ಧರ್ಮ, ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲೆ, ನಾಟಕ, ಸಂಗೀತ, ನೃತ್ಯ, ಗಾಯನ, ಗಮಕ, ಕುಸ್ತಿ, ಕಲೆಗಳ ಪ್ರೋತ್ಸಾಹದ ಏಕತೆಯ ಪರಂಪರೆಯೇ ದಸರಾ ಆಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಧರ್ಮ, ಸಂಸ್ಕೃತಿ, ಪರಂಪರೆ, ಸಾಹಿತ್ಯ, ಕಲೆ, ನಾಟಕ, ಸಂಗೀತ, ನೃತ್ಯ, ಗಾಯನ, ಗಮಕ, ಕುಸ್ತಿ, ಕಲೆಗಳ ಪ್ರೋತ್ಸಾಹದ ಏಕತೆಯ ಪರಂಪರೆಯೇ ದಸರಾ ಆಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂಥ್ ಕ್ಲಬ್ ಕನ್ನಡ ಮತ್ತು ಮಹಿಳಾ ಸಂಘಟನೆಗಳು ಹಮ್ಮಿಕೊಂಡಿರುವ ಮೈಸೂರು ದಸರಾ ಸಂಸ್ಕೃತಿ, ಪರಂಪರೆ, ಸಂಭ್ರಮ ಮತ್ತು ಗೊಂಬೆ ಪ್ರದರ್ಶನ ಹಾಗೂ ‘ದೇವಾಲಯವನ್ನು ಭೇಟಿ ಮಾಡೋಣ ಇತಿಹಾಸವನ್ನು ತಿಳಿಯೋಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೈಸೂರು ಪರಂಪರೆ ದಸರಾ ಮೂಲಕ ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿದೆ. ನಾಡಿನ ಸಮಗ್ರ ಕ್ಷೇತ್ರಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿ ಆಡಳಿತದಲ್ಲಿ ವ್ಯವಸ್ಥಿತ ರೀತಿಯಲ್ಲಿ ಸಾಧನೆ ಮಾಡಿದ ಮೈಸೂರು ಒಡೆಯರು ವಿಜಯನಗರ ಸಾಮ್ರಾಜ್ಯದ ದಸರಾ ವನ್ನು ಮೈಸೂರು ನಗರದಲ್ಲಿ ಆರಂಭಿಸುವ ಮೂಲಕ ನಾಡಿನ ಜನರ ಏಕತೆ, ಭಾವೈಕ್ಯತೆ ಮತ್ತು ನೆಮ್ಮದಿಗೆ ಕಾರಣರಾದ ಮೈಸೂರು ಮಹಾರಾಜರುಗಳಿಗೆ ನಾವೆಲ್ಲರೂ ಕೂಡ ಸದಾಕಾಲ ಋಣಿಯಾಗಿರಬೇಕು ಎಂದು ಹೇಳಿದರು.

ಚಾಮರಾಜನಗರ ಮೈಸೂರು ಸಂಸ್ಥಾನದ ಒಂದು ಭಾಗ. ಚಾಮರಾಜನಗರದಲ್ಲಿ ಚಾಮರಾಜ ಒಡೆಯರ್ ಹುಟ್ಟಿದ ನೆನಪಿಗಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಿ ಚಾಮರಾಜನಗರ ನಿರ್ಮಿಸಿ ಇಂದು ಜಿಲ್ಲೆಯಾಗಿ ಪರಿವರ್ತನೆಯಾಗಿ ತಮ್ಮದೇ ನೆಲೆಯನ್ನು ಕಂಡುಕೊಳ್ಳಲು ನಗರದ ಜನತೆಗೆ ಮೈಸೂರು ಸಂಸ್ಥಾನ ಅವಕಾಶ ನೀಡಿದೆ ಎಂದರು.

ದಸರಾ ಸಂಭ್ರಮದ ಮೂಲಕ ನಾವೆಲ್ಲರೂ ಸುಖ, ಶಾಂತಿ ನೆಮ್ಮದಿಯನ್ನು ಕಾಣೋಣ ಮನೆ ಮನೆಯಲ್ಲಿಯೂ ದೇವಿಯ ಪೂಜೆಯನ್ನು ಮಾಡುವ ಮೂಲಕ ಚೈತನ್ಯವನ್ನು ಹೆಚ್ಚಿಸಿಕೊಳ್ಳೋಣ. ದಸರಾ ಮಹೋತ್ಸವದ ಕುರಿತು ನೂರಾರು ಸಾಹಿತ್ಯ ಕೃತಿಗಳು ಹೊರಬಂದಿವೆ. ಕವಿಗಳು ಸಾಹಿತಿಗಳು ದಸರಾ ಕುರಿತು ತಮ್ಮದೇ ಆದ ಭಾವನೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ದಸರಾ ಆಚರಣೆ ಮಾಡುವುದು ಹೆಮ್ಮೆ ಎಂದು ತಿಳಿಸಿದರು.

ಶಿಕ್ಷಕ ಯಳಂದೂರು ರಂಗನಾಥ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ದಸರಾ ಸಾಹಿತ್ಯ ಸಂಭ್ರಮವನ್ನು ಆಚರಣೆ ಮಾಡುವ ಮೂಲಕ ದಸರಾ ವೈಶಿಷ್ಟವನ್ನು ತಿಳಿಸುವ ಕಾರ್ಯ ಮಾಡುತ್ತಿರುವುದು ಉತ್ತಮವಾದದ್ದು. ಮೈಸೂರು ಮಹಾರಾಜರ ಕೊಡುಗೆಯನ್ನು ಸದಾ ಕಾಲ ಸ್ಮರಿಸಿಕೊಳ್ಳಬೇಕು. ಅವರು ಕಲೆ ಸಾಹಿತ್ಯ ಸಂಗೀತಕ್ಕೆ ನೀಡಿದ ಪ್ರೋತ್ಸಾಹ ಮೈಸೂರು ಪ್ರಾಂತ್ಯದ ನೂರಾರು ಕಲಾವಿದರು ವಿಶ್ವ ಪ್ರಸಿದ್ಧಿಯಾದರು. ದಸರಾ ಮೂಲಕ ವಿಶ್ವದ ಪ್ರಸಿದ್ಧ ನಗರವಾಗಿ ಮೈಸೂರು ಹೊರಹೊಮ್ಮಿದೆ. ಸಂಸ್ಕೃತಿಯ ನಗರವಾಗಿದೆ ಎಂದರು.

ಮಾಜಿ ನಗರಸಭಾ ಸದಸ್ಯ ಪದ್ಮ ಪುರುಷೋತ್ತಮ್, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಜಗದೀಶನ್, ಎಲ್.ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ, ರವಿಚಂದ್ರ ಪ್ರಸಾದ್, ಸರಸ್ವತಿ, ಸುರೇಶ್ ಗೌಡ, ಮಂಜುನಾಥ ಇತರರು ಹಾಜರಿದ್ದರು.