ಸಾರಾಂಶ
ಬೆಂಗಳೂರು : ಪತಿ ದರ್ಶನ್‌ರನ್ನು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದ ವಿಜಯಲಕ್ಷ್ಮೀ ಅವರು ಇದೀಗ ತಮ್ಮ ಇನ್‌ಸ್ಟಾ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣದ ಕುರಿತು ಬೇಸರ, ಸಿಟ್ಟು ವ್ಯಕ್ತಪಡಿಸುತ್ತಿರುವ ಕಾರಣದಿಂದ ಮತ್ತು ಈ ಎಲ್ಲಾ ನಡವಳಿಕೆಗಳ ಕಾರಣದಿಂದ ನೊಂದಿರುವ ಅವರು ಇನ್‌ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.ತಂದೆ ಕುರಿತು ಕೆಟ್ಟ ಕಮೆಂಟ್:
ದರ್ಶನ್ ಪುತ್ರ ಬೇಸರ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ತಂದೆ ದರ್ಶನ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಹಾಕಿದವರ ಮೇಲೆ ದರ್ಶನ್ ಪುತ್ರ ವಿನೀಶ್ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದು, ‘ನಾನು ಭಾವನೆಗಳಿರುವ 15 ವರ್ಷದ ಹುಡುಗ ಎಂಬುದನ್ನು ನೋಡದೆ ನನ್ನ ತಂದೆ ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡಿದ ಮತ್ತು ಮನನೋಯಿಸುವ ಭಾಷೆ ಬಳಸಿದ ಎಲ್ಲರಿಗೂ ಥ್ಯಾಂಕ್ಸ್. ನನ್ನ ತಂದೆ ತಾಯಿಗೆ ಬೆಂಬಲ ಬೇಕಾದಂತಹ ಇಂಥಾ ಕಷ್ಟಕರ ಸನ್ನಿವೇಶದಲ್ಲಿ ನನಗೆ ಶಾಪ ಹಾಕುವುದರಿಂದ ಏನೂ ಬದಲಾಗುವುದಿಲ್ಲ’ ಎಂದು ಬರೆದಿದ್ದಾರೆ.
ಸ್ಟಾರ್ ಆರಾಧನೆ ರೋಗ: ರಾಮ್‌ಗೋಪಾಲ್ ವರ್ಮಾ
ಬೆಂಗಳೂರು: ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ‘ಸ್ಟಾರ್ ಆರಾಧನೆ ಒಂದು ರೋಗ’ ಎಂದಿದ್ದಾರೆ.ದರ್ಶನ್ ಪ್ರಕರಣದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಆರ್‌ಜಿವಿ, ‘ಸ್ಟಾರ್ ನಟನೊಬ್ಬ ತನ್ನ ವೈಯಕ್ತಿಕ ಬದುಕಿನಲ್ಲಿ ಮಧ್ಯಪ್ರವೇಶಿಸಿದ ಅಭಿಮಾನಿಯನ್ನು ಕೊಲ್ಲಲು ತನ್ನ ಇತರ ಡೈ ಹಾರ್ಡ್ ಅಭಿಮಾನಿಗಳನ್ನು ಬಳಸಿಕೊಂಡಿದ್ದಾರೆ. ಸ್ಟಾರ್‌ಗಳ ಮೇಲಿನ ಅಭಿಮಾನಿಗಳ ಅಂಧಾಭಿಮಾನ, ಆರಾಧನಾ ಸಂಸ್ಕೃತಿ ಯಾವ ಮಟ್ಟಿಗೆ ಹೋಗುತ್ತಿದೆ ಎಂಬುದಕ್ಕೆ ಇದು ಉದಾಹರಣೆ. ತಾನು ಆರಾಧಿಸುವ ನಟ ತಾನಂದುಕೊಂಡ ಹಾಗೇ ಬದುಕಬೇಕು ಎಂಬ ಫ್ಯಾನ್ಸ್ ಮನಸ್ಥಿತಿ ಈ ಆರಾಧನೆಯ ಮತ್ತೊಂದು ಮುಖ’ ಎಂದು ಬರೆದಿದ್ದಾರೆ.‘ಸಾಮಾನ್ಯವಾಗಿ ನಿರ್ದೇಶಕರು ಚಿತ್ರಕಥೆ ಬರೆದ ಬಳಿಕ ಸಿನಿಮಾ ಶೂಟಿಂಗ್ ಆರಂಭಿಸುತ್ತಾರೆ. ಕೆಲವೊಮ್ಮೆ ಶೂಟಿಂಗ್ ಸೆಟ್ನಲ್ಲೂ ಚಿತ್ರಕಥೆ ಬರೆಯುತ್ತಾರೆ. ಆದರೆ, ದರ್ಶನ್ ಪ್ರಕರಣದಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ಚಿತ್ರಕಥೆ ಬರೆಯಲಾಗುತ್ತಿದೆ’ ಎಂದೂ ವರ್ಮಾ ವ್ಯಂಗ್ಯವಾಡಿದ್ದಾರೆ.
