ತಾಯಿ ಚಾಮುಂಡೇಶ್ವರಿ ಆರಾಧನೆ ಮೂಲಕ ಸುಭಿಕ್ಷ ನಾಡು, ಜನರ ಶಾಂತಿ ಮತ್ತು ನೆಮ್ಮದಿಗಾಗಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ತಾಯಿ ಚಾಮುಂಡೇಶ್ವರಿ ಆರಾಧನೆ ಮೂಲಕ ಸುಭಿಕ್ಷ ನಾಡು, ಜನರ ಶಾಂತಿ ಮತ್ತು ನೆಮ್ಮದಿಗಾಗಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 11 ರಿಂದ 21ರವರೆಗೆ ಒಟ್ಟು 11 ದಿನಗಳ ಕಾಲ ಹಮ್ಮಿಕೊಂಡಿರುವ ತುಮಕೂರು ದಸರಾ ಉತ್ಸವಕ್ಕೆ ಭಾನುವಾರ ನಗಾರಿ ಬಾರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು

ಕಳೆದೆರಡು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ತುಮಕೂರು ದಸರಾ ಉತ್ಸವದ ಯಶಸ್ಸಿಗೆ ಕಾರಣರಾದ ಜಿಲ್ಲೆಯ ಜನತೆ, ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ನಾನು ಆಭಾರಿಯಾಗಿದ್ದೇನೆ. ಜಿಲ್ಲಾಡಳಿತದೊಂದಿಗೆ ಜೊತೆ-ಜೊತೆಯಾಗಿ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತಿ, ಪಾಲಿಕೆ ಸೇರಿದಂತೆ ಎಲ್ಲ ಇಲಾಖಾಧಿಕಾರಿಗಳ ಶ್ರಮ ಶ್ಲಾಘನೀಯವೆಂದು ಸ್ಮರಿಸಿದರು.

ಬರಗಾಲದಲ್ಲಿಯೂ ದಸರಾ ಆಚರಣೆ ಏಕೆಂಬ ಕೂಗು ಕೇಳಿ ಬರುತ್ತಿದೆ. ನಾಡಿನಲ್ಲಿ ಉದ್ಭವವಾಗಿರುವ ಅನಾವೃಷ್ಠಿಯನ್ನು ಹೋಗಲಾಡಿಸಲು ಚಾಮುಂಡಿ ದೇವಿಯ ಅನುಗ್ರಹ ನಮಗೆ ಅಗತ್ಯವಿದೆ. ನಾಡಿನ ಮಳೆ-ಬೆಳೆ ಪರಿಸ್ಥಿತಿ ಉತ್ತಮವಾಗಲೆಂದು ಈ ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ಪೂಜಿಸುವುದನ್ನು ಹಿರಿಯರು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಹಿರಿಯರ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವುದೇ ನಮ್ಮ ಈ ಪ್ರಯತ್ನವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ದಸರಾ ಉತ್ಸವದ ಬಗ್ಗೆ ಬಂದ ಕೆಲವು ಟೀಕೆ-ಟಿಪ್ಪಣಿಗಳನ್ನು ಸ್ವೀಕರಿಸಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಂಡು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು.

ದೇವಿಯ ಆಶೀರ್ವಾದದಿಂದ ಜನಸಮುದಾಯ ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳಬೇಕೆಂಬ ದಸರಾ ಉತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಸಾಹಿತಿ ಬೆಳ್ಳಾವಿ ನರಹರಿಶಾಸ್ತ್ರಿ, ನಾಟಕರತ್ನ ಡಾ: ಗುಬ್ಬಿ ವೀರಣ್ಣ, ಅಮರಶಿಲ್ಪಿ ಜಕಣಾಚಾರಿ ಸೇರಿದಂತೆ ಜಿಲ್ಲೆಯ ಹಲವಾರು ಸಾಹಿತಿಗಳು, ಕಲಾವಿದರು ಶ್ರೀಮಂತಗೊಳಿಸಿರುವ ಸಾಹಿತ್ಯ-ಕಲೆ-ಸಂಸ್ಕೃತಿಯನ್ನು ಇಂದಿನ ಯುವಕರು ಉತ್ಸವದಲ್ಲಿ ಪಾಲ್ಗೊಂಡು ತಿಳಿದುಕೊಳ್ಳಬೇಕು ಎಂದರಲ್ಲದೆ ಜಿಲ್ಲೆಯ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೈಗಾರಿಕಾ ಕ್ಷೇತ್ರದಲ್ಲಿ ತುಮಕೂರನ್ನು ಅಗ್ರಸ್ಥಾನಕ್ಕೆ ತರುವ ಆಶಯ ಹೊಂದಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಜನತೆ ದಸರಾ ಉತ್ಸವದ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭವ್ಯವಾಗಿ ನಿರ್ಮಿಸಿರುವ ಡಾ: ಶಿವಕುಮಾರ ಮಹಾಸ್ವಾಮೀಜಿ ಧಾರ್ಮಿಕ ಮಹಾಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ತಾಯಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಮಾತನಾಡಿ ಮನುಷ್ಯನ ಅಂತರಂಗ-ಬಹಿರಂಗ ಶುದ್ಧಿಗಾಗಿ ಇಂತಹ ಹಬ್ಬಗಳ ಆಚರಣೆ ಅತ್ಯಾವಶ್ಯಕ. ಇಲ್ಲಿ ಪೂಜಿಸುವ ಶಕ್ತಿರೂಪಿಣಿ ಚಾಮುಂಡೇಶ್ವರಿಯ ಆಶೀರ್ವಾದ ಜಿಲ್ಲೆಗೆ ದೊರೆಯಲಿ ಎಂದು ತಿಳಿಸಿದರು.

