಗುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಚಿತ್ರೀಕರಣವಾಗಿದೆ. ಅಲ್ಲದೆ ಮೃತದೇಹ ಎಸೆದು ಮರಳುವಾಗ ಕೂಡ ದರ್ಶನ್‌ ಸಹಚರರಿದ್ದ ಕಾರಿನ ಸಂಚಾರವು ಸಿಸಿಟಿವಿಯಲ್ಲಿ ಸಿಕ್ಕಿದೆ.

ಅದೇ ರೀತಿ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತರುವಾಗ ಚಿತ್ರದುರ್ಗ- ಬೆಂಗಳೂರು ಹೆದ್ದಾರಿಯ ಟೋಲ್‌ ಗೇಟ್‌ಗಳ ಸಿಸಿಟಿವಿಯಲ್ಲಿ ಕಾರಿನ ದೃಶ್ಯಾವಳಿ ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಟರನ್ನು ಶರಣಾಗಲು ಹೇಳಿ ಖೆಡ್ಡಾಗೆ ಬಿದ್ದ ದರ್ಶನ್‌!:

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಸಹಚರರನ್ನು ಶರಣಾಗತಿ ಮಾಡಿಸಲು ಯತ್ನಿಸಿ ದರ್ಶನ್‌ ತಾವಾಗಿಯೇ ಪೊಲೀಸರ ಗಾಳಕ್ಕೆ ಸಿಲುಕಿರುವ ಕುತೂಹಲಕಾರಿ ಸಂಗತಿ ನಡೆದಿದೆ.

ಸುಮನಹಳ್ಳಿ ಮೇಲ್ಸೇತುವೆ ಸಮೀಪ ರಾಜಕಾಲುವೆ ಬಳಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ ಪ್ರಕರಣದ ತನಿಖೆಗಿಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ದರ್ಶನ್ ಸ್ನೇಹಿತನಿಗೆ ಸೇರಿದ ಸ್ಕಾರ್ಪಿಯೋ ಕಾರು ಬೆನ್ನಹತ್ತಿದರು. ಈ ವಿಚಾರ ತಿಳಿದು ಬಂಧನ ಭೀತಿಗೊಳಗಾದ ದರ್ಶನ್‌, ಕೂಡಲೇ ತನ್ನ ಸ್ನೇಹಿತರ ಮೂಲಕ ಕೊಲೆಯಲ್ಲಿ ಪಾತ್ರ ಇಲ್ಲದ ನಾಲ್ವರನ್ನು ಶರಣಾಗತಿ ಮಾಡಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಂತೆಯೇ ಕಾಮಾಕ್ಷಿಪಾಳ್ಯ ಠಾಣೆಗೆ ತಮ್ಮ ಪರಿಚಿತ ಪಿಎಸ್‌ಐಗೆ ಕರೆ ಮಾಡಿದ ದರ್ಶನ್‌ ಸಹಚರರಾದ ಲಗ್ಗೆರೆಯ ನಂದೀಶ್, ಕಾರ್ತಿಕ್‌, ನಿಖಿಲ್ ಹಾಗೂ ಕೇಶಮೂರ್ತಿ ಶರಣಾಗಿದ್ದಾರೆ ಹಾಗೂ ‘ಅಣ್ಣ ನಮ್ಮಿಂದ ತಪ್ಪಾಗಿದೆ’ ಎಂದು ಹೇಳಿದ್ದಾರೆ.ಆದರೆ ಬಳಿಕ ಈ ನಾಲ್ವರ ಮೇಲೆ ಶಂಕೆಗೊಂಡು ತೀವ್ರವಾಗಿ ಪೊಲೀಸರು ವಿಚಾರಿಸಿದಾಗ ಕೊಲೆ ರಹಸ್ಯ ಹಾಗೂ ದರ್ಶನ್‌ ಪಾತ್ರ ಬಯಲಾಗಿದೆ ಎಂದು ತಿಳಿದು ಬಂದಿದೆ.

