ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಪರಿಶಿಷ್ಟ ಜಾತಿ, ಪಂಗಡ ಮತ್ತು ಟಿಎಸ್‌ಪಿ ಅನುದಾನದಲ್ಲಿ ಪುನಃ ೧೩ ಸಾವಿರ ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ದುರ್ಬಳಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ದಸಂಸ ಮುಖಂಡ ವೆಂಕಟಗಿರಿಯಯ್ಯ ರಾಜ್ಯಪಾಲರನ್ನು ಒತ್ತಾಯಿಸಿದರು.ದಲಿತರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ರಾಜ್ಯ ಪರಿಶಿಷ್ಟ ಜಾತಿ- ಪಂಗಡಗಳ ಉಪಯೋಜನೆ ಕಾಯ್ದೆ (೨೦೧೩)ನ್ನು ನೆಪಮಾತ್ರಕ್ಕೆ ಜಾರಿ ಮಾಡಿ ಈ ಕಾಯ್ದೆಯಲ್ಲಿ ಕಲಂ ೭(ಸಿ), ೭(ಡಿ)ಗಳನ್ನು ಸೇರಿಸುವ ಮೂಲಕ ಕಾಯ್ದೆಯ ಮೂಲತತ್ವದ ವಿರೋಧಿಸಿ ವಿಕೃತಿ ಮೆರೆಯುತ್ತಾ ದಲಿತ ಸಮುದಾಯಕ್ಕೆ ಘನಘೋರ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯರವರಿಂದ ಕಾಯ್ದೆಯನ್ನು ವಿಕೃತಿಗೊಳಿಸಲ್ಪಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈಗಿನ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪರವರ ಮೂಲಕವೇ ಅನುದಾನ ದುರ್ಬಳಕೆಗೆ ಸಮ್ಮತಿ ಪಡೆಯುತ್ತಿದ್ದಾರೆ. ಇದಕ್ಕೆ ಎಲ್ಲಾ ದಲಿತ ಮಂತ್ರಿ- ಶಾಸಕರ ಸಹಮತ ಪಡೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗುಲಾಮ ಸಂಸ್ಕೃತಿಗೆ ಶರಣಾದಂತೆ ಕಾಣುತ್ತಿರುವುದು ವಿಷಾದದ ಸಂಗತಿ. ತಾನೊಬ್ಬ ಆರ್ಥಿಕ ತಜ್ಞರೆನಿಸಿಕೊಳ್ಳಲು ದಲಿತ ಸಮುದಾಯದ ಅನುದಾನವನ್ನೇ ದುರ್ಬಳಕೆ ಮಾಡಿ ಆರ್ಥಿಕ ಅಭಿವೃದ್ಧಿಗೆ ವಿರೋಧಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಪಾಲಿಗೆ ನಯವಂಚಕರಾಗಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರು ಹತ್ತು ವರ್ಷ ಕಳೆದ ಬಳಿಕ ರಾಜ್ಯ ಎಸ್ಸಿ, ಎಸ್ಟಿ ಮತ್ತು ಟಿಎಸ್ಪಿ ಕಾಯ್ದೆಯ ಕಲಂ ೭(ಸಿ)ತೆಗೆಯಲು ಶಿಫಾರಸು ಮಾಡಿದ್ದಾರಂತೆ. ಕಾಯ್ದೆ ಜಾರಿ ಮಾಡುವಾಗ ಇವರೇ ಶಾಸನಸಭೆಯಲ್ಲಿದ್ದರು. ಆಗ ದಲಿತರ ಚಳವಳಿಯ ಹೋರಾಟದ ಕೂಗನ್ನು ಕೇಳಿಸಿಕೊಳ್ಳದೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂಷಿಸಿದರು.
ಇದುವರೆಗೆ ೧.೫೦ ಲಕ್ಷ ಕೋಟಿ ರು. ಅನುದಾನವನ್ನು ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಸರ್ಕಾರಗಳು ದಲಿತರಿಂದ ವಂಚಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ೨೦೨೫- ೨೬ನೇ ಸಾಲಿನ ಎಸ್ಸಿ, ಎಸ್ಟಿ ಮತ್ತು ಟಿಎಸ್‌ಪಿ ಅನುದಾನ ಹಂಚಿಕೆಯ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಮತ್ತೆ ೧೩ ಸಾವಿರ ಕೋಟಿ ರು. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ನಿರ್ಧರಿಸಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳಿಗೆ ಅನುದಾನ ವರ್ಗಾವಣೆಯಾಗುತ್ತಿರುವ ಬಗ್ಗೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ಸಮಗ್ರ ತನಿಖೆಗೆ ವಹಿಸಲು ಆದೇಶಿಸುವ ಮೂಲಕ ದಲಿತ ಸಮುದಾಯದ ಅಭ್ಯುದಯದ ಮುನ್ನುಡಿ ಬರೆಯುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಿ.ಆನಂದ್, ವೈ.ಸುರೇಶ್‌ಕುಮಾರ್, ಮುತ್ತುರಾಜ, ಕರಿಯಪ್ಪ ಇತರರಿದ್ದರು.