ಸಾರಾಂಶ
ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಅಂಬಾರಿ ಉತ್ಸವ ಸಮಿತಿ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆಯ ಅಂಗವಾಗಿ ಭಾನುವಾರ ನಗರದಲ್ಲಿ ಐದು ಆನೆಗಳ 6 ಅಂಬಾರಿ ಉತ್ಸವ ಅದ್ಧೂರಿಯಾಗಿ ನಡೆಯಿತು.
ಇಲ್ಲಿಯ ನೆಹರು ಮೈದಾನದಲ್ಲಿ ಅಂಬಾರಿ ಉತ್ಸವಕ್ಕೆ ಶಿರಹಟ್ಟಿ ಸಂಸ್ಥಾನ ಮಠದ ಫಕೀರ ಸಿದ್ದರಾಮ ಶ್ರೀಗಳು ಚಾಲನೆ ನೀಡಿ ಮಾತನಾಡಿ, ದ್ವೇಷ ಬಿಡು ಪ್ರೀತಿ ಮಾಡು ಎಂಬುದು ಫಕೀರೇಶನ ಸಂದೇಶ. ಗುರು ಭಕ್ತಿಯಿಂದ ಮನೋಜಕುಮಾರ ಗದಗಿನ ಅವರು ಸ್ವಂತ ಖರ್ಚಿನಲ್ಲಿ ಆನೆ ಅಂಬಾರಿ ಉತ್ಸವ ಹಮ್ಮಿಕೊಂಡಿದ್ದು ಉತ್ತಮ ಕಾರ್ಯ. ಒಂದೇ ವರ್ಷದಲ್ಲಿ ನಗರದಲ್ಲಿ ಎರಡು ಬಾರಿ ಆನೆ ಅಂಬಾರಿ ಮೆರವಣಿಗೆ ನಡೆಯುತ್ತಿದೆ. ಫಕ್ಕೀರೇಶ್ವರ ಶ್ರೀಗಳ ಜನ್ಮದಿನದ ಅಂಗವಾಗಿ ಹಾಗೂ ಈಗ ಆನೆ ಅಂಬಾರಿ ಮಾಡಲಾಗುತ್ತಿದೆ. ಭಕ್ತಿಯಿಂದ ಅಂಬಾರಿ ಉತ್ಸವ ಮಾಡಬೇಕೆನ್ನುವ ಕಲ್ಪನೆ ಶ್ಲಾಘನೀಯ ಎಂದರು.ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಿದ್ಧಾರೂಢರ ಶ್ರೀಗಳು ಹಾಗೂ ಸಮಕಾಲಿನ ಮಹಾತ್ಮರ ದರ್ಶನ ಜನರಿಗೆ ಮಾಡುವ ಕೆಲಸ ಶ್ಲಾಘನೀಯ. ಇಂದಿನ ಜನರಿಗೆ ಇನ್ನು 10 ವರ್ಷಗಳ ಬಳಿಕ ದೇವರ ಮೇಲೆ ಭಕ್ತಿ, ಹಿರಿಯರಿಗೆ ಗೌರವ ಇರುವುದಿಲ್ಲ. ಭಕ್ತಿ, ಆರಾಧನೆ ಮಾಡುವ ಜನರನ್ನು ಕಳೆದುಕೊಳ್ಳುತ್ತೇವೆ ಎಂಬ ಸಂದೇಶ ಹರಿದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾತ್ಮರ ದರ್ಶನ ಜನರಿಗೆ ಸಿಗುವಂತೆ ಮಾಡಿದ ಕುಟುಂಬದ ಕಾರ್ಯ ಮಹತ್ವವಾದದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮನೋಜಕುಮಾರ ಗದುಗಿನ, ನ. 15ರಂದು ಸಂಗಮರಥಯಾತ್ರೆ ಆರಂಭವಾಯಿತು. ಪ್ರತಿಯೊಂದು ಹಳ್ಳಿಯಲ್ಲಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. 62 ಹಳ್ಳಿಯಲ್ಲಿ 28 ದಿನಗಳ ಕಾಲ ಅಭೂತಪೂರ್ವ ರಥಯಾತ್ರೆ ನಡೆಯಿತು. ಸಿದ್ಧಾರೂಢಸ್ವಾಮೀಜಿ ಹಾಗೂ ಸಮಕಾಲಿನ ಮಹಾತ್ಮರ ಅನುಗ್ರಹಕ್ಕೆ ಎಲ್ಲರೂ ಪಾತ್ರರಾಗೋಣ ಎಂದರು.ಕುಂದಗೋಳ ಅಭಿನವ ಬಸವಣ್ಣಜ್ಜನವರ, ಜತ್ತದ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಿವಾನಂದ ಕರಿಗಾರ, ಗೌಡಪ್ಪಗೌಡ ಪಾಟೀಲ, ಮಹಾಬಳೇಶ್ವರ ಅಣ್ಣಿಗೇರಿ, ರಂಗಾ ಬದ್ದಿ, ಹನುಮಂತಪ್ಪ ಹಳ್ಯಾಳ, ಅರ್ಜುನ ಅವ್ವಣ್ಣವರ, ಈರಣ್ಣ ಕೊರಕೊಪ್ಪ, ವರ್ಷಾ ಗದಗಿನ, ಬಸವರಾಜ ಕೆರಕಣ್ಣವರ, ವಿ.ಸಿ. ಸೋಮನಕಟ್ಟಿ, ಮಹಾದೇವಪ್ಪ ಜೀರಿಗಿ ಸೇರಿದಂತೆ ಹಲವರಿದ್ದರು.
