ರಸ್ತೆ ಡಾಂಬರೀಕರಣ ಕಾಮಗಾರಿಗೆ ದರ್ಶನ್ ಪುಟ್ಟಣ್ಣಯ್ಯ ಚಾಲನೆ

| Published : Aug 17 2025, 01:37 AM IST

ರಸ್ತೆ ಡಾಂಬರೀಕರಣ ಕಾಮಗಾರಿಗೆ ದರ್ಶನ್ ಪುಟ್ಟಣ್ಣಯ್ಯ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರದಿಂದ ಮಂಡ್ಯಕ್ಕೆ ತೆರಳುವ ಮುಖ್ಯ ರಸ್ತೆ ಕೂಡ ಹದಗೆಟ್ಟಿದ್ದು, ಈ ರಸ್ತೆ ಅಭಿವೃದ್ಧಿಗೂ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಹಣ ಬಿಡಗಡೆಯಾಗಲಿದೆ. ಪಾಂಡವಪುರದಿಂದ ದೊಡ್ಡ ಬ್ಯಾಡರಹಳ್ಳಿವರೆಗಿನ ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಳೆದ ಹಲವು ವರ್ಷಗಳಿಂದ ಡಾಂಬರ್ ಕಾಣದೆ ಹದಗೆಟ್ಟಿದ್ದ ರೈಲ್ವೆ ನಿಲ್ದಾಣದಿಂದ ಪಾಂಡವಪುರ ಗಡಿ ಭಾಗ ಅಶೋಕ ನಗರದವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ರೈಲ್ವೆ ನಿಲ್ದಾಣದಿಂದ ಕೆ.ಆರ್.ಪೇಟೆ ಗಡಿ ಭಾಗದ ರಸ್ತೆ ಸಂಪೂರ್ಣ ಹಾಳಾಗಿ ವಾಹನ ಸಂಚಾರ ದುಸ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆದುಕೊಳ್ಳಲಾಗಿದೆ ಎಂದರು.

ರಸ್ತೆ ಅಭಿವೃದ್ಧಿಗೆ ಸರ್ಕಾರ 5 ಕೋಟಿ ರು. ಅನುದಾನ ಮಂಜೂರು ಮಾಡಿದೆ. ಈ ಅನುದಾನದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಜೊತೆಗೆ ಒಂದು ಪದರ ಡಾಂಬರು ಹಾಕಲಾಗುವುದು. ಕಾಮಗಾರಿ ಗುಣಮಟ್ಟ ಕಾಯ್ದುಕೊಂಡು ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಪಾಂಡವಪುರದಿಂದ ಮಂಡ್ಯಕ್ಕೆ ತೆರಳುವ ಮುಖ್ಯ ರಸ್ತೆ ಕೂಡ ಹದಗೆಟ್ಟಿದ್ದು, ಈ ರಸ್ತೆ ಅಭಿವೃದ್ಧಿಗೂ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಹಣ ಬಿಡಗಡೆಯಾಗಲಿದೆ. ಪಾಂಡವಪುರದಿಂದ ದೊಡ್ಡ ಬ್ಯಾಡರಹಳ್ಳಿವರೆಗಿನ ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಈ ರಸ್ತೆ ಕಿರಿದಾಗಿದಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಹೀಗಾಗಿ, ರಸ್ತೆ ಅಗಲೀಕರಣ ಆಗಬೇಕಿದೆ. ಈ ಬಗ್ಗೆಯೂ ಸರ್ಕಾರದ ಗಮನ ಸೆಳೆದು ಆದಷ್ಟು ಬೇಗ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದರು.

ಈ ವೇಳೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಮಾಜಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ಮಂಜು, ಮುಖಂಡರಾದ ವೈ.ಜಿ.ರಘು, ಮಾಖೇಗೌಡ, ಶಿವಣ್ಣ, ಗುತ್ತಿಗೆದಾರ ಅಶೋಕ್ ಇತರರು ಇದ್ದರು.

ಆ.19 ರಂದು ವಿದ್ಯುತ್ ವ್ಯತ್ಯಯ

ಮಂಡ್ಯ:

ತಾಲೂಕಿನ ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಆಗಸ್ಟ್ 19 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಹಂಪಾಪುರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕೆರಗೋಡು, ದೊಡ್ಡಗರುಡನಹಳ್ಳಿ, ಬಿಳಿದೇಗಲು, ಮುದಗಂದೂರು, ಮಾರಗೌಡನಹಳ್ಳಿ, ಬಿ.ಹೊಸೂರು, ಹಂಪಾಪುರ, ಕಲ್ಮಂಟಿದೊಡ್ಡಿ, ಸೌದೇನಹಳ್ಳಿ, ಬೆಟ್ಟಹಳ್ಳಿ, ಬೀಚನಹಳ್ಳಿ, ಪುರದಕೊಪ್ಪಲು, ಎಂ.ಹೊನ್ನೇನಹಳ್ಳಿ , ಬಿದರಕಟ್ಟೆ, ಬೆನ್ನಹಟ್ಟಿ, ಮನುಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.