ಸರ್ಕಾರ ಬರ ಎಂದು ಮಾತ್ರ ಘೋಷಣೆ ಮಾಡಿದೆ, ಬರ ಪರಿಹಾರ ಸೇರಿದಂತೆ ಬರಕ್ಕೆ ಸಂಬಂಧಪಟ್ಟಂತೆ ಇನ್ನೂ ಯಾವುದೇ ನೆರವಿಗೆ ಮುಂದಾಗಿಲ್ಲ,

ಬಿ.ರಾಮಪ್ರಸಾದ್‌ ಗಾಂಧಿ ಹರಪನಹಳ್ಳಿ

ಮುಂಗಾರು ಮಳೆ ಕೈ ಕೊಟ್ಟು ಸರ್ಕಾರ ಬರ ಪೀಡಿತ ತಾಲೂಕೆಂದು ಘೋಷಣೆ ಮಾಡಿದರೂ ದಸರಾ ಹಬ್ಬ ತಾಲೂಕಿನಲ್ಲಿ ಜೋರಾಗಿದೆ, ವಿಜಯ ದಶಮಿ ಮುನ್ನಾ ದಿನ ಮಂಗಳವಾರದ ಖಂಡೆ ಪೂಜೆಗೆ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ ಖರೀದಿಗೆ ಜನರು ಸೋಮವಾರ ಸಂಜೆ ಮುಗಿಬಿದ್ದಿದ್ದರು.

ನಗರಸಭೆ ಮುಂಭಾಗ, ಗೌಳೇರ ಪೇಟೆ, ಟಾಕೀಸ್‌ ರಸ್ತೆ, ಹೊಸ ಬಸ್‌ ನಿಲ್ದಾಣದ ಸುತ್ತಮುತ್ತ ಹೂವು, ಹಣ್ಣು, ಕಾಯಿ, ಬಾಳೆಕಂಬ, ಬೂದು ಗುಂಬಳ ಕಾಯಿ ಖರೀದಿ ಜೋರು ನಡೆದಿತ್ತು, ಸೇವಂತಿ ಹೂವು ಒಂದು ಮಾರಿಗೆ ₹100 ರಿಂದ ₹150, ಚಿಕ್ಕ ಬೂದುಗುಂಬಳಕಾಯಿಗೆ ₹80-100 ಹೀಗೆ ಎಲ್ಲವೂ ತುಟ್ಟಿಯಾಗಿದ್ದವು.

ಆದರೆ ಜನರು ತಮ್ಮ ಮನೆ, ಅಂಗಡಿ ಮುಂತಾದ ಕಡೆ ಖಂಡೆ ಪೂಜೆ ಹಾಗೂ ತಮ್ಮ ವಾಹನಗಳಿಗೆ ಪೂಜೆ ನೆರವೇರಿಸಲು ಖರೀದಿಯಲ್ಲಿ ತಲ್ಲೀನರಾಗಿದ್ದರು. ಬಟ್ಟೆ ಅಂಗಡಿಗಳು ಗಿಜಿಗುಟ್ಟುತ್ತಿದ್ದವು, ಆದರೆ ಜ್ಯುವೆಲ್ಲರಿ ಶಾಪ್‌ ಗಳು ಮಾತ್ರ ಅಷ್ಟೊಂದು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದವು.

ಸರ್ಕಾರ ಬರ ಎಂದು ಮಾತ್ರ ಘೋಷಣೆ ಮಾಡಿದೆ, ಬರ ಪರಿಹಾರ ಸೇರಿದಂತೆ ಬರಕ್ಕೆ ಸಂಬಂಧಪಟ್ಟಂತೆ ಇನ್ನೂ ಯಾವುದೇ ನೆರವಿಗೆ ಮುಂದಾಗಿಲ್ಲ, ಆದರೂ ಜನರು ದಸರಾ ಹಬ್ಬದಲ್ಲಿ ದುರ್ಗೆ ಪೂಜೆಗೆ ಹಿಂದೆ ಸರಿದಿಲ್ಲ ಎಂಬುದು ಕಾಣುತ್ತಿದೆ.

ಒಂದೆಡೆ ಖಂಡೆ ಪೂಜೆಗೆ ಜನರು ಭರ್ಜರಿ ಸಿದ್ಧತೆ ನಡೆಸುತ್ತಿದ್ದರೆ, ದೇವಸ್ಥಾನಗಳಲ್ಲಿ ಪ್ರತಿದಿನ ಒಂದೊಂದು ರೂಪ ನೀಡಿ ವಿಶೇಷ ಪೂಜೆ ಪುನಸ್ಕಾರ ನಡೆದಿದೆ, ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ಧ ಉಚ್ಚೆಂಗೆಮ್ಮ ದೇವಾಲಯದಲ್ಲಿ ದಸರಾ ಕಾರ್ಯಕ್ರಮಗಳು ಸಂಪ್ರದಾಯದಂತೆ ಜರುಗಿವೆ, ದೇವರ ತಿಮಲಾಪುರ ಲಕ್ಷಿವೆಂಕಟೇಶ್ವರ ದೇವಾಲಯ, ನಗರದ ವಾಸವಿ ಕಲ್ಯಾಣ ಮಂಟಪದ ಬಳಿ ಇರುವ ನಗರೇಶ್ವರ ಹಾಗೂ ವಾಸವಿದೇವಿಯಗೆ ಪ್ರತಿ ದಿನ ಒಂದೊಂದು ನವದುರ್ಗೆಯರ ರೂಪ ನೀಡಿ ಪೂಜೆ ಸಲ್ಲಿಸಲಾಗುತ್ತದೆ.