ಶರಣಾದವರ ವಿರುದ್ಧ ಪ್ರತ್ಯೇಕ ಪ್ರಕರಣ:ಕೊಲೆ ಕೃತ್ಯದಲ್ಲಿ ಪಾತ್ರವಹಿಸದೆ ಹೋದರೂ ಶರಣಾಗಿದ್ದ ದರ್ಶನ್‌ ರವರ ನಾಲ್ವರು ಸಹಚರರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ. ಈಗ ಕೊಲೆ ಪ್ರಕರಣದಲ್ಲಿ ಅವರನ್ನು ಬಂಧಿತರಾಗಿದ್ದು, ಬಳಿಕ ತಪ್ಪು ಮಾಹಿತಿ ನೀಡಿದ ಆರೋಪ ಮೇರೆಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ "

ಇನ್‌ಸ್ಟಾಗ್ರಾಂನಲ್ಲಿ ತನ್ನ ಪ್ರಿಯತಮೆಗೆ ಮರ್ಮಾಂಗದ ಪೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ರೇಣುಕಾಸ್ವಾಮಿ ಆಹ್ವಾನಿಸಿದ್ದೇ ನಟ ದರ್ಶನ್ ಸಿಟ್ಟಿಗೇಳಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಇನ್‌ಸ್ಟಾಗ್ರಾಂನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಪವಿತ್ರಾಗೌಡ ಪರೋಕ್ಷವಾಗಿ ಪೋಸ್ಟ್ ಹಾಕಿದ್ದು ವಿವಾದವಾಗಿತ್ತು. ಆ ವಿವಾದದ ಬಳಿಕ ಪವಿತ್ರಾಗೌಡರಿಗೆ ರೇಣುಕಾಸ್ವಾಮಿ ಕಾಟ ಶುರುವಾಗಿದೆ. ತನ್ನನ್ನು ದರ್ಶನ್‌ ಅಭಿಮಾನಿ ಎಂದು ಹೇಳಿಕೊಂಡು ಆತ, ಇನ್‌ಸ್ಟಾಗ್ರಾಂನಲ್ಲಿ ಪವಿತ್ರಾರವರ ಪೋಟೋಗಳಿಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ.

ಇನ್‌ಸ್ಟಾಗ್ರಾಂನಲ್ಲಿ ‘ತನೀಶಾ ರೆಡ್ಡಿ 2205’ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ರೇಣುಕಾಸ್ವಾಮಿ, ಪ್ರೊಫೈಲ್‌ಗೆ ಯುವತಿ ಭಾವಚಿತ್ರ ಹಾಕಿದ್ದ.‘how come darshan sir not travelling with u. he is seen only with his wife vijay lakshmi, ashte bidi paapa nivu keep, keep he in the society’.