ದರ್ಶನ್ ವಿರುದ್ಧ ಪ್ರತಿಭಟನೆ: ಶಾಸಕ ತಿಪ್ಪಾರೆಡ್ಡಿಗೆ ಬೆದರಿಕೆ
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಖಂಡಿಸಿ ಚಿತ್ರದುರ್ಗದಲ್ಲಿ ಬುಧವಾರ ನಡೆದ ಬೃಹತ್ ಪ್ರತಿಭಟಯಲ್ಲಿ ಪಾಲ್ಗೊಂಡಿದ್ದಕ್ಕೆ ಅಪರಿಚಿತನೊಬ್ಬ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಗೆ ಬೆದರಿಕೆ ಕರೆ ಮಾಡಿದ್ದಾನೆ. ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದ ಪ್ರತಿಭಟನೆಯಲ್ಲಿ ತಿಪ್ಪಾರೆಡ್ಡಿ ಭಾಷಣ ಮಾಡಿ ತಮ್ಮ ಮನೆಗೆ ವಾಪಸಾಗುವಾಗ ಅಪರಿಚಿತನೊಬ್ಬ ಕರೆ ಮಾಡಿ ‘ತಿಪ್ಪಾರೆಡ್ಡಿ ಅಂದ್ರೆ ನೀವೇನಾ’ ಎಂದು ಪ್ರಶ್ನಿಸಿದ್ದಾನೆ. ನಂತರ ‘ಪ್ರತಿಭಟನೆ ಯಾಕೆ ಮಾಡುತ್ತಿದ್ದೀರಿ? ದರ್ಶನ್ ಆರೋಪಿ ಎಂಬುದಕ್ಕೆ ನಿಮ್ಮ ಬಳಿ ಏನು ಸಾಕ್ಷಿ ಇದೆ’ ಎಂದು ಕೇಳಿದ್ದಾನೆ ಎಂದು ತಿಳಿದುಬಂದಿದೆ.
ಈ ಮಾತಿಗೆ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ, ಪ್ರತಿಭಟನೆ ಮಾಡುತ್ತಿರುವ ವಿಚಾರ ಇಡೀ ದೇಶಕ್ಕೆ ಗೊತ್ತಿದೆ. ನೀನ್ಯಾರು ಹೇಳು ಅಂದಿದ್ದಾರೆ. ಆದರೆ ಕರೆ ಮಾಡಿದ ವ್ಯಕ್ತಿ ಹೆಸರು ಹೇಳಿಲ್ಲ. ಮಾತು ಮುಂದುವರಿಸುವುದು ಬೇಡ ಎಂದು ತಿಪ್ಪಾರೆಡ್ಡಿ ಕಾಲ್ ಕಟ್ ಮಾಡಿ ಗನ್‌ಮ್ಯಾನ್ ಗೆ ಪೋನ್ ಕೊಟ್ಟು ಕರೆಯನ್ನು ಬ್ಲಾಕ್ ಲಿಸ್ಟ್ ಗೆ ಹಾಕುವಂತೆ ಸೂಚಿಸಿದ್ದಾರೆ.ಬೆದರಿಕೆ ಕರೆ ಬಂದಿರುವ ಕುರಿತು ಗುರುವಾರ ಸುದ್ದಿಗಾರರಿಗೆ ತಿಳಿಸಿದ ತಿಪ್ಪಾರೆಡ್ಡಿ, ಇಷ್ಟೆಲ್ಲಾ ದೊಡ್ಡ ಗದ್ದಲಗಳು ಆಗುತ್ತಿದ್ದರೂ ಬೆದರಿಕೆ ಕರೆ ಮಾಡುತ್ತಾರೆ ಅಂದರೆ ಏನರ್ಥ? ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಪೊಲೀಸರು ನಂಬರ್ ಕೇಳಿದ್ದಾರೆ. ನಾನೇನು ದೂರು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.