ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿ ಜನಸಾಮಾನ್ಯರ ಉತ್ಸವವಾಗಿದೆ ಎಂದು ಕೊಪ್ಪಳದ ಗವಿ ಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಬಣ್ಣಿಸಿದರು.

ಅಂಶಿ ಪ್ರಸನ್ನಕುಮಾರ್‌/ ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿ ಜನಸಾಮಾನ್ಯರ ಉತ್ಸವವಾಗಿದೆ ಎಂದು ಕೊಪ್ಪಳದ ಗವಿ ಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಬಣ್ಣಿಸಿದರು.

ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ, ಬೆಳ್ಳಿರಥದಲ್ಲಿಟ್ಟಿದ್ದ ಉತ್ಸವ ಮೂರ್ತಿ ಎದುರು ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ದಸರಾ ಉದ್ಘಾಟಿಸುವಷ್ಟು ದೊಡ್ಡವನಲ್ಲ. ಮಹಾನುಭಾವರು ಹಚ್ಚಿದ ದೀಪ ಆರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಚಾಮುಂಡೇಶ್ವರಿಯ ಸನ್ನಿಧಿಗೆ ಬಂದಿದ್ದೇನೆ. ಮುಗಿಲ ಮಳೆ, ಮಣ್ಣಿನ ಬೆಳೆ, ಜನರಲ್ಲಿ ಕಳೆ ಮುಖ್ಯ. ಹೀಗಾಗಿ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಮುಖದಲ್ಲಿ ನಗು ಮೂಡಲಿ, ಜನರು ಸುಖ-ಶಾಂತಿಯಿಂದ ಬದುಕಲಿ ಎಂದು ತಾಯಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಎಷ್ಟೇ ತಂತ್ರಜ್ಞಾನ ಬಂದರೂ ಊಟವನ್ನು ಡೌನ್‌ಲೋಡ್‌ ಮಾಡಲು ಆಗಲ್ಲ. ಊಟ ಬರಬೇಕಾದರೆ ರೈತನ ಬೆವರು ಭೂಮಿಗೆ ಇಳಿಯಬೇಕು. ನಾಡಹಬ್ಬದ ಸಂದರ್ಭದಲ್ಲಿ ನಾವು ಮಣ್ಣು, ನೀರು, ಪ್ರಕೃತಿಯನ್ನು ಸಂರಕ್ಷಿಸುವ ಸಂಕಲ್ಪ ಮಾಡಬೇಕು. ನಮ್ಮ ನಾಡಿನ ನದಿಗಳು ನಮ್ಮ ಜೀವನದ ಜೀವನಾಡಿಗಳು. ಕೃಷ್ಣೆ, ಕಾವೇರಿ, ತುಂಗಭದ್ರೆ, ಭೀಮೆ (ಭೀಮಾ) ಸೇರಿದಂತೆ ನಮ್ಮ ನಾಡಿನ ನದಿಗಳು ಜನರ ಅನ್ನದ ತಟ್ಟೆಯಾಗಿವೆ. ಆದ್ದರಿಂದ ನಾವು ನದಿಮೂಲ ನಾಶ ಮಾಡಬಾರದು. ಮಣ್ಣನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಪರಿಸರವನ್ನು ಕಾಪಾಡಿಕೊಳ್ಳಬೇಕು. ಆಗ ನಾವು ಇಲ್ಲಿ ಬಂದು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ದೀಪ ಬೆಳಗುವುದಲ್ಲ, ಚಾಮುಂಡೇಶ್ವರಿಯೇ ನಮ್ಮ ಮನೆ ಬೆಳಗುತ್ತಾಳೆ ಎಂದು ಹೇಳಿದರು.

ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಲಕ್ಷ ಲಕ್ಷ ದೀಪ ಹಚ್ಚುವುದಕ್ಕಿಂತ ವೃಕ್ಷ ದೀಪ ಹಚ್ಚಬೇಕಿದೆ. ನಾವು ನೀರು, ಅನ್ನ, ಗಾಳಿಯ ಕೊರತೆಯ ಭಯದಲ್ಲಿ ಬದುಕಬಾರದು. ನಿಸರ್ಗ ಕೊಟ್ಟಿರುವುದನ್ನು ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸನ್ಯಾಸಿಗಳಿಗೆ ಪ್ರಾರ್ಥನೆ ಬಿಟ್ಟರೆ ಬೇರೆ ಏನೂ ಇಲ್ಲ. ಮುಗಿಲಿಂದ ಮಳೆ ಬರಲಿ, ಇಳೆಯಿಂದ ಬೆಳೆ ಬರಲಿ, ಜನರ ಮುಖದ ಮೇಲೆ ಕಳೆ ಬರಲಿ ಎಂದಷ್ಟೇ ಪ್ರಾರ್ಥಿಸಬೇಕು. ಈ ಪ್ರಾರ್ಥನೆಯನ್ನು ಕೊಪ್ಪಳದಲ್ಲೇ ಕುಳಿತು ಮಾಡಬಹುದಿತ್ತಲ್ಲ ಎಂದು ನೀವು ಕೇಳಬಹುದು. ಆದರೆ ಮೊಬೈಲ್‌ ಬಳಸುವಾಗ ಕೆಲವು ಕಂಪನಿಯ ಟವರ್‌ ಸಿಗ್ನಲ್‌ ಸಿಗುವುದಿಲ್ಲ. ಏಕೆಂದರೆ ಟವರ್‌ ಆಫ್‌ ಪವರ್‌ ಚಾಮುಂಡೇಶ್ವರಿ ಇಲ್ಲಿದ್ದಾಳೆ. ಆದ್ದರಿಂದ ಇಲ್ಲಿಗೇ ಬಂದಿದ್ದೇನೆ ಎಂದರು.

