ಸಾರಾಂಶ
ದೊಡ್ಡಬಳ್ಳಾಪುರ: ಭಕ್ತಿ ಮಾರ್ಗದ ಮೂಲಕ ಬದುಕಿನ ಮೌಲ್ಯ ಪ್ರತಿಪಾದಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಪುರಂದರದಾಸ, ತ್ಯಾಗರಾಜರು ಸೇರಿದಂತೆ ಹಲವು ದಾಸರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ವದ್ದಾಗಿದೆ ಎಂದು ಸಂಗೀತ ತಜ್ಞ ಕೆ.ವಿ.ಎಂ. ಗಿರಿಧರ್ ಹೇಳಿದರು.
ನಗರದ ಕನ್ನಡ ಜಾಗ್ರತ ಭವನದಲ್ಲಿ ಸುಸ್ವರ ಟ್ರಸ್ಟ್‌ನ 26ನೇ ವಾರ್ಷಿಕೋತ್ಸವ ಹಾಗೂ ತ್ಯಾಗರಾಜ ಮತ್ತು ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.ಜ್ಞಾನಾರ್ಜನೆ, ವೇದಾಧ್ಯಯನಕ್ಕಿಂತ ಭಕ್ತಿಯೇ ಮುಖ್ಯವೆಂದು ಭಕ್ತಿ ಮಾರ್ಗದಲ್ಲಿ ನಡೆದ ದಾಸರಲ್ಲಿ ತ್ಯಾಗರಾಜರು ಮತ್ತು ಪುರಂದರದಾಸರು ಅಗ್ರಗಣ್ಯರು, ಕರ್ನಾಟಕ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಪುರಂದರದಾಸರು, ಭಗವಂತನ ಆರಾಧನೆ ಮೂಲಕ ಬದುಕಿನ ತತ್ವಗಳನ್ನು ತಿಳಿಸಿದರು ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ ಮಹತ್ವದ್ದಾಗಿದೆ. ಸ್ತ್ರೀ ಸಮಾನತೆ, ಸಮಾಜಕ್ಕೆ ಒಳಿತನ್ನು ಬಯಸುವ ಮನೋಭಾವ ಮುಂತಾದ ಸಂದೇಶಗಳನ್ನು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದಾರೆ. ಸಮಾಜದಲ್ಲಿ ಮೇಲು- ಕೀಳು ಭಾವನೆ ಅಳಿಸಲು ಶ್ರಮಿಸಿದ್ದಾರೆ. ಪುರಂದರದಾಸರಿಂದ ಪ್ರೇರಿತರಾದ ತ್ಯಾಗರಾಜರು ತಮ್ಮ ಪಂಚ ರತ್ನ ಕೃತಿಗಳಲ್ಲಿ ದೈವಾರಾಧನೆಯೊಂದಿಗೆ ಮಾನವ ಜನ್ಮದ ಸಾರ್ಥಕತೆ ಕುರಿತು ಹೇಳಿದ್ದಾರೆ ಎಂದು ತಿಳಿಸಿದರು.ವಿದುಷಿ ಶಾರದಾ ಶ್ರೀಧರ್, ಸಂಗೀತ ಮನೋ ವಿಕಾಸ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಗೌರಿಬಿದನೂರಿನ ಪಿಟೀಲು ವಾದಕಿ ಜಯಶ್ರೀ ಗಿರಿಧರ್ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸುಸ್ವರ ಟ್ರಸ್ಟ್ ಅಧ್ಯಕ್ಷ ಎ.ಆರ್. ನಾಗರಾಜನ್, ಸುಸ್ವರ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಪಿ.ಶ್ರೀನಿವಾಸಮೂರ್ತಿ, ಖಜಾಂಚಿ ಎಂ.ಬಿ. ಗುರುದೇವ, ಟ್ರಸ್ಟಿಗಳಾದ ಎಸ್.ನಾರಾಯಣ್, ಎ.ಒ.ಆವಲಮೂರ್ತಿ, ಎನ್.ದೇವರಾಜ್, ಟಿ.ವಿ.ರವಿ, ಟಿ.ಗಿರೀಶ್, ಕಾರ್ಯಕ್ರಮ ಆಯೋಜನಾ ಸಮಿತಿ ಅಧ್ಯಕ್ಷೆ ಶಾರದಾಶ್ರೀಧರ್, ಉಪಾಧ್ಯಕ್ಷ ವಿ.ಪಿ.ರಘುನಾಥರಾವ್, ಕಾರ್ಯದರ್ಶಿ ಶ್ವೇತಾನಾರಾಯಣ್, ಸುಮಾ ಸುನಿಲ್, ಲತಾಸುನಿಲ್, ಮಧುಶ್ರೀ, ಮುಖೇಶ್, ಸಂಧ್ಯಾ, ಎನ್. ಭಾಸ್ಕರ್ ಇದ್ದರು.