ಸಾರಾಂಶ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯು ಮತ್ತೆರಡು ದಿನಗಳಿಗೆ ವಿಸ್ತರಣೆಯಾಗಿದ್ದು, ದರ್ಶನ್ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿ ಇನ್ನುಳಿದ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತಲುಪಿದ್ದಾರೆ.
ಪೊಲೀಸ್ ಕಸ್ಟಡಿ ಅಂತ್ಯ ಹಿನ್ನಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ 16 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಿದರು. ಆ ವೇಳೆ ಪ್ರಕರಣದ ಹೆಚ್ಚಿನ ತನಿಖೆಗೆ ನಟ ದರ್ಶನ್, ಅವರ ಆಪ್ತರಾದ ಪ್ರದೂಷ್, ವಿನಯ್ ಹಾಗೂ ಧನರಾಜ್ ಅಲಿಯಾಸ್ ರಾಜುನನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್ ಮನವಿ ಮಾಡಿದರು. ಇನ್ನುಳಿದ ಆರೋಪಿಗಳ ವಿಚಾರಣೆ ಅಂತ್ಯವಾಗಿದೆ ಎಂದು ಅವರು ಹೇಳಿದರು.
ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ದರ್ಶನ್ ಸೇರಿ ನಾಲ್ವರನ್ನು ಎರಡು ದಿನಗಳು ಪೊಲೀಸ್ ಸುಪರ್ದಿಗೆ ನೀಡಿ ಆದೇಶಿಸಿತು. ಇನ್ನುಳಿದವರನ್ನು ನ್ಯಾಯಾಲಯವು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿತು. ಅಂತೆಯೇ ದರ್ಶನ್ ಸೇರಿ ನಾಲ್ವರನ್ನು ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಜೈಲು ಸೇರಿದವರ ವಿವರ ಹೀಗಿದೆ?
ಪವಿತ್ರಾಗೌಡ, ಪುಟ್ಟಸ್ವಾಮಿ ಅಲಿಯಾಸ್ ಪವನ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ ಮೂರ್ತಿ, ಕಾರ್ತಿಕ್, ನಂದೀಶ್, ರಾಘವೇಂದ್ರ, ಜಗದೀಶ್ ಅಲಿಯಾಸ್ ಜಗ್ಗ ಹಾಗೂ ನಿಖಿಲ್. ಇದಕ್ಕೂ ಮುನ್ನವೇ ಮತ್ತೊಬ್ಬ ಆರೋಪಿ ರವಿಶಂಕರ್ ಸಹ ಜೈಲಿಗೆ ಪೊಲೀಸರು ಕಳುಹಿಸಿದ್ದರು.
ಪೊಲೀಸ್ ಕಸ್ಟಡಿಗೆ ಬಂದವರ ವಿವರ
ನಟ ದರ್ಶನ್, ಪ್ರದೂಷ್, ಧನರಾಜ್ ಅಲಿಯಾಸ್ ರಾಜು ಹಾಗೂ ಪಟ್ಟಣಗೆರೆ ವಿನಯ್.
ಕಸ್ಟಡಿಗೆ ಪಡೆಯಲು ಕಾರಣಗಳು?
-ದರ್ಶನ್ ಬಳಿ ಮತ್ತೆ ಸಿಕ್ಕಿದ 40 ಲಕ್ಷ ರು ಹಣದ ಮೂಲದ ಕುರಿತು ತನಿಖೆ
-ಪ್ರದೂಷ್ ಜತೆ ಕೃತ್ಯ ನಡೆದ ದಿನ ಪಟ್ಟಣಗೆರೆ ಶೆಡ್‌ಗೆ ಬಂದಿದ್ದ ಆತನ ಸ್ನೇಹಿತನ ಬಗ್ಗೆ ತನಿಖೆ
-ಕರೆಂಟ್ ಶಾಕ್ ಕೊಡಲು ಬಳಸಿದ್ದ ಎಲೆಕ್ಟ್ರಿಕ್ ಚಾರ್ಜ್ ಟಾರ್ಚ್ ಅನ್ನು ಖರೀದಿಸಿದ ಬಗ್ಗೆ ತನಿಖೆ
-ಪಟ್ಟಣಗೆರೆ ಶೆಡ್‌ಗೆ ಧನರಾಜ್ ಜತೆ ಬಂದಿದ್ದ ಸ್ನೇಹಿತರ ಕುರಿತು ಮಾಹಿತಿ ಸಂಗ್ರಹ
-ಪಟ್ಟಣಗೆರೆ ಶೆಡ್ ಕಾವಲುಗಾರರಿಗೆ ಹಣದಾಸೆ ತೋರಿಸಿದವರ ಬಗ್ಗೆ ಮಾಹಿತಿ ಸಂಗ್ರಹ
-ಕತ್ಯ ನಡೆದ ದಿನ ದರ್ಶನ್ ಸಂಪರ್ಕಿಸಿದ್ದ ವ್ಯಕ್ತಿಗಳ ಕುರಿತು ಮಾಹಿತಿ