ಸಾರಾಂಶ
 ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿರುದ್ದ ಘೋಷಣೆ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರದದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿ 12 ವರ್ಷಗಳು ಕಳೆದರೂ ಪೂರ್ಣಗೊಳಿಸದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯವರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ದಸಂಸ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿರುದ್ದ ಘೋಷಣೆಗಳನ್ನು ಕೂಗಿದರು. ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಆಗಮಿಸಿದ್ದ ಜಿಲ್ಲಾಧಿಕಾರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಕಾರಿಗಳು, ಅಂಬೇಡ್ಕರ್ ಭವನ ಪೂರ್ಣಗೊಳಿಸುವ ಕುರಿತು ಲಿಖಿತವಾಗಿ ಭರವಸೆ ನೀಡುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.ಸಮಾಜ ಕಲ್ಯಾಣ ಇಲಾಖೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನ ಹಸ್ತಾಂತರಗೊಂಡು 15 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರಾಸಕ್ತಿಯಿಂದ 41 ಕೋಟಿ ರೂ.ಗೆ ಏರಿಕೆಯಾಯಿತು. ನಂತರ, ಅನುದಾನ ಬಿಡುಗಡೆ ಮಾಡಿದರೂ ಸಕಾಲದಲ್ಲಿ ಮುಗಿಸದ ಕಾರಣ ಭವನ ಅಪೂರ್ಣಗೊಂಡಿದೆ ಎಂದು ಅವರು ಆರೋಪಿಸಿದರು.ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅವಕಾಶ ಕೊಡದಂತೆ ಒತ್ತಡ ಹೇರಿದ್ದ ಪಟ್ಟಭದ್ರ ಹಿತಾಶಕ್ತಿಗಳು, ಈಗಲೂ ಅಡ್ಡಿಪಡಿಸುತ್ತಲೇ ಬಂದಿವೆ. ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿ ಆಗಿದ್ದರೂ, ದಲಿತ ವರ್ಗಕ್ಕೆ ಸೇರಿದ ಡಾ.ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದರೂ ಭವನ ಪೂರ್ಣಗೊಳಿಸಲು ಗಮನ ಹರಿಸದೆ ಇರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.ದಸಂಸ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಅಂಬೇಡ್ಕರ್ ಭವನ ಕಾಮಗಾರಿಗೆ 27 ಕೋಟಿ ರೂ. ಅಂದಾಜಿನ ಡಿಪಿಆರ್ ತಯಾರಾಗಿ ಅನುಮೋದನೆಗೆ ಹೋಗಿದೆ. ಸರ್ಕಾರ ಅನುಮೋದನೆ ನೀಡಿದರೆ ಡಿಸೆಂಬರ್ ನಂತರ ಟೆಂಡರ್ ಕರೆದು ಏಪ್ರಿಲ್ ಒಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಮುಖಂಡರಾದ ಶಂಭುಲಿಂಗಸ್ವಾಮಿ, ಬಿ.ಡಿ. ಶಿವಬುದ್ದಿ, ಹೆಗ್ಗನೂರು ನಿಂಗರಾಜು, ಸಿದ್ದರಾಜು ಹೊಸಹಳ್ಳಿ, ಅತ್ತಿಕುಪ್ಪೆ ರಾಮಕೃಷ್ಣ, ಗಟ್ಟವಾಡಿ ಮಹೇಶ, ಶಿವಶಂಕರ್, ಮುತ್ತು ಉಯ್ಯಂಬಳ್ಳಿ, ಶ್ರೀನಿವಾಸ, ಶಿವಕುಮಾರ, ಪ್ರಕಾಶ್, ಕುಮಾರ್, ಶಿವಸ್ವಾಮಿ, ದಾಸಯ್ಯ, ಚಂದನ್, ದಿಲೀಪ್, ತಿಮ್ಮಣ್ಣ, ಕೃಷ್ಣ, ಕಲ್ಲಹಳ್ಳಿ ಕುಮಾರ್, ಸೋಮಶೇಖರ್, ಮಲ್ಲಿಕಾ ಮೊದಲಾದವರು ಇದ್ದರು. ಇದೇ ವೇಳೆ ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲೂ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))