ಎಲೆರಾಂಪುರ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ: ಹನುಮಂತನಾಥ ಮಹಾಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತುಮಕೂರು ದಸರಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ದಸರಾ ಉತ್ಸವ ಆಚರಣೆಯಲ್ಲಿ ತುಮಕೂರು ಎರಡನೇ ಸ್ಥಾನ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳನ್ನೊಳಗೊಂಡ ಈ ದಸರಾ ಆಚರಣೆ ಮನೆ-ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ನುಡಿದರು.ಸುಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಮಠದ ಶ್ರೀ ಷ: ಬ್ರ: ವೀರಭದ್ರ ಶಿವಾಚಾರ್ಯ ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ತಾಯಿ ಚಾಮುಂಡೇಶ್ವರಿಯು ದುಷ್ಟಶಕ್ತಿಯನ್ನು ಸಂಹರಿಸಿದಂತೆ ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮತ್ಸರವನ್ನು ಸಂಹಾರ ಮಾಡಿಕೊಳ್ಳಬೇಕೆಂಬುದೇ ನವರಾತ್ರಿಯ ಆಚರಣೆ ಪ್ರತೀಕವೆಂದು ಮಾರ್ಮಿಕವಾಗಿ ಹೇಳಿದರು.

ಬೆಳ್ಳಾವಿ ಶ್ರೀ ಕಾರದೇಶ್ವರ ಮಠದ ಶ್ರೀ ಶ್ರೀ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಮಾತನಾಡಿ ಜಿಲ್ಲಾ ದಸರಾ ಉತ್ಸವವು “ತುಮಕೂರು ದಸರಾ-ಎಷ್ಟೊಂದು ಸುಂದರ” ಎನ್ನುವಂತೆ ಮಾಡಿದೆ. ಬರಗಾಲವಿದ್ದರೂ ದಸರಾ ಆಚರಣೆ ಮೂಲಕ ಜಿಲ್ಲೆಯಲ್ಲಿ ಉಂಟಾಗಿರುವ ಬರಪರಿಸ್ಥಿತಿಯಿಂದ ಪಾರು ಮಾಡೆಂದು ದೇವಿಸ್ತುತಿ ಮಾಡುವುದು ತಪ್ಪಲ್ಲವೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ ದೇವಿಯನ್ನು ಪ್ರತಿಷ್ಠಾಪಿಸಲು ನಿರ್ಮಿಸಿರುವ ದಸರಾ ಉತ್ಸವದ ಧಾರ್ಮಿಕ ಮಂಟಪವು ಅರಮನೆ ಪ್ರವೇಶ ಮಾಡಿದ ಅನುಭವ ನೀಡುತ್ತದೆ. ದೇವಿಯ ಅಲಂಕಾರವು ಎಲ್ಲರ ಮನದಲೂ ಭಕ್ತಿ-ಭಾವ ಮೂಡುವಂತಿದೆ. ದಸರಾ ಉತ್ಸವವು ಧಾರ್ಮಿಕ ಭಾವನೆ ಮೂಡಿಸುವುದಲ್ಲದೆ ಇಲ್ಲಿ ಏರ್ಪಡಿಸಿರುವ ವಸ್ತುಪ್ರದರ್ಶನವು ವಿದ್ಯಾರ್ಥಿಗಳಿಗೆ ಜಾನಾರ್ಜನೆಯನ್ನೂ ನೀಡುತ್ತದೆ. ತುಮಕೂರಿನ ಜನರು ದೇವಿಯ ಕೃಪಾಕಟಾಕ್ಷದೊಂದಿಗೆ ವಸ್ತುಪ್ರದರ್ಶನದ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ರಾಣಿ ಸತೀಶ್ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ ವಂದಿಸಿದರು.

ವೇದಿಕೆಯಲ್ಲಿ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ. ಜಯಚಂದ್ರ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಎ.ಎನ್. ನಟರಾಜ್ ಗೌಡ, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಹೇಶ್, ಶಾಸಕ ಷಡಕ್ಷರಿ, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಎಚ್.ವಿ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜಾ, ಪಾಲಿಕೆ ಆಯುಕ್ತೆ ಶುಭ, ತಹಸೀಲ್ದಾರ್ ರಾಜೇಶ್ವರಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಡಿಸಿಎಂ ದಂಪತಿಗಳಿಂದ ದೇವಿಗೆ ಪೂಜೆ

ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಶೈಲಪುತ್ರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿ ದೇವಿಗೆ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಹಾಗೂ ಕನ್ನಿಕಾಪರಮೇಶ್ವರಿ ದಂಪತಿಗಳಿಂದ ಪೂಜೆ ಸಲ್ಲಿಸಲಾಯಿತು.

ದಂಪತಿ ಸಮೇತ ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶ್ರೀ ದುರ್ಗಾ ಹೋಮ, ಪೂರ್ಣಾಹುತಿಯಲ್ಲಿ ಭಾಗಿಯಾಗಿ ದೇವಿಯ ಆಶೀವಾದ ಪಡೆದರು. ದಸರಾ ಉತ್ಸವದ ಧ್ವಜಾರೋಹಣಕ್ಕೆ ಪ್ರವೇಶದ್ವಾರದಿಂದ ಡಿಸಿಎಂ ದಂಪತಿ ಹಾಗೂ ಗಣ್ಯರನ್ನು ಹಸಿರು ಸೀರೆಯುಟ್ಟ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ನಂದಿಧ್ವಜಪೂಜೆ ನೆರವೇರಿಸಿ ಧಾರ್ಮಿಕ ವಿಧಿ-ವಿಧಾನಗಳಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಾಯಿತು.