ದಸರಾ; ಆಯುಧಪೂಜೆ ಆಚರಣೆಗೆ ಸಕ್ಕರೆ ನಗರ ಮಂಡ್ಯ ಸಜ್ಜುDasara; Sugar city Mandya gears up for Ayudha Puja celebrations

| Published : Oct 01 2025, 01:00 AM IST

ದಸರಾ; ಆಯುಧಪೂಜೆ ಆಚರಣೆಗೆ ಸಕ್ಕರೆ ನಗರ ಮಂಡ್ಯ ಸಜ್ಜುDasara; Sugar city Mandya gears up for Ayudha Puja celebrations
Share this Article
  • FB
  • TW
  • Linkdin
  • Email

ಸಾರಾಂಶ

ಆಯುಧಪೂಜೆ ಹಬ್ಬದಲ್ಲಿ ಸಿಹಿ ತಿನಿಸುಗಳನ್ನು ಪೂಜೆಗೆ ಇಡುವುದರಿಂದ ಹಾಗೂ ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅದಕ್ಕೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವುದರಿಂದ ಬೆಲೆಯಲ್ಲೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಬೂಂದಿ-೨೫೦ ರು., ಮಿಲ್ಕ್ ಬರ್ಫಿ-೬೦೦ ರು., ಹಾರ್ಲಿಕ್ಸ್ ಬರ್ಫಿ-೬೯೦ ರು., ಲಾಡು-೩೪೦ ರು., ಮೈಸೂರು ಪಾಕ್-೬೯೦ ರು., ಜಹಂಗೀರ್-೨೮೦ ರು., ಸೋಂಪಾಪುಡಿ-೬೦೦ ರು., ಬಾದೂಶಾ-೨೮೦, ಮೋತಿಪಾಕ್-೪೮೦, ಹಲ್ವಾ-೪೦೦ ರು. ಸೇರಿದಂತೆ ಅನೇಕ ಸಿಹಿ ಪದಾರ್ಥಗಳು ಮತ್ತು ಪ್ರತಿ ಕೆಜಿ ಸ್ಪೆಷಲ್ ಖಾರ-೩೮೦ ರು., ಸಾಮಾನ್ಯ ಖಾರ-೩೦೦ ರು.ವರೆಗೆ ಮಾರಾಟವಾಗುತ್ತಿದ್ದವು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಕ್ಕರೆ ಜಿಲ್ಲೆಯಲ್ಲಿ ಆಯುಧ ಪೂಜೆ ಹಬ್ಬಕ್ಕೆ ಸಡಗರ, ಸಂಭ್ರಮದ ಸಿದ್ಧತೆ ನಡೆದಿದೆ. ಅಂಗಡಿಗಳು, ವಾಹನಗಳನ್ನು ಸ್ವಚ್ಛಗೊಳಿಸಿಕೊಂಡಿರುವ ಸಾರ್ವಜನಿಕರು ಪೂಜಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಂಗೇರಿದ ವಾತಾವರಣ ಸೃಷ್ಟಿಯಾಗಿತ್ತು.

ಆಯುಧ ಪೂಜೆ ಬುಧವಾರ (ಅ.೧) ಇರುವ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಅಂಗಡಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ವಾಹನಗಳನ್ನು ತೊಳೆದು ಪೂಜೆಗೆ ಸಿದ್ಧಗೊಳಿಸುವ ಕಾರ್ಯವನ್ನು ಜೊತೆಯಲ್ಲೇ ನಡೆಸುತ್ತಿದ್ದದು ಕಂಡುಬಂದಿತು.

ಆಯುಧಪೂಜೆಗೆ ಅಗತ್ಯವಿರುವ ಸಾಮಾನುಗಳ ಖರೀದಿಗೆ ಗ್ರಾಮಾಂತರ ಪ್ರದೇಶಗಳಿಂದ ಜನರು ನಗರಕ್ಕೆ ಆಗಮಿಸಿದ್ದರು. ನಗರದ ವಿ.ವಿ.ರಸ್ತೆ, ನೂರಡಿ ರಸ್ತೆ, ಪೇಟೆಬೀದಿ, ಹೊಸಹಳ್ಳಿ ಸರ್ಕಲ್, ಮಹಾವೀರ ಸರ್ಕಲ್, ಎಸ್.ಡಿ. ಜಯರಾಂ ವೃತ್ತ, ಕಲಾಮಂದಿರ ರಸ್ತೆ, ಮಹಿಳಾ ಸರ್ಕಾರಿ ಕಾಲೇಜು ಮುಂಭಾಗ, ಸೇಂಟ್ ಥಾಮಸ್ ಚರ್ಚ್ ಮುಂಭಾಗ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬೂದುಗುಂಬಳ, ಹೂವು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆಹಣ್ಣುಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರದಲ್ಲಿ ನಿರತರಾಗಿದ್ದರು.

