ಯಾದಗಿರಿಯಲ್ಲಿ ಇಂದಿನಿಂದ ನಾಡಹಬ್ಬದ ವೈಭವ
KannadaprabhaNewsNetwork | Published : Oct 15 2023, 12:46 AM IST
ಯಾದಗಿರಿಯಲ್ಲಿ ಇಂದಿನಿಂದ ನಾಡಹಬ್ಬದ ವೈಭವ
ಸಾರಾಂಶ
ದಸರಾ ಉತ್ಸವಕ್ಕೆ ಸಜ್ಜಾದ ಜಿಲ್ಲೆ, ಐತಿಹಾಸಿಕ ಬೆಟ್ಟದಲ್ಲಿ ಭುವನೇಶ್ವರಿ ದೇವಿಗೆ ಪೂಜೆ, ಜಂಬೂ ಸವಾರಿ ನೆನಪಿಸುವ ಸ್ಟೇಷನ್ ಏರಿಯಾದ ಹಿಂದೂ ಸೇವಾ ಸಮಿತಿ ದಸರಾ ಆಚರಣೆ
ಯಾದಗಿರಿ: ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ನಗರದ ವಿವಿಧ ಪ್ರದೇಶ ಹಾಗೂ ದೇವಸ್ಥಾನಗಳಲ್ಲಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಘಟಸ್ಥಾಪನೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಮೈಸೂರು ದಸರಾ ಮಾದರಿಯಲ್ಲೇ ಹಲವೆಡೆ ಹಬ್ಬದ ಮೆರುಗು ಮೂಡಲಿದೆ. ನಗರದ ವಿವಿಧೆಡೆ ವಿದ್ಯುತ್ ದೀಪಗಳಿಂದ ಕಮಾನುಗಳನ್ನು ನಿರ್ಮಿಸಲಾಗಿದೆ. ರಸ್ತೆಯ ಅಕ್ಕ-ಪಕ್ಕದಲ್ಲಿ ಬಣ್ಣ-ಬಣ್ಣದ ವಿದ್ಯುತ್ ದೀಪಗಳ ಸರಗಳನ್ನು ಕಟ್ಟಲಾಗಿದೆ. ನಗರದ ಸ್ಟೇಷನ್ ಭಾಗದಲ್ಲಿ ಹಿಂದೂ ಸೇವಾ ಸಮಿತಿ, ಮಹಾತ್ಮಾ ಗಾಂಧಿ ವೃತ್ತದ ಹತ್ತಿರದ ಶರಣ ನಗರದಲ್ಲಿ ಜೈ ಭವಾನಿ ತರುಣ ಸಂಘ, ಚಕ್ರಕಟ್ಟಾ ಮೂಕಾಂಬಿಕಾ ಶಾಲೆ ಹತ್ತಿರ, ಗಂಜ್ ಪ್ರದೇಶ, ಗಾಂಧಿ ನಗರ, ಕೋಲಿವಾಡ ಬಡಾವಣೆ, ವಿವೇಕಾನಂದ ನಗರ, ಡಾ. ಅಂಬೇಡ್ಕರ್ ವೃತ್ತದ ಹತ್ತಿರ ಹಾಗೂ ನಗರದ ಬೆಟ್ಟದ ಮೇಲಿನ ದೇವಾಲಯದಲ್ಲಿ 9 ದಿನ ಶಿವರಾಮ್ ಮಲ್ಲಣ್ಣ ಕಟ್ಟಿಮನಿಯವರ ನೇತೃತ್ವದಲ್ಲಿ ಉತ್ಸವಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಐತಿಹಾಸಿಕ ಯಾದಗಿರಿ ಬೆಟ್ಟ: ಯಾದಗಿರಿ ಬೆಟ್ಟಕ್ಕೆ ತನ್ನದೇ ಆದ ಇತಿಹಾಸವಿದೆ. ಕಲ್ಯಾಣ ಚಾಲುಕ್ಯರು ಎರಡನೇ ತೈಲಪನ ಕಾಲದಲ್ಲಿ ಹಾಗೂ ಎರಡನೇ ಜಯಸಿಂಹ, 1ನೇ ಸೋಮೇಶ್ವರನ ಕಾಲಾವಧಿಯಲ್ಲಿ ಯಾದಗಿರಿ, ಕೊಳ್ಳಿಪಾಕ, ಕೊಟ್ಟಲಗೇರಿ ಪ್ರದೇಶಗಳಲ್ಲಿ ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಂಡಿದ್ದರು ಎಂಬುದು ಇತಿಹಾಸದ ಕುರುಹುಗಳಿಂದ ತಿಳಿದು ಬರುತ್ತದೆ. 