ಸಾರಾಂಶ
ಕರ್ನಾಟಕದ ಸಾಂಸ್ಕೃತಿಕ ಸಾಮರಸ್ಯ, ಸಮಾನತೆ ಮತ್ತು ಸರ್ವ ಜನಾಂಗದ ಶಾಂತಿ ತೋಟದ ಪರಂಪರೆಯನ್ನು ಮತ್ತಷ್ಟು ಬಲಪಡಿಸಿ ಉಳಿಸಲು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸೂಕ್ತವಾಗಿದೆ. ದಸರಾ ಹಬ್ಬವು ನಾಡ ಹಬ್ಬವಾಗಿ, ಯಾವುದೇ ಧರ್ಮ ಅಥವಾ ಸಮುದಾಯದ ಮೇಲೆ ನಿರ್ಬಂಧಗಳನ್ನು ಹೇರುವಂತಹದ್ದಲ್ಲ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಕನ್ನಡ ಲೇಖಕಿ ಬಾನು ಮುಷ್ತಾಕ್ ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ದಲಿತ ಸಂಘರ್ಷ ಸಮಿತಿ ತಹಸೀಲ್ದಾರ್ ಚೇತನಾ ಯಾದವ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ದಸಂಸ ಕಾರ್ಯಕರ್ತರು ತಹಸೀಲ್ದಾರ್ ರನ್ನು ಭೇಟಿ ಮಾಡಿ, ಬಾನು ಮುಷ್ತಾಕ್ ರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಸರ್ಕಾರದ ಕ್ರಮ ಸರಿಯಾಗಿದೆ. ಅದನ್ನು ಬೆಂಬಲಿಸುವುದಾಗಿ ಮನವಿ ಸಲ್ಲಿಸಿದರು.
ಕರ್ನಾಟಕದ ಸಾಂಸ್ಕೃತಿಕ ಸಾಮರಸ್ಯ, ಸಮಾನತೆ ಮತ್ತು ಸರ್ವ ಜನಾಂಗದ ಶಾಂತಿ ತೋಟದ ಪರಂಪರೆಯನ್ನು ಮತ್ತಷ್ಟು ಬಲಪಡಿಸಿ ಉಳಿಸಲು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸೂಕ್ತವಾಗಿದೆ. ದಸರಾ ಹಬ್ಬವು ನಾಡ ಹಬ್ಬವಾಗಿ, ಯಾವುದೇ ಧರ್ಮ ಅಥವಾ ಸಮುದಾಯದ ಮೇಲೆ ನಿರ್ಬಂಧಗಳನ್ನು ಹೇರುವಂತಹದ್ದಲ್ಲ ಎಂದರು.ವಿಜಯನಗರ ಸಾವ್ರಾಜ್ಯದ ಕಾಲದಿಂದ ಆರಂಭವಾದ ದಸರಾ ಆಚರಣೆ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಕಾಲದಲ್ಲೂ ಸರಾಗವಾಗಿ ನಡೆದುಕೊಂಡು ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಜೊತೆಯಲ್ಲಿ ಕೂರಿಸಿಕೊಂಡು ಜಂಬೂ ಸವಾರಿ ಮಾಡಿದ ಇತಿಹಾಸವು ನಮ್ಮ ಮುಂದೆ ಇದೆ. ಇದು ಹಿಂದು-ಮುಸ್ಲಿಂ ಸಾಮರಸ್ಯದೊಂದಿಗೆ ಹಬ್ಬಗಳನ್ನು ಆಚರಿಸುವ ನಮ್ಮ ಪರಂಪರೆಯನ್ನು ಸಾಬೀತುಪಡಿಸುತ್ತದೆ ಎಂದರು.
ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮ ಕೊಡುಗೆಯ ಮೂಲಕ ಗೌರವಿಸಲ್ಪಟ್ಟ ಲೇಖಕಿಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಬೂಕರ್ ಪ್ರಶಸ್ತಿಯನ್ನು ತಂದು ಕೊಡುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಹಾಗಾಗಿ ಸರ್ಕಾರ ಅವರನ್ನು ಕೈ ಬಿಡದೆ ದಸರಾ ಉದ್ಘಾಟನೆಯನ್ನು ನೆರವೇರಿಸಬೇಕು ಎಂದು ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಪುರುಷೋತ್ತಮ್, ಪಾಂಡು, ತೇಜಸ್, ದಲಿತ ಸಂಘಟನೆಯ ರವಿಚಂದ್ರ, ಮುಂಡಗದೊರೆ ಮೋಹನ್, ಗಂಗಾಧರ್, ಕುಬೇರಪ್ಪ, ಕೆ.ಟಿ.ರಂಗಯ್ಯ, ಕುಮಾರ್ ಸೇರಿದಂತೆ ಇತರರು ಇದ್ದರು.