ಬೂದಗುಂಬಳ, ನಿಂಬೆಹಣ್ಣಿಗೆ ಬೇಡಿಕೆ:

ಆಯುಧಪೂಜೆಗೆ ಬೂದಗುಂಬಳಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವುದು ಸಾಮಾನ್ಯ. ಅದೇ ರೀತಿ ಸಣ್ಣ ಬೂದಗುಂಬಳದಿಂದ ದೊಡ್ಡ ಬೂದುಗುಂಬಳದವರೆಗೆ ಪ್ರತಿ ಕೆಜಿಗೆ ೫೦ ರು.ನಂತೆ ಮಾರಾಟ ಮಾಡಲಾಗುತ್ತಿತ್ತು. ಕನಿಷ್ಠ ೩೦ ರು.ರಿಂದ ಗರಿಷ್ಠ ೧೨೦ ರು.ವರೆಗೆ ಬೂದಗುಂಬಳ ಮಾರಾಟವಾಗುತ್ತಿತ್ತು. ದೊಡ್ಡ ಅಂಗಡಿ ಹಾಗೂ ದೊಡ್ಡ ವಾಹನಗಳ ಮಾಲೀಕರು ಅಗತ್ಯಕ್ಕೆ ತಕ್ಕಂತೆ ಬೂದಗುಂಬಳಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದುದು ಕಂಡುಬಂದಿತು.

ಬಾಳೆ ಕಂದು ೩೦ ರಿಂದ ೧೦೦ ರು. ಬೆಲೆ ಇತ್ತು. ದೊಡ್ಡ ಗಾತ್ರದ ನಿಂಬೆ ಹಣ್ಣು ೫ ರು.ಗೆ ಮಾರಾಟವಾಗುತ್ತಿತ್ತು. ಸಾಮಾನ್ಯ ದಿನಗಳಲ್ಲಿ ೫೦ ರಿಂದ ೬೦ ರು.ವರೆಗೆ ಇದ್ದ ಸೇವಂತಿಗೆ ಹೂವಿನ ಬೆಲೆ ಹಬ್ಬದ ಪ್ರಯುಕ್ತ ಕನಿಷ್ಠ ೮೦ ರು.ನಿಂದ ೧೦೦ ರು. ತಲುಪಿತ್ತು. ಪ್ರತಿ ಮಾರು ಮಲ್ಲಿಗೆ ಹೂವು-೨೦೦ ರು., ಮರಳೆ ಹೂ-೧೦೦ ರು.. ಕನಕಾಂಬರ-೨೦೦ ರು., ಕಾಕಡ ಹೂ -೧೦೦ ರು., ಗುಲಾಬಿ ಒಂದಕ್ಕೆ ೧೫ ರಿಂದ ೨೦ ರು., ಮಲ್ಲಿಗೆ ಹಾರ ೫೦೦ ರು., ಸುಗಂಧರಾಜ ಹಾರ ೧೫೦ ರು., ಚೆಂಡು ಹೂವಿನ ಹಾರ ೬೦ ರು., ಕೆ.ಜಿ.ಗೆ ೮೦ ರು., ಬಿಡಿ ಹೂ ೨೫೦ ಗ್ರಾಂಗೆ ೧೦೦ ರು. ಸೇರಿದಂತೆ ಹಲವು ಹೂವುಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು.

ಹಾರಗಳ ಬೆಲೆಯಲ್ಲಿ ಹೆಚ್ಚಳ

ವಾಹನಗಳಿಗೆ ಹಾಕುವ ಹೂವಿನ ಹಾರಗಳ ಬೆಲೆ ದುಪ್ಪಟ್ಟು ಏರಿಕೆಯಾಗಿತ್ತು. ಸಾಮಾನ್ಯ ದಿನಗಳಲ್ಲಿ ೧೦೦ ರು. ಇದ್ದ ಹೂವಿನ ಹಾರಗಳು ಹಬ್ಬದ ಪ್ರಯುಕ್ತ ೨೦೦ ರಿಂದ ೨೫೦ ರು., ದೊಡ್ಡ ಗುಲಾಬಿ ಹೂವಿನ ಹಾರಗಳು ೩೦೦ ರು.ನಿಂದ ೫೦೦ ರು.ವರೆಗೆ ಮಾರಾಟವಾಗುತ್ತಿದ್ದವು. ಆಯುಧಪೂಜೆಗೆ ಅಂಗಡಿ, ವಾಹನಗಳಿಗೆಲ್ಲಾ ಹೂವು ಹಾಗೂ ನಿಂಬೆ ಹಣ್ಣಿನ ಅವಶ್ಯಕತೆ ಇರುವುದರಿಂದ ಇವರೆಡಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿತ್ತು. ಅದಕ್ಕೆ ತಕ್ಕಂತೆ ವ್ಯಾಪಾರಸ್ಥರೂ ಬೆಲೆಯಲ್ಲಿ ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದು ಕಂಡುಬಂತು. ಜನತೆ ಒಂದಷ್ಟು ಚೌಕಾಶಿ ಮಾಡಿ ಸಾಮಗ್ರಿಗಳನ್ನು ಕೊಳ್ಳುವುದರಲ್ಲಿ ಮಗ್ನರಾಗಿದ್ದರು.