ಅದ್ಧೂರಿ ಮೆರವಣಿಗೆಸಿದ್ಧಾರೂಢರು, ಗುರುನಾಥಾರೂಢರು, ಮಡಿವಾಳೇಶ್ವರರು, ಅಜಾತ ನಾಗಲಿಂಗರು, ಉಣಕಲ್ ಸಿದ್ದಪ್ಪಜ್ಜ, ಸಂತ ಶರೀಫ ಶಿವಯೋಗಿಗಳ ಉತ್ಸವ ಮೂರ್ತಿಗಳನ್ನು ಐದು ಅಂಬಾರಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ನೆಹರೂ ಮೈದಾನದಿಂದ ಲ್ಯಾಮಿಂಗ್ಟನ್ ರೋಡ್, ಕೊಪ್ಪಿಕರ ರಸ್ತೆ, ಮ್ಯಾದರ ಓಣಿ, ತುಳುಜಾಭವನಿ ವೃತ್ತ, ದಾಜೀಬಾನಪೇಟ, ಸಂಗೊಳಿ ರಾಯಣ್ಣ ವೃತ್ತ, ಗಿರಿಣಿ ಚಾಳ, ಕಾರವಾರ ರಸ್ತೆ, ಇಂಡಿಪಂಪ್ ವೃತ್ತ ಈ ಮೂಲಕ ಮೆರವಣಿಗೆ ಸಿದ್ಧಾರೂಢ ಮಠಕ್ಕೆ ತಲುಪಿತು.ಬಾಗಿ ಬಂದವರ ಬದುಕೆಲ್ಲ ಬಂಗಾರ
ಶ್ರೀ ಸಿದ್ಧಾರೂಢ ಸ್ವಾಮಿಗಳ ಬಳಿ ಬಾಗಿ ಬಂದವರ ಬದುಕೆಲ್ಲ ಬಂಗಾರವಾಗಿದೆ. ಅಂತಹ ಮಹಾಮಹಿಮರ ಆಶೀರ್ವಾದ ನಮ್ಮ ನಾಡಿನ ಜನತೆಗೆ ದೊರೆತಿರುವುದೇ ಪುಣ್ಯ ಎಂದು ಅಣ್ಣಿಗೇರಿ ದಾಸೋಹಮಠದ ಶ್ರೀ ಶಿವಕುಮಾರ ಶ್ರೀಗಳು ಹೇಳಿದರು.ಇಲ್ಲಿಯ ಸಿದ್ಧಾರೂಢ ಮಠದ ಆವರಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಅಂಬಾರಿ ಉತ್ಸವದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಸಿದ್ಧಾರೂಢರ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ಜಾತಿ, ಮತ, ಪಂಥಗಳಿಗೆ ಸೀಮಿತವಾಗದೇ ಎಲ್ಲರಿಗೂ ದಾರಿದೀಪವಾಗಿದ್ದಾರೆ. ವ್ಯಾಸ ಪರಂಪರೆ ನಂತರ ಬದವರೆಲ್ಲರ ಪರಂಪರೆಯನ್ನು ಮೈಗೂಡಿಸಿಕೊಂಡಿದ್ದವರು ಶ್ರೀ ಸಿದ್ಧಾರೂಢರು ಎಂದರು.ಶ್ರೀಮಠದ ಟ್ರಸ್ಟ್ ಕಮಿಟಿ ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಾನಂದ ಭಾರತಿ ಸ್ವಾಮೀಜಿ, ಶ್ರೀ ಪರಿಪೂರ್ಣಾನಂದ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಲಲಿತಾ ಮಾತಾಜಿ, ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣ ಶೆಟ್ಟರ್, ಅಂದಾನಪ್ಪ ಚಾಕಲಬ್ಬಿ ಸೇರಿದಂತೆ ಹಲವರಿದ್ದರು.