ಮೈಸೂರಿನ ದಸರಾ ಭೂತ, ವರ್ತಮಾನ ಮತ್ತು ಭವಿಷ್ಯಗಳ ತ್ರಿವೇಣಿ ಸಂಗಮವಾಗಿದೆ. ಮೈಸೂರು ದಸರಾ ಕೇವಲ ಉತ್ಸವವಲ್ಲ; ಅದು ನಾಡಿನ ಸಂಸ್ಕೃತಿ, ಪರಂಪರೆ, ಮಾನವೀಯತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ಮೈಸೂರು ದಸರಾ ಪರಂಪರೆಯನ್ನು ರಾಜಮನೆತನದ ಇತಿಹಾಸದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದ ಹಾಗೂ ರೈತರ ಬದುಕು ಹಸನಾಗಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಮಹನೀಯರ ಕೊಡುಗೆ ನಾಡಿನ ಪ್ರಗತಿಗೆ ಮಹತ್ವದ್ದಾಗಿದೆ. ರಾಣಿ ಕೆಂಪನಂಜಮ್ಮಣ್ಣಿ ಅವರು ತಮ್ಮ ಆಭರಣಗಳನ್ನು ಒತ್ತೆಯಿಟ್ಟು ಕನ್ನಂಬಾಡಿ ಅಣೆಕಟ್ಟು ನಿರ್ಮಾಣಕ್ಕೆ ನೆರವು ನೀಡಿದ ತ್ಯಾಗದ ಪರಂಪರೆ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಸರ್ವಧರ್ಮಗಳ ನೂರಾರು ಗುರುಗಳು ದಸರಾ ಉದ್ಘಾಟನೆ ಕಾಲಕ್ಕೆ ಹಾಜರಾಗಿದ್ದರು. ಅವರಿಗೆ ವೇದಿಕೆಯ ಮುಂಭಾಗ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ಹಾಜಬ್ಬ, ಸಾಲುಮರದತಿಮ್ಮಕ್ಕನ ನೆನೆದ ಶ್ರೀ‘ಕನ್ನಡಪ್ರಭ’ದ ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ಹರೇಕಾಳ ಹಾಜಬ್ಬ ಅವರನ್ನು ಗವಿಸಿದ್ಧೇಶ್ವರ ಸ್ವಾಮೀಜಿ ಸ್ಮರಿಸಿದರು. ನಾವು ಇತಿಹಾಸ ಓದುವುದು ಮಾತ್ರವಲ್ಲ, ಇತಿಹಾಸ ನಿರ್ಮಿಸಬೇಕು. ಶಾಲೆ ನಿರ್ಮಿಸಿದ ಕಿತ್ತಳೆ ಮಾರುವ ಹರೇಕಾಳ ಹಾಜಬ್ಬ ನಮಗೆ ಸ್ಫೂರ್ತಿ ಆಗಬೇಕು. ನೀವು ಕೂಡ ನಿಮ್ಮ ಊರಿನ ಶಾಲೆಗೆ ಪ್ರಯೋಗಾಲಯ ನಿರ್ಮಿಸಿಕೊಡಿ, ಒಂದು ಗ್ರಂಥಾಲಯ ನಿರ್ಮಿಸಿಕೊಡಿ. ಆ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎಂದು ಹೇಳಿದರು.

ಇದಲ್ಲದೇ ಸಾಲುಮರದ ತಿಮ್ಮಕ್ಕನನ್ನು ಸ್ಮರಿಸಿ, ಸಾಲುಮರ ನೆಟ್ಟಿ, ವೃಕ್ಷಮಾತೆಯಾದರು. ನಾವು ಕೂಡ ಆ ರೀತಿ ಮಾಡಬೇಕು ಎಂದರು.ಕನ್ನಡ ಉಳಿಸಬೇಕಿದ್ದರೆ ಪ್ರತಿನಿತ್ಯ ಮಕ್ಕಳಿಗೆ ಒಂದೊಂದು ನೀತಿ ಕತೆಗಳನ್ನು ಹೇಳಿಕೊಡಬೇಕು. ಬಸವಣ್ಣ, ಶರೀಫ, ಕನಕ, ಪುರಂದರ ಹೀಗೆ ಅನೇಕರ ಕಥೆಗಳಿವೆ. ಅವುಗಳನ್ನು ಪ್ರತಿನಿತ್ಯ ಮಕ್ಕಳಿಗೆ ಹೇಳಿಕೊಡಬೇಕು. ಈಗ ಪರಿಸ್ಥಿತಿ ಬದಲಾಗಿದೆ. ಅಪ್ಪ ಅಮ್ಮ ಪಾಸ್‌ಬುಕ್‌ ನೋಡಿದರೆ ಮಕ್ಕಳು ಫೇಸ್‌ಬುಕ್‌ ನೋಡುತ್ತಿರುತ್ತವೆ. ಅದರ ಬದಲಿಗೆ ಮಕ್ಕಳ ಫೇಸ್‌ ಪುಸ್ತಕದಲ್ಲಿ ಬರುವಂತೆ ಅವರನ್ನು ರೂಪಿಸಬೇಕು. ನಾವು ಪ್ರಖ್ಯಾತ ನಾಮರ ಹೆಸರನ್ನು ಹೇಳುತ್ತೇವೆ. ಆದರೆ, ನಾವೇ ಪ್ರಖ್ಯಾತರಾಗಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.