ಹಣ್ಣುಗಳ ಬೆಲೆಯಲ್ಲಿ ಏರಿಕೆ:

ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಕೊಂಚ ಏರಿಕೆಯಾಗಿತ್ತು. ಏಲಕ್ಕಿ ಬಾಳೆಹಣ್ಣು ಪ್ರತಿ ಕೆಜಿಗೆ ೧೦೦ ರು., ದಾಳಿಂಬೆ-೧೦೦ ರು., ಸೇಬು-೧೪೦ ರು., ಮಿಕ್ಸ್-೧೪೦ ರು., ದ್ರಾಕ್ಷಿ-೧೦೦ ರು., ಮೂಸಂಬಿ-೮೦ ರು., ಕಿತ್ತಳೆ-೧೦೦ ರು., ಮರಸೇಬು-೧೫೦, ಸಪೋಟ-೧೦೦, ಕಪ್ಪು ದ್ರಾಕ್ಷಿ- ೧೬೦ ರು., ಸೀಬೆಹಣ್ಣು- ೮೦ ರು., ಪಚ್ಚಬಾಳೆ ೪೦ ರು. ವರೆಗೆ ಮಾರಾಟವಾಗುತ್ತಿದ್ದವು.

ತರಕಾರಿ ಬೆಲೆ ಸಾಮಾನ್ಯ:

ತರಕಾರಿ ಬೆಲೆಯೂ ಸಾಮಾನ್ಯವಾಗಿತ್ತು. ಮಿಕ್ಸ್ ತರಕಾರಿ ಕೆ.ಜಿ.ಗೆ ೬೦ ರು., ಪ್ರತಿ ಕೆಜಿ ಕ್ಯಾರೆಟ್-೪೦ ರು., ನಾಟಿ ಬಿನೀಸ್-೫೦ ರು., ಗೆಡ್ಡೆಕೋಸು-೪೦ ರು., ಟಮೋಟೋ ಕೆಜಿ ೪೦ ರು., ಬೀಟ್‌ರೂಟ್- ೪೦ ರು., ಬದನೆಕಾಯಿ-೪೦ ರು., ಹೂಕೋಸು, ೪೦ ರು., ಹಾಗಲಕಾಯಿ-೪೦ ರು., ಬೆಂಡೇಕಾಯಿ-೪೦ ರು., ಆಲೂಗಡ್ಡೆ-೪೦ ರು., ಅವರೆಕಾಯಿ-೬೦ ರು., ಮೂಲಂಗಿ ೫೦, ಈರೇಕಾಯಿ ೬೦, ಕೊತ್ತಂಬರಿ ಸೊಪ್ಪು ಪ್ರತಿ ಕಂತೆಗೆ 10 ರು. ನಿಗದಿಪಡಿಸಲಾಗಿತ್ತು.

ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆ:

ಆಯುಧಪೂಜೆ ಹಬ್ಬದಲ್ಲಿ ಸಿಹಿ ತಿನಿಸುಗಳನ್ನು ಪೂಜೆಗೆ ಇಡುವುದರಿಂದ ಹಾಗೂ ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅದಕ್ಕೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವುದರಿಂದ ಬೆಲೆಯಲ್ಲೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಬೂಂದಿ-೨೫೦ ರು., ಮಿಲ್ಕ್ ಬರ್ಫಿ-೬೦೦ ರು., ಹಾರ್ಲಿಕ್ಸ್ ಬರ್ಫಿ-೬೯೦ ರು., ಲಾಡು-೩೪೦ ರು., ಮೈಸೂರು ಪಾಕ್-೬೯೦ ರು., ಜಹಂಗೀರ್-೨೮೦ ರು., ಸೋಂಪಾಪುಡಿ-೬೦೦ ರು., ಬಾದೂಶಾ-೨೮೦, ಮೋತಿಪಾಕ್-೪೮೦, ಹಲ್ವಾ-೪೦೦ ರು. ಸೇರಿದಂತೆ ಅನೇಕ ಸಿಹಿ ಪದಾರ್ಥಗಳು ಮತ್ತು ಪ್ರತಿ ಕೆಜಿ ಸ್ಪೆಷಲ್ ಖಾರ-೩೮೦ ರು., ಸಾಮಾನ್ಯ ಖಾರ-೩೦೦ ರು.ವರೆಗೆ ಮಾರಾಟವಾಗುತ್ತಿದ್ದವು.