ಸೇವಂತಿ ಹೂವು ಹಾಕಿದವರು ಅಂತರ ಜಲ ಕಡಿಮೆಯಾಗಿ ಕೊಳವೆ ಬಾವಿ ಬಹಳಷ್ಟು ಕೆಳಕ್ಕೆ ಹೋಗಿದ್ದರೂ ಸ್ವಲ್ಪ ನೀರಿನಲ್ಲಿ ಇಳುವರಿ ಕಡಿಯೆಯಾಗಿದ್ದರೂ ದಸರಾ ಬಂದಿದ್ದರಿಂದ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ, ಒಂದು ಕಿಲೋಗೆ ₹150 ರಿಂದ ₹200 ದೊರಕಿದೆ. ಶೃಂಗಾರ ತೋಟ, ಕಸವನಹಳ್ಳಿ, ನಿಚ್ಚವನಹಳ್ಳಿ, ಹರಿಯಮ್ಮನಹಳ್ಳಿ, ಜೋಷಿಲಿಂಗಾಪುರ ಮುಂತಾದ ಕಡೆ ಸೇವಂತಿ ಹೂವಿನ ಬೆಳೆ ಬೆಳೆದಿದ್ದಾರೆ. ಮುಂಗಾರು ಮಳೆ ಸರಿಯಾಗಿ ಆಗಿದ್ದರೆ ಸಾಕಷ್ಟು ಲಾಭ ಈ ಹೂವಿನ ಬೆಳೆಗಾರರು ಕಾಣುತ್ತಿದ್ದರು. ಆದರೂ ಹಾಕಿದ ಬಂಡವಾಳ ತೆಗೆಯುವಲ್ಲಿ ದಸರಾ ಆಸರೆಯಾಗಿದೆ ಎನ್ನಬಹುದು.

ಎರಡು ಎಕರೆ ಸೇವಂತಿ ಹಾಕಿದ್ದೆ ಮಳೆ ಕೈ ಕೊಟ್ಟಿದ್ದರಿಂದ ಹಾಳಾಗಿ ಹೋಗಿ ಶೇ.25 ರಷ್ಟು ಮಾತ್ರ ಹೂವು ಬಂದಿದೆ, ಆದರೆ ದಸರಾ ಹಬ್ಬ ಬಂದಿದ್ದರಿಂದ ಕಿಲೊಗೆ ₹200 ರಿಂದ ₹250 ವರೆಗೂ ಮಾರಾಟ ಮಾಡಲಾಗುತ್ತಿದೆ, ದಸರಾ ಬಂಡವಾಳ ಹಿಂತಿರುಗಿಸಿದೆ, ಪೂರ್ತಿ ಬಂದಿದ್ದರೆ ಇನ್ನೂ ಹೆಚ್ಚು ಲಾಭ ಆಗುತ್ತಿತ್ತು, ಏನು ಮಾಡುವುದು ನಮ್ಮ ಹಣೆ ಬರಹ ಇಷ್ಟೇ ಆಗಿದೆ ಎಂದು ಹರಪನಹಳ್ಳಿ ಶೃಂಗಾರ ತೋಟದ ಸೇವಂತಿ ಬೆಳೆಗಾರ ಇಮ್ರಾನ್‌ ಪಾಟೀಲ್ ಎಂದರು.

ಅರ್ಧಎಕರೆ ಸೇವಂತಿ ಹಾಕಿದ್ದೆ ಮಳೆ ಇಲ್ಲದಿದ್ದರಿಂದ ಬೋರ್‌ ನೀರು ಕಡಿಮೆಯಾಗಿ ಇಳುವರಿ ಬಹಶಃ ಕುಸಿಯಿತು, ಆದರೂ ದಸರಾ ಸ್ವಲ್ಪಮಟ್ಟಿಗೆ ಕೈ ಹಿಡಿದಿದೆ, ಪುನಃ ಈಗ ಮತ್ತೆ ಹಾಕಿದ್ದೇನೆ ಮುಂದೆ ನೋಡಬೇಕು ಎಂದು ಶೃಂಗಾರ ತೋಟದ ಸೇವಂತಿ ಬೆಳೆಗಾರ ನಾಗರಾಜ ತಿಳಿಸಿದ್ದಾರೆ.