6ನೇ ವಿಕ್ರಮಾದಿತ್ಯದನ ಕಾಲಾವಧಿಯಲ್ಲಿ ಯಾದಗಿರಿಯು ಪ್ರಾಂತ ಪ್ರದೇಶವಾಗಿತ್ತು ಎಂದು ಶಾಸನಗಳಿಂದ ತಿಳಿದುಬರುತ್ತದೆ. ನಗರದಲ್ಲಿರುವ ಬೆಟ್ಟದ ಮೇಲಿನ ಭುವನೇಶ್ವರಿ ದೇಗುಲದಲ್ಲಿ ನವರಾತ್ರಿ ಸಂಭ್ರಮ ಇಮ್ಮಡಿಸಿದೆ. ಸುಮಾರು 900 ಅಡಿ ಎತ್ತರದ ಬೆಟ್ಟದ ಗರ್ಭದಲ್ಲಿ ಉದ್ಭವಿಸಿದ ಭುವನೇಶ್ವರಿ ಮೂರ್ತಿ ಹೊಂದಿರುವ ದೇಗುಲ, ರಮಣೀಯ ನಿರ್ಸಗದ ಮಧ್ಯೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಬೆಟ್ಟದ ಮೇಲಿನ ಭುವನೇಶ್ವರಿ ದೇವಿ ಮಂದಿರದಲ್ಲಿ ಇಂದಿನಿಂದ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಬೆಳಗ್ಗೆ 8.45ಕ್ಕೆ 42ನೇ ವರ್ಷದ ಘಟಸ್ಥಾಪನೆ, ಧ್ವಜಾರೋಹಣ ಮತ್ತು ಭುವನೇಶ್ವರಿ ದೇವಿಗೆ ಮಹಾರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಹಾಗೂ ಸಾವಿರಾರು ಭಕ್ತರಿಗೆ ಮಾಲಾಧಾರಣೆ, ವೃತ ದೀಕ್ಷೆ. ಸೋಮವಾರ ಮುಂಜಾನೆ 09 ರಿಂದ ನವರಾತ್ರಿವರೆಗೆ ಪ್ರತಿಭಾ ಎಸ್.ಸೋನಾರ ವಿವೇಕ ಜಾಗೃತ ಬಳಗದ ವತಿಯಿಂದ ದೇವಿಯ ಸ್ತುತಿಗಳು ಜರಗುವುದು. ಅ.17 ರಿಂದ 21ರವರೆಗೆ ಕನ್ನಡದಲ್ಲಿ ದೇವಿ ಪಾರಾಯಣ ಮತ್ತು ಲಲಿತ ಸಹಸ್ರ ನಾಮವಳಿಗಳು ಜರುಗಲಿವೆ. ಅ.18ರಂದು ನಾರಾಯಣಪೇಟ್ ಪಂಡಿತ್ ಶಿವಾನಂದ್ ಪುರೋಹಿತ ಅವರಿಂದ ದೇವಿ ಸಪ್ತಸತಿ ಪಾರಾಯಣ. ಅ.22ರಂದು ಗಣೇಶನಿಗೆ ಸರ್ವವಿಘ್ನ ನಿವಾರಣೆಗಾಗಿ 42ನೇ ವರ್ಷದ ಗಣಹೋಮ ನೆರವೇರಲಿದೆ. ಅಂದು ರಾತ್ರಿ ಯಾದಗಿರಿಯ ನರಸಿಂಹ ಭಜನಾ ಮಂಡಳಿ ವತಿಯಿಂದ ಭಕ್ತಿ ಪ್ರಧಾನ ಗೀತೆಗಳ ಗಾಯನ ನಡೆಯಲಿದೆ. ಅ.23ರಂದು ಆಚಾರ್ಯ ಲಕ್ಷ್ಮೀಕಾಂತ್ ಅಲ್ಲೂರ್ ಮತ್ತು ಶಿವಾನಂದ್ ಪುರೋಹಿತ್ ನಾರಾಯಣಪೇಟ್ ಪಂಡಿತರ ಪೌರೋಹಿತ್ಯದಲ್ಲಿ 42ನೇ ವರ್ಷದ ಶತಚಂಡಿ ಯಜ್ಞದ ದರ್ಶನ ನಡೆಯಲಿದೆ. ಅ.24 ರಂದು ರಾಮಲಿಂಗೇಶ್ವರ ದೇವರಿಗೆ 42ನೇ ವರ್ಷದ ರುದ್ರಾಭೀಷೇಕ ನೆರವೇರಲಿದೆ ಎಂದು ದೇವಾಲಯದ ದೇವಿ ಉಪಾಸಕರು ಮತ್ತು ಅಧ್ಯಕ್ಷರಾದ ಶಿವರಾಮ್ ಮಲ್ಲಣ್ಣ ಕಟ್ಟಿಮನಿ ತಿಳಿಸಿದ್ದಾರೆ. ಹಿಂದೂ ಸೇವಾ ಸಮಿತಿ: ನಗರದ ರೈಲ್ವೆ ಸ್ಟೇಷನ್‌ನ ಹಿಂದೂ ಸೇವಾ ಸಮಿತಿ ಆಶ್ರಯದಲ್ಲಿ ಇಂದಿನಿಂದ ಅ24 ರವರೆಗೆ ಉತ್ಸವ ನಡೆಯಲಿದೆ. ಭಾನುವಾರ ಸಮೀಪದ ಭೀಮಾ ನದಿಯಿಂದ ಅಂಬಾ ಭವಾನಿ ಮಾತೆಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಭವಾನಿ ದೇವಾಲಯದಲ್ಲಿ ನಿರ್ಮಿಸಲಾಗುವ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ನಂತರ ಸಂಜೆ 7ಕ್ಕೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಪ್ರತಿ ದಿನ ಬೆಳಗ್ಗೆ 8ಕ್ಕೆ, ಸಂಜೆ 7ಕ್ಕೆ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಗುತ್ತದೆ. ಅ.21ರಂದು ಸಂಜೆ 4ಕ್ಕೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ದಾಂಡಿಯ ನೃತ್ಯ, ಕೋಲಾಟ ಸ್ಪರ್ಧೆಗಳು ನಡೆಯುತ್ತವೆ. ಆಯುಧ ಪೂಜೆಯ ದಿನ ಅಬ್ಬೆತುಮಕೂರಿನ ಡಾ.ಗಂಗಾಧರ್ ಸ್ವಾಮೀಜಿ ದೇವಾಲಯಕ್ಕೆ ಭೇಟಿ ನೀಡುವುದು ಸಂಪ್ರದಾಯ. ವಿಜಯ ದಶಮಿಯಂದು ಸಂಜೆ ದೇವಾಲಯದಿಂದ ಬನ್ನಿ ಮಂಟಪದವರೆಗೆ ಭವಾನಿ ಮಾತೆಯ ಮೆರವಣಿಗೆ ನಡೆಯುತ್ತದೆ. ಅಂದು ರಾತ್ರಿ ಸುಮಾರು 800ಕ್ಕೂ ಹೆಚ್ಚು ಭಕ್ತರು ಇಲ್ಲಿಂದ ಶ್ರೀಕ್ಷೇತ್ರ ತುಳಜಾಪುರದ ತುಳಜಾಭವಾನಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಶರಣ ನಗರ: ನಗರದ ಮಹಾತ್ಮಾ ಗಾಂಧಿ ವೃತ್ತದ ಹತ್ತಿರ ವಿರುವ ಶರಣ ನಗರದಲ್ಲಿ ಜೈ ಭವಾನಿ ತರುಣ ಸಂಘದ ಆಶ್ರಯದಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಕಾರ್ಯ ನೇರವೇರಲಿದೆ. 9 ದಿನಗಳವರೆಗೆ ವಿಶೇಷ ಪೂಜೆ, ಸಾಂಸ್ಕಂತಿಕ ಕಾರ್ಯಕ್ರಮಗಳು, ಅನ್ನದಾಸೋಹ, ಸಾಹಿತ್ಯಿಕ ಕಾರ್ಯಕ್ರಮಗಳು, ಸಂಗೀತ ಮತ್ತು ಸಂಜೆ ಇನ್ನೂ ಹಲವಾರು ದಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘ ತಿಳಿಸಿದೆ.