ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ಈ ಭಾಗದಲ್ಲಿಯೇ ನೂತನ ಪ್ರಯೋಗವಾಗಿರುವ ದುರ್ಗಾದೌಡ ಎನ್ನುವ ಧಾರ್ಮಿಕ ನಡಿಗೆ ವಿಶಿಷ್ಟ ಕಾರ್ಯಕ್ರಮವು 10 ದಿನಗಳ ಕಾಲ ಸಡಗರ, ಸಂಭ್ರಮ ಭಕ್ತಿ ಭಾವದಿಂದ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ಈ ಭಾಗದಲ್ಲಿಯೇ ನೂತನ ಪ್ರಯೋಗವಾಗಿರುವ ದುರ್ಗಾದೌಡ ಎನ್ನುವ ಧಾರ್ಮಿಕ ನಡಿಗೆ ವಿಶಿಷ್ಟ ಕಾರ್ಯಕ್ರಮವು 10 ದಿನಗಳ ಕಾಲ ಸಡಗರ, ಸಂಭ್ರಮ ಭಕ್ತಿ ಭಾವದಿಂದ ನೆರವೇರಲಿದೆ. ಪ್ರಥಮ ದಿನವಾದ ಭಾನುವಾರ ಪಟ್ಟಣದ ಗ್ರಾಮದೇವತೆ ಶ್ರೀದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಚಾಲನೆ ನೀಡಿದರು.

ಭಗವಾ ಧ್ವಜ ಮತ್ತು ದೇವಿಯ ಆಯುಧ ತ್ರಿಶೂಲಕ್ಕೆ ಪೂಜೆ ಸಲ್ಲಿಸಿ, ವಿವಿಧ ದೇವತೆಗಳ ಘೋಷಣೆ ಮೊಳಗಿಸುವ ಮೂಲಕ ನೂರಾರು ಕಾರ್ಯಕರ್ತರ ಜೊತೆ ಮೊದಲ ದಿನದ ಧಾರ್ಮಿಕ ನಡಿಗೆಯು ನಸುಕಿನ ಜಾವ 5.30ಕ್ಕೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಹೊರಟು ಸುತ್ತಮುತ್ತಲಿನ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಪ್ರಥಮ ದಿವಸವನ್ನು ಮುಕ್ತಾಯಗೊಳಿಸಲಾಯಿತು.

ಈ ವೇಳೆ ಪ್ರಮುಖರಾದ ಗುರುನಾಥ ದಾನಪ್ಪನವರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವ, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳು ಉಳಿಯಬೇಕು ಎನ್ನುವ ಉದ್ದೇಶವು ಈ ಕಾರ್ಯಕ್ರಮದ್ದಾಗಿದೆ. ಧಾರ್ಮಿಕ ನೆಲೆಗಟ್ಟಿನ ಮೇಲೆ ಹಬ್ಬದ ಆಚರಣೆ ವೈಭವದಿಂದ ಆಚರಿಸುವ ಉದ್ದೇಶವಾಗಿದ್ದು, ಇದರಲ್ಲಿ ಎಲ್ಲರೂ ಸಮಾನತೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ನಸುಕಿನ ಜಾವದಲ್ಲಿಯೇ ನೂರಾರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಪಾಲ್ಗೊಂಡಿರುವದು ಸಂತೋಷದ ಸಂಗತಿಯಾಗಿದ್ದು ಹಬ್ಬದ ಎಲ್ಲ ದಿನಗಳಲ್ಲಿಯೂ ಈ ಧಾರ್ಮಿಕ ನಡಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕೆಂದರು.

ದಸರಾ ಉತ್ಸವ ಸಮಿತಿ ಸಂಚಾಲಕ ಬಸವರಾಜ ಅರಳಿ ಮಾತನಾಡಿದರು. ದುರ್ಗಾದೌಡ ಸಮಿತಿ ಅಧ್ಯಕ್ಷ ರಾಘವೇಂದ್ರ ಪೂಜಾರ, ಬಸವೇಶ ಮಹಾಂತಶೆಟ್ಟರ, ಶಂಕರ ಬಾಳಿಕಾಯಿ, ಶಿವಯೋಗಿ ಅಂಕಲಕೋಟಿ, ಮಹೇಶ ಹೊಗೆಸೊಪ್ಪಿನ್, ಗುರುರಾಜ ಪಾಟೀಲ, ಕುಲಕರ್ಣಿ, ಶಿವನಗೌಡ ಪಾಟೀಲ, ಶಿರುಂದ, ಗಂಗಾಧರ ಪುರಾಣಿಕಮಠ, ಪ್ರವೀಣ ಪಾಟೀಲ, ಬಸವರಾಜ ಬಳಿಗಾರ, ಪ್ರಕಾಶ ಮೇವುಂಡಿ, ಮುತ್ತಣ್ಣ ಮುಳಗುಂದ, ತಿಪ್ಪಣ್ಣ ಸಂಶಿ, ದೇವಪ್ಪ ಗಡೇದ, ಗಣೇಶ ಬನ್ನಿ, ರಾಜು ಗುಡಗೇರಿ, ಮುದಕಣ್ಣ ಕೊಡ್ಲಿ, ರವಿ ಲಿಂಗಶೆಟ್ಟಿ, ಅರುಣಾ ಕಣವಿ, ಸುಜಾತಾ ಅತ್ತಿಗೇರಿ, ಪುಷ್ಪಾ ಅರಳಿ ಮುಂತಾದವರಿದ್ದರು.