ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ಹಿರಿಯ ಲೇಖಕಿ ವೈದೇಹಿ ಅವರನ್ನು ಮಣಿಪಾಲದ ಅವರ ನಿವಾಸ ಇರುವಂತಿಗೆಗೆ ಮೈಸೂರಿನಿಂದ ದಸರಾ ಕವಿಗೋಷ್ಠಿ ಉಪಸಮಿತಿ ಶುಕ್ರವಾರ ಬಂದು ಸನ್ಮಾನಿಸುವ ಮೂಲಕ ಆಹ್ವಾನಿಸಿತು.

ಮಣಿಪಾಲ: ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ಹಿರಿಯ ಲೇಖಕಿ ವೈದೇಹಿ ಅವರನ್ನು ಮಣಿಪಾಲದ ಅವರ ನಿವಾಸ ಇರುವಂತಿಗೆಗೆ ಮೈಸೂರಿನಿಂದ ದಸರಾ ಕವಿಗೋಷ್ಠಿ ಉಪಸಮಿತಿ ಶುಕ್ರವಾರ ಬಂದು ಸನ್ಮಾನಿಸುವ ಮೂಲಕ ಆಹ್ವಾನಿಸಿತು. ಈ ಸಂದರ್ಭ ಮಾತನಾಡಿದ ವೈದೇಹಿ, ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಹಾರೈಸಿದರು.

ಇಂದು ಕವಿಗೋಷ್ಠಿಗಳಿಗೆ ಜನರು ಹೆಚ್ಚು ನೆರೆಯುತ್ತಾರೆ. ಕೇಳುವವರೂ ಹೆಚ್ಚಿದ್ದಾರೆ. ನನಗಂತೂ ಹೊಸ ತಲೆಮಾರಿನ ಕವಿಗಳು ಕಾವ್ಯಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ ಎಂದು ಹೇಳಿದರು.2007ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದೆ. ಇದಕ್ಕೂ ಮೊದಲೊಮ್ಮೆ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದೆ ಎಂದವರು ಸ್ಮರಿಸಿದರು.

ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್‌ ಎಂ.ಬಿ., ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ, ವೈದೇಹಿ ಪುತ್ರಿ ಚಿತ್ರಕಲಾವಿದೆ ಪಲ್ಲವಿ ಅನಿಲ್ ಹಾಗೂ ಅವರ ಅಳಿಯ ಟಿ.ಅನಿಲಕುಮಾರ್ ಉಪಸ್ಥಿತರಿದ್ದರು.