‘issue madi joker aghidhu public nallie, same nimma fiend pavithra xyz, so pls u take her, this time karnataka janna avali jyothe nimminu serisi adbitharu publicenalli’ಹೀಗೆ ರೇಣುಕಾಸ್ವಾಮಿ ಕಾಮೆಂಟ್ ಹಾಕಿದ್ದ. ಇದಲ್ಲದೆ ಇನ್‌ಸ್ಟಾಗ್ರಾಂನಲ್ಲಿ ಪವಿತ್ರಾಗೌಡರಿಗೆ ಖಾಸಗಿಯಾಗಿ ಆತ ನಿರಂತರವಾಗಿ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ್ದ. ಇದೂ ಅತಿರೇಕಕ್ಕೆ ಹೋಗಿ ಮರ್ಮಾಂಗದ ಪೋಟೋ ಕಳುಹಿಸಿ ಆತ ವಿಕೃತಿ ಮೆರೆದಿದ್ದ. ಈ ಮೆಸೇಜ್‌ ಬಗ್ಗೆ ದರ್ಶನ್‌ಗೆ ಪವಿತ್ರಾಗೌಡ ತಿಳಿಸಿದ್ದಳು. ಆಗ ಕೆರಳಿದ ದರ್ಶನ್‌, ರೆಡ್ಡಿ ಹೆಸರಿನ ಖಾತೆ ಬಗ್ಗೆ ವಿಚಾರಿಸಿದಾಗ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ. ಬಳಿಕ ಬೆದರಿಸಿ ಎಚ್ಚರಿಕೆ ಕೊಡಲು ಕರೆತಂದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಟೈಂ ಬರುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದ ಪವಿತ್ರಾ:ರೇಣುಕಾಸ್ವಾಮಿ ಕಾಮೆಂಟ್‌ಗಳಿಗೆ ಪವಿತ್ರಾ ಪರ ಆಕೆಯ ಸ್ನೇಹಿತೆ ಪ್ರತಿಕ್ರಿಯಿಸಿದ್ದರು. ಆಗ ತನ್ನ ಸ್ನೇಹಿತೆಗೆ ಸತ್ಯ ಸಂಗತಿ ತಿಳಿಯದೆ ಮಾತನಾಡುವ ಮೂರ್ಖ ಜನರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸದಂತೆ ಹೇಳಿದ್ದ ಪವಿತ್ರಾ, ಸಮಯವೇ ಉತ್ತರಿಸುತ್ತದೆ ಕಾದು ನೋಡು ಎಂದಿದ್ದಳು.

ಯುವತಿ ಸೋಗಿನಲ್ಲಿ ಬಲೆಗೆ ಬೀಳಿಸಿದರು:ಇನ್‌ಸ್ಟಾಗ್ರಾಂನಲ್ಲಿ ತನಿಷಾ ರೆಡ್ಡಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪವಿತ್ರಾಗೌಡರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಾಟ ಕೊಡುತ್ತಿರುವುದು ರೇಣುಕಾಸ್ವಾಮಿ ಎಂಬುದು ದರ್ಶನ್‌ ಗ್ಯಾಂಗ್‌ ಗೊತ್ತಾಗಿದೆ. ಆಗ ಆತನ ಪೂರ್ವಾಪರ ವಿಚಾರಿಸಿದಾಗ ಚಿತ್ರದುರ್ಗದಲ್ಲಿ ಔಷಧಿ ಅಂಗಡಿ ಕೆಲಸಗಾರ ಎಂಬ ಮಾಹಿತಿ ಸಿಕ್ಕಿದೆ. ನಂತರ ಇನ್‌ಸ್ಟಾಗ್ರಾಂನಲ್ಲಿ ಯುವತಿ ಹೆಸರಿನಲ್ಲಿ ಚಿತ್ರದುರ್ಗ ಜಿಲ್ಲೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಖಾತೆ ತೆರೆದು ರೇಣುಕಾಸ್ವಾಮಿಯನ್ನು ಖೆಡ್ಡಾಕ್ಕೆ ಕೆಡವಿದ್ದಾನೆ.

ಕೆಲ ದಿನಗಳ ಕಾಲ ಯುವತಿ ಸೋಗಿನಲ್ಲಿ ರೇಣುಕಾಸ್ವಾಮಿ ಜತೆ ಆತ ಚಾಟ್ ಮಾಡಿ ಅಂತಿಮವಾಗಿ ಶನಿವಾರ ಭೇಟಿಗೆ ಆಹ್ವಾನಿಸಿದ್ದಾನೆ. ಯುವತಿ ಭೇಟಿ ಮಾಡುವ ಆಸೆಯಿಂದ ಬಂದು ರೇಣುಕಾಸ್ವಾಮಿ ದರ್ಶನ್‌ ಗ್ಯಾಂಗ್ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ದುರ್ಗದಲ್ಲಿ ಮಂಗಳವಾರ ರಾತ್ರಿ ರೇಣುಕಾಸ್ವಾಮಿ ಅಂತ್ಯಕ್ರಿಯೆ:

