ಸಾರಾಂಶ
ರಾಜ್ಯ ಸರ್ಕಾರ ಒಳ ಮೀಸಲಾತಿ ಆದೇಶ ಪಾಲನೆ ಮಾಡಬೇಕು. ಆಗಸ್ಟ್ ಒಂದರಂದು ನೀಡಿರುವ ಆದೇಶವನ್ನು ಜಾರಿ ಮಾಡಬೇಕು.
ಹೊಸಪೇಟೆ: ಸುಪ್ರೀಂಕೋರ್ಟ್ ನೀಡಿರುವ ಒಳ ಮೀಸಲಾತಿ ತೀರ್ಪನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕು. ಈ ಮೂಲಕ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ನ್ಯಾಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ)ಯ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಆದೇಶ ಪಾಲನೆ ಮಾಡಬೇಕು. ಆಗಸ್ಟ್ ಒಂದರಂದು ನೀಡಿರುವ ಆದೇಶವನ್ನು ಜಾರಿ ಮಾಡಬೇಕು. ಇದೊಂದು ಐತಿಹಾಸಿಕ ಆದೇಶವಾಗಿದೆ. ಈ ಆದೇಶವನ್ನು ಪಾಲನೆ ಮಾಡಿದರೆ ಕಳೆದ ಹಲವು ದಶಕಗಳಿಂದ ಅನ್ಯಾಯಕ್ಕೊಳಗಾಗಿರುವ ಜಾತಿಗಳಿಗೆ ಅನುಕೂಲ ಆಗಲಿದೆ ಎಂದು ಒತ್ತಾಯಿಸಿದರು.ಈ ಹಿಂದೆ ಆಂಧ್ರಪ್ರದೇಶ, ಪಂಜಾಬ್, ತಮಿಳುನಾಡು ಸರ್ಕಾರಗಳು ಒಳ ಮೀಸಲಾತಿ ನೀಡಲು ಮುಂದಾಗಿದ್ದವು. ಆದರೆ, ನ್ಯಾಯಾಲಯದ ಆದೇಶಗಳಿಂದ ಹಿನ್ನಡೆಯಾಗಿದ್ದವು. ಈಗ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರಿಂದ ಶೋಷಣೆಗೊಳಗಾದ ಜಾತಿಗಳಿಗೆ ಇದರಿಂದ ಅನುಕೂಲ ಆಗಲಿದೆ. ರಾಜ್ಯ ಸರ್ಕಾರ ಈ ಕೂಡಲೇ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಅವರ ಜನ್ಮದಿನವನ್ನು ಸರ್ಕಾರ ಜೂನ್ 9ರಂದು ಸರ್ಕಾರಿ ಕಾರ್ಯಕ್ರಮ ಎಂದು ಆಚರಿಸಬೇಕು. ಸರ್ಕಾರ ಒಳ ಮೀಸಲಾತಿ ಕಲ್ಪಿಸುವವರೆಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬಾರದು. ಬ್ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ರವಾನಿಸಲಾಯಿತು.
ಮುಖಂಡರಾದ ಎನ್. ದುರುಗೇಶ್, ಬಿ. ತೆಗ್ಗಿನಕೇರಿ ಕೊಟ್ರೇಶ್, ಉದಯಕುಮಾರ, ಕುಮಾರ್ ಮಾಕನಡಕು, ಕೆ. ಲಲಿತಮ್ಮ, ಕಂದಗಲ್ಲು ಪರಶುರಾಮ,ಸ್ವಾಮಿ ರೆಡ್ಡಿ, ಶ್ರೀನಿವಾಸ್ ಮತ್ತಿತರರಿದ್ದರು.