ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್‌, ಮೊದಲ ಎರಡು ದಿನ (ಸೆ.28/29) ದಾಖಲಿಸಿದ ಸಾಕ್ಷ್ಯ ಹೇಳಿಕೆಗೆ ಮೂರನೇ ದಿನ (ಸೆ.30ರಂದು) ಹೆಚ್ಚುವರಿಯಾಗಿ ಸೇರಿದ ಅಂಶಗಳನ್ನು ಪರಿಗಣಿಸಬಾರದು ಎಂದು ಕೋರಿ ಆರೋಪಿ ನಟ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್‌, ಮೊದಲ ಎರಡು ದಿನ (ಸೆ.28/29) ದಾಖಲಿಸಿದ ಸಾಕ್ಷ್ಯ ಹೇಳಿಕೆಗೆ ಮೂರನೇ ದಿನ (ಸೆ.30ರಂದು) ಹೆಚ್ಚುವರಿಯಾಗಿ ಸೇರಿದ ಅಂಶಗಳನ್ನು ಪರಿಗಣಿಸಬಾರದು ಎಂದು ಕೋರಿ ಆರೋಪಿ ನಟ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ ಅವರು ಮಂಗಳವಾರ ಈ ಆದೇಶ ಮಾಡಿದ್ದಾರೆ.

ಕಾಮಾಕ್ಷಿಪಾಳ್ಯ ಠಾಣಾ ಪೊಲೀಸ್‌ ಇನ್‌ಸ್ಪೆಕ್ಟರ್‌ ಸುಬ್ರಮಣಿ ಅವರು ಪ್ರದೂಷ್‌ನನ್ನು ಕಳೆದ ಸೆ.28, 29ರಂದು ಜೈಲಿನಿಂದ ಕೋರ್ಟ್‌ಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಪ್ರದೂಷ್‌ ಜೊತೆಗೆ ಮಾತನಾಡಲು ಅವಕಾಶ ಸಿಕ್ಕಿದೆ. ಊಟದ ಸಮಯದಲ್ಲಿ ಪೊಲೀಸ್‌ ಜೀಪ್‌ನಲ್ಲಿ ಪ್ರದೂಷ್‌ ಕೂತಿದ್ದರು. ಆಗ ಯಾವೆಲ್ಲಾ ಸಾಕ್ಷ್ಯ ನುಡಿಯಬೇಕು ಎಂದು ಇನ್‌ಸ್ಪೆಕ್ಟರ್‌ ಹೇಳಿಕೊಟ್ಟಿದ್ದಾರೆ. ಸೆ.29ರಂದು ಪ್ರದೂಷ್‌ ಜೊತೆಗೆ ಅವರ ವಕೀಲರು ಕೋರ್ಟ್‌ಹಾಲ್‌ನಲ್ಲಿ 15 ನಿಮಿಷ ಮಾತನಾಡಿದ್ದಾರೆ. ಇದರಿಂದ ಸೆ.30ರಂದು ಪ್ರದೂಷ್‌, ಸೆ.28, 29ರಂದು ನೀಡಿದ್ದ ಹೇಳಿಕೆಗಳಿಗೆ ಹೆಚ್ಚಿನ ಅಂಶ ಸೇರಿಸಿ ಸಾಕ್ಷ್ಯ ದಾಖಲಿಸಿದ್ದಾರೆ. ಅದು ಪ್ರದೂಷ್‌ ಸಾಕ್ಷ್ಯ ಹೇಳಿಕೆಯ ಪ್ಯಾರಾ 66 ಮತ್ತು 101ರಲ್ಲಿದೆ ಎಂದು ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಆಕ್ಷೇಪಿಸಿದ್ದರು.

ದೋಷಾರೋಪ ಪಟ್ಟಿಯಲ್ಲೇ ಇಲ್ಲ:

ಅಲ್ಲದೆ, ಹೆಚ್ಚುವರಿಯಾಗಿ ಸೇರಿದ ಈ ಸಾಕ್ಷ್ಯವು ಇಡೀ ದೋಷಾರೋಪ ಪಟ್ಟಿಯಲ್ಲಿಯೇ ಇಲ್ಲ. ಅದು ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಿದ್ದು, ಕಾನೂನು ತಜ್ಞರಿಗೆ ಮಾತ್ರ ತಿಳಿಯುವಷ್ಟು ಜಟಿಲತೆಯಿಂದ ಕೂಡಿದೆ. ಹಾಗಾಗಿ, ಇದು ಕಟ್ಟುಕಥೆಯಂತೆ ತೋರಲಿದ್ದು, ಆರೋಪಿ ದರ್ಶನ್‌ ಸಮರ್ಥನೆಗೆ (ಪ್ರತಿವಾದ) ಗಂಭೀರ ಹಾನಿ ಉಂಟು ಮಾಡಲಿದೆ. ದರ್ಶನ್‌ಗೆ ನ್ಯಾಯಯುತ ವಿಚಾರಣೆಯ ಅವಕಾಶ ನಿರಾಕರಿಸಿದಂತಾಗಿದೆ. ಆದ್ದರಿಂದ ಸಾಕ್ಷ್ಯದ ಈ ಭಾಗ ತೀವ್ರ ಸಂಶಯದ ದೃಷ್ಟಿಯಿಂದಲೇ ನೋಡಬೇಕು ಹಾಗೂ ಅದನ್ನು ಪರಿಗಣಿಸಬಾರದು ಎಂದು ಕೋರಿ ದರ್ಶನ್‌ ಅರ್ಜಿ ಸಲ್ಲಿಸಿದ್ದರು.

ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌, ಜೈಲಿನಿಂದ ನ್ಯಾಯಾಲಯಕ್ಕೆ ಪ್ರದೂಷ್‌ನನ್ನು ಕರೆತಂದ ವಾಹನದಲ್ಲಿ ಇನ್‌ಸ್ಪೆಕ್ಟರ್ ಸುಬ್ರಹ್ಮಣಿ ಕೂತೇ ಇರಲಿಲ್ಲ. ಅವರು ಪ್ರದೂಷ್‌ ಇದ್ದ ವಾಹನಕ್ಕೆ ದಾರಿ ತೋರಿಸುವ ಪೈಲಟ್‌ ವ್ಯಾನ್‌ನಲ್ಲಿದ್ದರು. ಇನ್ನು ಪ್ರದೂಷ್‌ ಇದ್ದ ವಾಹನದಲ್ಲಿ ಕೇವಲ ಸಿಎಆರ್‌ ಪೊಲೀಸರಿದ್ದರು. ಅವರು ಬಾಡಿವೋರ್ನ್‌ ಕ್ಯಾಮೆರಾ ಧರಿಸಿದ್ದರು. ಅದರಲ್ಲಿ ಎಲ್ಲಾ ದೃಶ್ಯವಳಿಗಳು ದಾಖಲಾಗಿವೆ. ಇದರಿಂದ ದರ್ಶನ್‌ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಪ್ರದೂಷ್‌ ಅನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆತನ ಸಾಕ್ಷ್ಯವನ್ನು ದಾಖಲಿಸಲಾಗಿದೆ. ದರ್ಶನ್‌ ಮಂಡಿಸಿರುವ ವಾದವು ಸಾಕ್ಷ್ಯಾಧಾರಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿಷಯವಾಗಿದೆ. ಅವುಗಳನ್ನು ಮುಂದಿನ ಹಂತದಲ್ಲಿ ಪರಿಗಣಿಸಬೇಕಾಗುತ್ತದೆ. ಅದರಂತೆ ಉಳಿದ ಸಾಕ್ಷ್ಯದ ಸಂದರ್ಭದಲ್ಲಿ, ಸಾಕ್ಷಿಯ ರಕ್ಷಣೆಗಾಗಿ ಅಥವಾ ವಿಚಾರಣೆಯ ನ್ಯಾಯಸಮ್ಮತತೆ ಕಾಪಾಡಲು, ನ್ಯಾಯಾಲಯದ ಮಧ್ಯಪ್ರವೇಶವು ಅಗತ್ಯವಿರುವಂತಹ ಯಾವುದೇ ನಿರ್ದಿಷ್ಟ ಸನ್ನಿವೇಶ ಗಮನಕ್ಕೆ ಬಂದರೆ, ಆ ಕುರಿತು ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ ದರ್ಶನ್‌ ಅರ್ಜಿ ವಜಾಗೊಳಿಸಿದೆ.

ಪ್ರದೂಷ್‌ ಸಾಕ್ಷ್ಯ ದಾಖಲು:

ಪ್ರದೂಷ್‌ ಮಂಗಳವಾರವೂ ತನ್ನ ಸಾಕ್ಷ್ಯ ದಾಖಲಿಸಿದ್ದಾರೆ. ಆದರೆ, ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಕ್ಷ್ಯ ದಾಖಲು ಪ್ರಕ್ರಿಯೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಇನ್ನು ನೈಜೀರಿಯ ಮೂಲದ ಮಹಿಳಾ ಕೈದಿಯಿಂದ ಪವಿತ್ರಾ ಗೌಡಗೆ ಕಾಟ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಬ್ಯಾರಕ್ ಬದಲಾವಣೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವರದಿ ಮತ್ತು ಪ್ರದೂಷ್‌ಗೆ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸುವ ವಿಚಾರವಾಗಿ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಆ ವರದಿ ಕುರಿತು ಬುಧವಾರ ಆದೇಶ ಪ್ರಕಟ ಮಾಡುವುದಾಗಿ ನ್ಯಾಯಾಲಯ ತಿಳಿಸಿದೆ.