ಬೆಂಗಳೂರಿನಲ್ಲಿ ಹತ್ಯೆಯಾದ ರೇಣುಕಾಸ್ವಾಮಿ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ಚಿತ್ರದುರ್ಗಕ್ಕೆ ತರಲಾಯಿತು. ಪಾರ್ಥಿವ ಶರೀರ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು. ನಮಗೆ ನ್ಯಾಯ ಕೊಡಿಸಿ: ಕೊಲೆಯಾದ ರೇಣುಕಾಸ್ವಾಮಿಯ ಪತ್ನಿ ಸಹನಾ ಮಾದ್ಯಮಗಳ ಮುಂದೆ ಕಣ್ಣೀರಿಡುತ್ತಾ ನನ್ನ ಮನೆಯವರಿಗೆ ನ್ಯಾಯ ಕೊಡಿಸಿ, ನಾನು ಗರ್ಭೀಣಿ. ಈಗ ಈ ರೀತಿಯಾದರೆ ಏನು ಮಾಡಲಿ? ನಮಗೆ ನ್ಯಾಯ ಬೇಕು ಎಂದು ಕಣ್ಣೀರಿಟ್ಟರು.

ಕೊಲೆ ಖಂಡಿಸಿ ಇಂದು ಪ್ರತಿಭಟನೆ

ರೇಣುಕಾಸ್ವಾಮಿ ಕೊಲೆ ಖಂಡಿಸಿ ಚಿತ್ರದುರ್ಗದಲ್ಲಿ ಬುಧವಾರ ವೀರಶೈವ ಸಮಾಜ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನಾ ಮೇರವಣಿಗೆ ನೀಲಕಂಠೇಶ್ವರ ದೇವಾಯದಿಂದ ಡಿಸಿ ಕಚೇರಿಯವರೆಗೆ ಸಾಗಲಿದ್ದು ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕಲ್ಲೇಶಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.ನಂತರ ಮೃತ ರೇಣುಕಾಸ್ವಾಮಿಯ ಮನೆಗೆ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌, ಭಾವನಾ ಬೆಳಗೆರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಭಾವನಾ ಬೆಳಗೆರೆ, ರೇಣುಕಾಸ್ವಾಮಿಯ ಕುಟುಂಬಸ್ಥರು ತುಂಬಾ ಮುಗ್ದರು ಅವರನ್ನು ನೋಡಿದರೆ ನೋವಾಗುತ್ತದೆ. ಆತನ ಹೆಂಡತಿ ಅಮಾಯಕಳು ಫೇಸ್‌ ಬುಕ್‌ ವಿಚಾರ ಮನೆಯವರಿಗೆ ಏನೂ ಗೊತ್ತಿಲ್ಲ. ಒಂದು ವೇಳೆ ಆತ ವೈಯಕ್ತಿಕ ಕಾಮೆಂಟ್‌ ಮಾಡಿದ್ದರೆ ಅದಕ್ಕೆ ಸೈಬರ್‌ ಕ್ರೈಮ್‌ ಇಲಾಖೆ ಇದೆ, ಪ್ರಾಣ ತೆಗೆಯುವ ಮಟ್ಟಕ್ಕೆ ಸೋಶಿಯಲ್‌ ಮೀಡಿಯಾ ಹೊಗುತ್ತಿರುವುದು ಆತಂಕದ ವಿಚಾರ. ದರ್ಶನ್‌ ಈ ಕೊಲೆಯಲ್ಲಿ ಭಾಗಿಯಾಗಿದ್ದರೆ ಆವರಿಗೆ ಖಂಡಿತಾ ಶಿಕ್ಷೆಯಾಗಬೇಕು ಎಂದು ತಿಳಿಸಿದರು.ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಮಾತನಾಡಿ, ರೇಣುಕಾಸ್ವಾಮಿಯದು ಅಮಾನವೀಯ ಕೊಲೆ, ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಕಾನೂನು ಕೈಗೆತ್ತಿಕೊಂಡವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.