ಮಹಾಲಯ ಅಮಾವಾಸ್ಯೆ ಹಾಗೂ ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಿ ಕ್ಷೇತ್ರದಲ್ಲಿ ಶನಿವಾರ ರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಪಟ್ಟಕ್ಕೆ ಕೂರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಹಾಲಯ ಅಮಾವಾಸ್ಯೆ ಹಾಗೂ ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣಗೌರಿ ಕ್ಷೇತ್ರದಲ್ಲಿ ಶನಿವಾರ ರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಪಟ್ಟಕ್ಕೆ ಕೂರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.ಗ್ರಾಮದ ಹೊರವಲಯದ ಶಿವಬಸವಕುಮಾರ ಆಶ್ರಮದ ರಸ್ತೆಯ ಬದಿಯಲ್ಲಿರುವ ನೂತನ ಶಿಲಾ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಹಾಗೂ ಸಂಕಲ್ಪದಂತೆ ನಾಡಿನ ಜನರ ಒಳಿತಿಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.ಪ್ರತಿ ಅಮಾವಾಸ್ಯೆಯಂದು ನಡೆಯುವ ಸಂಪ್ರದಾಯದಂತೆ ಮುಂಜಾನೆ ಶ್ರೀ ಮೂಲಸ್ಥಾನ ಸ್ವರ್ಣಗೌರಿ ದೇವಿ ಹಾಗೂ ಹಾರನಹಳ್ಳಿ ಕೋಡಿಮಠದ ಮಹಾತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿಗೆ ಅರ್ಚಕರು ಶಾಸ್ತ್ರೋಕ್ತವಾಗಿ ಕುಂಕುಮಾರ್ಚನೆ ನೆರವೇರಿಸಿದರು. ದಸರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಮಾವಿನ ತಳಿರು ತೋರಣ ಹಾಗೂ ಬಾಳೆಕಂದುಗಳಿಂದ ಅಲಂಕರಿಸಲಾಗಿತ್ತು. ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರವು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿ ಭಕ್ತರ ಗಮನ ಸೆಳೆಯಿತು.ರಾತ್ರಿ 9 ಗಂಟೆಗೆ ಅರ್ಚಕರು ಜಗನ್ಮಾತೆ ಮೂಲಸ್ಥಾನ ಸ್ವರ್ಣಗೌರಿ ದೇವಿ ಹಾಗೂ ಶ್ರೀ ಚನ್ನಬಸವೇಶ್ವರ ಸ್ವಾಮಿಗೆ ಮಹಾಮಂಗಳಾರತಿ ಮತ್ತು ಕರ್ಪೂರದಾರತಿ ಬೆಳಗಿದರು. ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು. ಈ ಸಂದರ್ಭದಲ್ಲಿ ಮಾಡಾಳು ಗ್ರಾಮದ ಗಂಗಮ್ಮ, ಗುದ್ಲಪ್ಪ ಶೆಟ್ರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳ ವತಿಯಿಂದ ಆಗಮಿಸಿದ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.ಮಾಡಾಳು ಸೇರಿದಂತೆ ಕೊಪ್ಪಲು, ಸೀತಾಪುರ, ಯರೆಹಳ್ಳಿ, ವೈಜಿಹಳ್ಳಿ, ಪಿ. ಹೊಸಳ್ಳಿ, ಕಿತ್ತನಕೆರೆ, ದೋಣಕಟ್ಟೆ, ಬೊಮ್ಮಸಮುದ್ರ, ಕೆ. ಶಂಕರನಹಳ್ಳಿ, ಕಡಲಮಗೆ, ಡಿ.ಎಂ. ಕುರ್ಕೆ, ಶಶಿವಾಳ, ರಾಂಪುರ, ಹಾರನಹಳ್ಳಿ ಹಾಗೂ ಅಣ್ಣಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.