ದಸರಾ ಸಾಂಸ್ಕೃತಿಕ ಸೌರಭ; ಅರಮನೆಯಲ್ಲಿ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಸಂಗೀತಕ್ಕೆ ಅಭಿಮಾನಿಗಳು ಫಿದಾ

| Published : Sep 24 2025, 01:00 AM IST

ದಸರಾ ಸಾಂಸ್ಕೃತಿಕ ಸೌರಭ; ಅರಮನೆಯಲ್ಲಿ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಸಂಗೀತಕ್ಕೆ ಅಭಿಮಾನಿಗಳು ಫಿದಾ
Share this Article
  • FB
  • TW
  • Linkdin
  • Email

ಸಾರಾಂಶ

ನಾದಬ್ರಹ್ಮ ಸಂಗೀತಸಭಾದಲ್ಲಿ ಕೀಲುಕುದುರೆ, ಸುಗಮ ಸಂಗೀತ, ನಾದಲಹರಿ- ತಾಳವಾದ್ಯ, ಜಾನಪದ ಗೀತೆ, ಗೀತಗಾಯನ, ಮಾತನಾಡುವ ಗೊಂಬೆ ಹಾಗೂ ಜಾದೂ ಕಾರ್ಯಕ್ರಮ ನಡೆಯಿತು.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರು ಎಂಬ ಹೆಸರಿಗೆ ತಕ್ಕಂತೆ ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ, ನೃತ್ಯ, ನಾಟಕ ಮತ್ತು ಕಲಾಸಕ್ತರಿಗೆ ರಸದೌತಣ ನೀಡಿತು.

ವಿಶ್ವವಿಖ್ಯಾತ ಮೈಸೂರು ಅರಮನೆ ಮುಂಭಾಗದ ವೇದಿಕೆ ಸೇರಿದಂತೆ 9 ಕಡೆ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯತೆಯಿಂದ ಕೂಡಿವೆ. ಮಂಗಳವಾರ ಸಹ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಿ ಜರುಗಿತು.

ಅರಮನೆಯಂಗಳಲ್ಲಿ ಸಂಗೀತ

ಅರಮನೆ ವೇದಿಕೆಯಲ್ಲಿ ಕೇರಳದ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಪ್ರಸ್ತುತಪಡಿಸಿದ ಸಮಕಾಲೀನ ಶಾಸ್ತ್ರೀಯ ಸಂಗೀತಕ್ಕೆ ನೆರೆದಿದ್ದ ಪ್ರೇಕ್ಷಕರು ಫಿದಾ ಆದರು. ಮೈಸೂರಿನ ವಿವಿಧೆಡೆ ನೆಲೆಸಿರುವ ಮಲೆಯಾಳಿಗಳು, ಕೇರಳ ಮೂಲದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರಮನೆಯಲ್ಲಿ ಸೇರಿ, ಬ್ಯಾಂಡ್ ಕಲಾವಿದರ ಹಾಡುಗಳೊಂದಿಗೆ ಹಾಡುವ ಮೂಲಕ ಕುಣಿದು ಸಂಭ್ರಮಿಸಿದರು.

ಭಾರತೀಯ ವಿದ್ಯಾಭವನದ ಎಸ್.ಆರ್. ರವಿಕುಮಾರ್ ನೇತೃತ್ವದ ನೃತ್ಯರೂಪಕ, ಕಲಬುರಗಿಯ ರವಿರಾಜ್ ಎಸ್. ಹಾಸು ತಂಡದ ವಚನ ದಾಸ ತತ್ವ ವೈಭವ, ಸ್ಮಿತಾ ಶ್ರೀಪತಿ ತಂಡದ ಭರತನಾಟ್ಯ, ಡಾ. ಶ್ವೇತಾ ಮಡಪ್ಪಾಡಿ ತಂಡದ ಕನ್ನಡ ಕಾಜಾಣ ಹಾಡು ಪಾಡು, ಅಭಿಷೇಕ್ ರಘುರಾಮ್ ತಂಡದ ಕರ್ನಾಟಕ ಶಾಸ್ತ್ರೀಯ ಸಂಗೀತವು ಅರಮನೆ ಆವರಣವನ್ನು ಸಂಗೀತಮಯಗೊಳಿಸಿತು.

ವಿವಿಧೆಡೆ ಸಂಗೀತ- ನಾಟಕ ವೈವಿಧ್ಯ

ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಅಂಕುಶ್ ಸುರೇಶ್ ಕಡಬ ಅವರಿಂದ ಕರ್ನಾಟಕ ಶಾಸ್ತ್ರೀಯ ಕೊಳಲುವಾದನ, ಶ್ರದ್ಧಾ ವಿ. ಶಾಖಂಡಕಿ ತಂಡದ ಸುಗಮ ಸಂಗೀತ, ಶಾಂತಲ ವಟ್ಟಂ ತಂಡದಿಂದ ಕಥಕ್ ಶಾಸ್ತ್ರೀಯ ನೃತ್ಯ, ರಜತ್ ಶರ್ಮಾ ತಂಡ ದಾಸವಾಣಿ ಹಾಗೂ ರಂಜಿನಿ ಕಲಾತಂಡ ಪ್ರಸ್ತುತಪಡಿಸಿದ ಮಹಿಷ ಮರ್ದಿನಿ ಯಕ್ಷಗಾನವು ಗಮನ ಸೆಳೆಯಿತು.

ಕಲಾಮಂದಿರದಲ್ಲಿ ಒರಿಸ್ಸಾ ಕಲಾವಿದರ ಒಡಿಸ್ಸಿ ನೃತ್ಯ, ವೀರಗಾಸೆ, ವಯೋಲಿನ್, ಜಾನಪದ ಗಾಯನ, ಭರತನಾಟ್ಯ, ತೊಗಲುಗೊಂಬೆಯಾಟ ನಂತರ ಕೃಷ್ಣ ವೈಭವ ನೃತ್ಯರೂಪಕವಿತ್ತು.

ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಚಿಟ್ಟಿಮೇಳ, ಜಾನಪದ ಗೀತೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣಾ ವಾದನ, ಭರತನಾಟ್ಯ, ಸುಗಮ ಸಂಗೀತ ಜರುಗಿತು.

ನಾದಬ್ರಹ್ಮ ಸಂಗೀತಸಭಾದಲ್ಲಿ ಕೀಲುಕುದುರೆ, ಸುಗಮ ಸಂಗೀತ, ನಾದಲಹರಿ- ತಾಳವಾದ್ಯ, ಜಾನಪದ ಗೀತೆ, ಗೀತಗಾಯನ, ಮಾತನಾಡುವ ಗೊಂಬೆ ಹಾಗೂ ಜಾದೂ ಕಾರ್ಯಕ್ರಮ ನಡೆಯಿತು.

ಇನ್ನೂ ಚಿಕ್ಕಗಡಿಯಾರ ವೃತ್ತದಲ್ಲಿರುವ ವೇದಿಕೆಯಲ್ಲಿ ಗಾರುಡಿಗೊಂಬೆ, ತಮಟೆ ವಾದನ, ಭಜನೆ, ತತ್ವಪದ ಗಾಯನ, ಜಾನಪದ ಗಾಯನವು ದೇವರಾಜ ಮಾರುಕಟ್ಟೆ ಕಡೆಗೆ ಬಂದವರಿಗೆ ಕೇಳಿಸಿತು.

ಪುರಭವನದಲ್ಲಿ ಬಳ್ಳಿ ಬಾಡಿತು ಹೂವು ಅರಳಿತು- ಸಾಮಾಜಿಕ ನಾಟಕ, ಶೂರ್ಪನಕಿ ಗರ್ವಭಂಗ- ಪೌರಾಣಿಕ ನಾಟಕ ಹಾಗೂ ಬಸ್ ಕಂಡಕ್ಟರ್- ಹವ್ಯಾಸಿ ನಾಟಕವು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸುಗಮ ಸಂಗೀತ, ಇರುಳು ಹಗಲಾಗುವುದೊಳಗೆ ನಾಟಕ ಹಾಗೂ ವಾರ್ಡ್ ನಂ.6 ನಾಟಕ ಪ್ರದರ್ಶನಗೊಂಡವು.

ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಸಿತಾರ್ ವಾದನ, ನೃತ್ಯರೂಪಕ, ಹನುಮಂತ ಲಮಾಣಿ- ಖಾಸಿಂ ಆಲಿ ಅವರ ಜನಪದ ಸಂಗೀತದ ಬಳಿಕ ಚಾಮಚಲುವೆ ನಾಟಕವು ಪ್ರದರ್ಶಿಸಲಾಯಿತು.

ಇದು ಮಾತ್ರವಲ್ಲದೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.