ದ್ವೇಷ, ಅಸೂಯೆ ಇಲ್ಲದಿದ್ದರೆ ದೇವರ ದರ್ಶನ ಸಾಧ್ಯ

| Published : Dec 25 2024, 12:48 AM IST

ಸಾರಾಂಶ

ನಮ್ಮಲ್ಲಿನ ಒಳ್ಳೆಯ ನಡತೆಗಳನ್ನು ಜಗತ್ತು ನೋಡುತ್ತಿರುತ್ತದೆ. ನಮ್ಮಲ್ಲಿ ದ್ವೇಷ, ಅಸೂಯೆ ಯಾವುದು ಇರಬಾರದು. ಆಗ ಮಾತ್ರ ನಮಗೆ ದೇವರ ದರ್ಶನವಾಗಲಿದೆ ಎಂದು ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು.

ಗೌರಿಗದ್ದೆ ದತ್ತಾಶ್ರಮದ ವಿನಯ್ ಗುರೂಜಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ನಮ್ಮಲ್ಲಿನ ಒಳ್ಳೆಯ ನಡತೆಗಳನ್ನು ಜಗತ್ತು ನೋಡುತ್ತಿರುತ್ತದೆ. ನಮ್ಮಲ್ಲಿ ದ್ವೇಷ, ಅಸೂಯೆ ಯಾವುದು ಇರಬಾರದು. ಆಗ ಮಾತ್ರ ನಮಗೆ ದೇವರ ದರ್ಶನವಾಗಲಿದೆ ಎಂದು ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾಂಡ್ಯ ವಲಯದಿಂದ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಯ ಹೆಣ್ಣು ಸಂಸ್ಕಾರ ಹೊಂದಿದರೆ ಮನೆ ಬೆಳಗಲಿದ್ದು, ಹೆಣ್ಣಿಗೆ ಅಗತ್ಯವಿರುವ ಸಂಸ್ಕಾರ ತಂದೆ, ತಾಯಿ, ದೇವಸ್ಥಾನ ಹಾಗೂ ಸನ್ಯಾಸಿಗಳ ಪ್ರವಚನದಿಂದ ದೊರೆಯಲಿದೆ ಎಂದರು. ಧರ್ಮಸ್ಥಳ ಸಂಘ ಸಮಾಜದಲ್ಲಿ ಸಮಾನತೆ ತಂದಿದ್ದು, ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಮಹಿಳೆಯರನ್ನು ಆರ್ಥಿಕ ಸಬಲೀಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತಂದಿದೆ. ದುಶ್ಚಟಗಳಿಗೆ ಒಳಗಾದವರನ್ನು ವ್ಯಸನ ಮುಕ್ತಗೊಳಿಸುವ ಕೆಲಸ ಮಾಡುತ್ತಿದೆ. ಅನಕ್ಷರಸ್ಥರಿಗೆ ಜ್ಞಾನ ದಾಸೋಹ ನೀಡುತ್ತಿದೆ. ಸಮಾಜದಲ್ಲಿ ಹಿಂದುಳಿದವರು ಮುಂದುವರಿದು ಬದುಕುವಂತೆ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ ಎಂದು ಹೇಳಿದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ಕ್ಷೇತ್ರಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದ ಜನರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಸರ್ಕಾರ ಮಾಡುವ ವಿವಿಧ ಸಾಮಾಜಿಕ ಕೆಲಸ ಕಾರ್ಯ ಗಳನ್ನು ಗ್ರಾಮಾಭಿವೃದ್ಧಿ ಯೋಜನೆ ಸ್ವಯಂ ಪ್ರೇರಣೆಯಿಂದ ನಡೆಸುತ್ತಿದೆ ಎಂದು ತಿಳಿಸಿದರು.

ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಬಿ.ಸಿ.ಗುರುಮೂರ್ತಿ, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಎಸ್.ವಿ.ಮಂಜುನಾಥ್, ದೇವದಾನ ಗ್ರಾಪಂ ಅಧ್ಯಕ್ಷ ಕೆ.ಜಿ.ಸಂಪತ್, ಯೋಜನಾಧಿಕಾರಿ ಸುರೇಶ್, ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಚಂದ್ರಶೇಖರ್ ರೈ ಮತ್ತಿತರರು ಹಾಜರಿದ್ದರು.