ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ದಸಂಸ ಕಾರ್ಯಕರ್ತರ ಬಂಧನ

| Published : Jul 30 2024, 12:38 AM IST

ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ದಸಂಸ ಕಾರ್ಯಕರ್ತರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರ ಎಸ್‌ಸಿಪಿ, ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ, ವಾಲ್ಮಿಕಿ ನಿಗಮದಲ್ಲಿ ಭ್ರಷ್ಟಾಚಾರ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್‍ಯಕರ್ತರನ್ನು ಪೊಲೀಸರು ಬಂಧಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ದಲಿತರ ಎಸ್‌ಸಿಪಿ, ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ, ವಾಲ್ಮಿಕಿ ನಿಗಮದಲ್ಲಿ ಭ್ರಷ್ಟಾಚಾರ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್‍ಯಕರ್ತರನ್ನು ಪೊಲೀಸರು ಬಂಧಿಸಿದರು.

ನಗರದ ಜಯಚಾಮರಾಜ ವೃತ್ತದಲ್ಲಿ ಸೇರಿದ ಕಾರ್‍ಯಕರ್ತರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಸಿಎಂ ರಾಜೀನಾಮೆಗೆ ಆಗ್ರಹಿಸಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಆನಂದ್, ರಾಜು ನಿಡಘಟ್ಟ, ಸುರೇಶ್‌ಕುಮಾರ್, ಸುಮಿತ್ರಾ ಆನಂದ್, ಪ್ರಸನ್ನ, ಮರಂಕಯ್ಯ, ಕರಿಯಪ್ಪ, ಮುತ್ತುರಾಜು ಸೇರಿದಂತೆ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗಾಗಿ ಮೀಸರಿಸಿದ್ದ ಎಸ್‌ಸಿಪಿ, ಟಿಎಸ್‌ಪಿ ಅನುದಾನ 25,282 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ, 105,469 ಕೋಟಿ ರು. ದುರ್ಬಳಕೆ ಮಾಡಿರುವುದರ ಜೊತೆಗೆ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಭ್ರಷ್ಟಾಚಾರ ನಡೆಸಿ ಆರ್ಥಿಕ ಅಶಿಸ್ತಿನ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸಿಎಂ ಸ್ಥಾದಲ್ಲಿದ್ದುಕೊಂಡೇ ಎಸ್ಸಿ, ಎಸ್ಟಿ ಉಪ ಯೋಜನಾ ಕಾಯ್ದೆ 2013ರಲ್ಲಿ ದಲಿತ ಸಮುದಾಯದ ಅಭಿವೃದ್ಧಿಗಾಗಿ ಮೀಸರಿಸಿದ್ದ ಅನುದಾನವನ್ನು ದುರ್ಬಳಕೆ ಉದ್ದೇಶಕ್ಕಾಗಿಯೇ ಕಲಂ 7(ಸಿ)(ಡಿ) ಸೇರಿಸಿ ದಲಿತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಇಷ್ಟು ದೊಡ್ಡ ಅನ್ಯಾಯವಾಗಿದ್ದರೂ ಸಹ ಈ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಸಚಿವರು ಮತ್ತು ಶಾಸಕರು ರಾಜೀನಾಮೆ ನೀಡಬೇಕು. ಇಲ್ಲವೇ, ರಾಜೀನಾಮೆ ನೀಡದ ಸಚಿವರನ್ನು ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ದಲಿತರಿಗೆ ಮೀಸಲಾಗಿಟ್ಟಿದ್ದ ಅನುದಾನವನ್ನು ಆಯಾ ಕುಟುಂಬಗಳಿಗೆ ತಲಾ 25 ಲಕ್ಷದಂತೆ ಹಂಚಿಕೆ ಮಾಡಬಹುದು. ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲೆ ರಾಜ್ಯ ಪರಿಶಿಷ್ಟ ಜಾತಿ, ವರ್ಗದ ಉಪ ಯೋಜನಾ ಕಾಯ್ದೆ 2013ರನ್ವಯ ಕ್ರಿಮಿನಲ್ ಹಾಗೂ ಪಜಾತಿ, ವರ್ಗದ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಭ್ರಷ್ಟಾಚಾರ ಮಾಡಿಸಿದ ನಂತರ ಎಸ್‌ಐಟಿ ತನಿಖೆ ನಾಟಕವಾಡುತ್ತಿರುವ ಸರ್ಕಾರವೇ ಈ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ನಗರದ ಸಶಸ್ತ್ರ ಪೊಲೀಸ್ ಪೆರೇಡ್ ಮೈದಾನಕ್ಕೆ ಕರೆದೊಯ್ದು ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಿದರು.