ಇರುಳನ್ನು ಬೆಳಕಾಗಿಸಿದ ದಶಮಂಟಪ ಶೋಭಾಯಾತ್ರೆ

| Published : Oct 14 2024, 01:15 AM IST

ಸಾರಾಂಶ

ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆ ವೈಭವದಿಂದ ಕೂಡಿತ್ತು.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶ ಮಂಟಪಗಳ ಶೋಭಾಯಾತ್ರೆ ವೈಭವದಿಂದ ಕೂಡಿತ್ತು. ಆದರೆ ಈ ಬಾರಿಯೂ ತೀರ್ಪುಗಾರಿಕೆಗೆ ಮಾತ್ರ ಪ್ರದರ್ಶನ ನೀಡಿದ್ದು, ಜನರನ್ನು ನಿರಾಸೆಗೊಳಿಸಿತು.

ದಶ ಮಂಟಪಗಳ ಶೋಭಾಯಾತ್ರೆಯನ್ನು ಕಣ್ತುಂಬಿಸಿಕೊಳ್ಳಲು ಮಡಿಕೇರಿಗೆ ಸಾವಿರಾರು ಮಂದಿ ಆಗಮಿಸಿದ್ದರು. ನಗರದ ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಜನರ ದಂಡೇ ಕಂಡುಬಂತು. ಆದರೆ ಎಲ್ಲರಿಗೂ ಮಂಟಪಗಳ ಪ್ರದರ್ಶನ ಕಾಣಲು ಸಿಗಲಿಲ್ಲ.

ಪೇಟೆ ಶ್ರೀ ರಾಮ ಮಂದಿರ ದೇವಾಲಯದ ಮಂಟಪ ಮೊದಲು ಹೊರಡುವ ಮೂಲಕ ಇತರೆ ಮಂಟಪಗಳನ್ನು ಸ್ವಾಗತಿಸಿತು. ದಶಮಂಟಪಗಳ ಶೋಭಾಯಾತ್ರೆ ಶನಿವಾರ ಮಡಿಕೇರಿಯಲ್ಲಿ ಇರುಳನ್ನು ಬೆಳಕಾಗಿಸಿತು. ಎಲ್ಲಿ ನೋಡಿದರೂ ದೇವಾನು ದೇವತೆಗಳು ಅಸುರರನ್ನು ಸಂಹಾರ ಮಾಡುವ ಕಲಾಕೃತಿಗಳು ಗಮನ ಸೆಳೆದವು.

ಮುಂಜಾನೆ 4 ಗಂಟೆ ವೇಳೆಗೆ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಮಂಟಪದ ತೀರ್ಪುಗಾರಿಕೆ ಪ್ರದರ್ಶನ ಸಂದರ್ಭ ಮಳೆಯಿಂದ ಸಮಸ್ಯೆಯುಂಟಾಯಿತು. ಶಾಸಕ ಡಾ. ಮಂತರ್ ಗೌಡ ಶನಿವಾರ ರಾತ್ರಿ ಬೈಕ್‌ನಲ್ಲಿ ಪ್ರತಿ ಮಂಟಪಗಳಿಗೆ ತೆರಳಿ ಅಂತಿಮ ಸಿದ್ಧತೆ ಪರಿಶೀಲಿಸಿದರು.

ನೂರಾರು ವರ್ಷಗಳ ಇತಿಹಾಸವಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ಲೋಕ ಕಲ್ಯಾಣಕ್ಕಾಗಿ ವಿಷ್ಣುವಿನ ಮತ್ಸ್ಯಾವತಾರ, ದೇಚೂರು ರಾಮ ಮಂದಿರ ದೇವಾಲಯ ಸಮಿತಿಯಿಂದ 106ನೇ ವರ್ಷದ ಉತ್ಸವ ಹಿನ್ನೆಲೆಯಲ್ಲಿ ಕಾಳಿಂಗ ಮರ್ದನ , 62ನೇ ವರ್ಷದ ಉತ್ಸವದಲ್ಲಿದ್ದ ಚೌಡೇಶ್ವರಿ ದೇವಾಲಯದ ಮಂಟಪದಲ್ಲಿ ಅರುಣಾಸುರನ ವಧೆ, 51ನೇ ವರ್ಷದ ಸಂಭ್ರಮದಲ್ಲಿದ್ದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಮಂಟಪದಲ್ಲಿ ಕದಂಬ ಕೌಶಿಕೆ, ಕರವಲೆ ಮಹಿಷ ಮರ್ದಿನಿ ದೇವಾಲಯದ 29ನೇ ವರ್ಷದ ಉತ್ಸವ ಹಿನ್ನೆಲೆಯಲ್ಲಿ ಶ್ರೀ ಕೊಲ್ಲೂರು ಮುಕಾಂಬಿಕೆ ಮಹಿಮೆ ಕಥಾ ಸಾರಾಂಶ ಗಮನ ಸೆಳೆಯಿತು.

61ನೇ ವರ್ಷದ ಉತ್ಸವ ಸಂಭ್ರಮದಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಿಂದ ‘ಸಿಂಧೂರ ಗಣಪತಿ’, 94ನೇ ವರ್ಷದ ದಸರಾ ಉತ್ಸವದಲ್ಲಿದ್ದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮಂಟಪದಲ್ಲಿ ‘ಕೌಶಿಕೆ ಮಹಾತ್ಮೆ’ , 49 ನೇ ವರ್ಷದ ಉತ್ಸವದಲ್ಲಿದ್ದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಮಂಟಪದಲ್ಲಿ ಶ್ರೀ ಕೃಷ್ಣನ ಬಾಲಲೀಲೆ, 50ನೇ ವರ್ಷದ ಆಚರಣೆಯಲ್ಲಿದ್ದ ಶ್ರೀ ಕೋದಂಡ ರಾಮ ದೇವಾಲಯ ಮಂಟಪದಲ್ಲಿ ಶ್ರೀ ರಾಮನಿಂದ ರಾವಣನ ಸಂಹಾರ, 48ನೇ ವರ್ಷದ ಉತ್ಸವದದಲ್ಲಿದ್ದ ಕೋಟೆ ಮಹಾಗಣಪತಿ ದೇವಾಲಯ ಮಂಟಪದಲ್ಲಿ ‘ಶ್ರೀ ಮಹಾಗಣಪತಿಯಿಂದ ಅಜಗರ- ಶಲಭಾಸುರ ದೈತ್ಯರ ಸಂಹಾರ’ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು.

ಯುವಕರಿಂದ ಕಿರಿಕಿರಿ: ದಶಮಂಟಪ ಶೋಭಾಯಾತ್ರೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾಗರೋಪಾದಿಯಲ್ಲಿ ಜನರು ನಡೆದಾದುಕೊಂಡು ಹೋಗುತ್ತಿದ್ದರು. ಯುವಕರ ತಂಡಗಳಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು. ಜನರ ಮಧ್ಯೆ ಜೋರಾಗಿ ಕಿರುಚುತ್ತಾ ಸಾರ್ವಜನಿಕರಿಗೆ ತೊಂದೆಯುಂಟು ಮಾಡಿದರು. ಕೆಲವರಿಗೆ ಈ ವೇಳೆ ಪೊಲೀಸರು ಎಚ್ಚರಿಕೆ ನೀಡಿದರು. ಮಂಟಪದ ಪ್ರದರ್ಶನ ವೇಳೆ ನೂಕು ನುಗ್ಗಲು ಉಂಟಾಗಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಪರದಾಡಿದ ದೃಶ್ಯ ಕಂಡುಬಂತು.

ಸಾಂಸ್ಕೃತಿಕ ಕಾರ್ಯಕ್ರಮ: ವಿಜಯದಶಮಿಯ ಪ್ರಯುಕ್ತ ಕಲಾ ಸಂಭ್ರಮ ವೇದಿಕೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಧ್ಯಾರ್ಥಿಗಳಿಂದ ಭಾರತದ ವೈವಿಧ್ಯತೆಯನ್ನು ಬಿಂಬಿಸುವ ನೃತ್ಯ ರೂಪಕ ಕಲರ್ಸ್ ಆಫ್ ಇಂಡಿಯಾ. ಜೀ ಕನ್ನಡ ಕನ್ನಡದ ಸರಿಗಮಪ ಲಿಟಲ್ ಚಾಂಪಿಯನ್ಸ್ 2019 ರಿಯಾಲಿಟಿ ಶೋ ನ ರನ್ನರ್ ಅಪ್ ತನುಶ್ರೀ ಮಂಗಳೂರು ಹಾಗೂ ಸರಿಗಮಪ ಗಾಯಕ ಅನ್ವಿತ್ ಸೇರಿದಂತೆ ದುರ್ಗಾ ಮ್ಯೂಸಿಕಲ್ ಈವೆಂಟ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಮೈಸೂರಿನ ಅನಿತಾ ಅವರ ತಂಡದಿಂದ ನೃತ್ಯ ಸಿರಿ, ಕನ್ನಡ ಸ್ನೇಹಸಿರಿ ಬಳಗದ ಲೋಕೇಶ್ ಸಾಗರ್ ತಂಡದಿಂದ ಗಾನ ಸುಧೆನಾಟ್ಯ, ಪೊನ್ನಂಪೇಟೆ ತಂಡದಿಂದ ನೃತ್ಯ ವೈಭವ ಕಾರ್ಯಕ್ರಮಗಳು ನಡೆಯಿತು. ನಡುರಾತ್ರಿಯಿಂದ ಮುಂಜಾನೆವರೆಗೆ ಸಾಧುಕೋಕಿಲ ತಂಡದಿಂದ ಆರ್ಕೆಸ್ಟ್ರಾ ನಡೆಯಿತು.

10 ಮಂಟಪಗಳು ಕೂಡ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಉತ್ಸವಕ್ಕೆ ತೆರೆ ಬಿದ್ದಿತು.

ಕೋಟೆ ಮಹಾಗಣಪತಿ ಮಂಟಪ ಪ್ರಥಮ

ದಶಮಂಟಪಗಳ ಶೋಭಾಯಾತ್ರೆಯಲ್ಲಿ ಶ್ರೀ ಕೋಟೆ ಮಹಾ ಗಣಪತಿ ದೇವಾಲಯ ಪ್ರಥಮ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದ್ವಿತೀಯ ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಮಂಟಪ ತೃತೀಯ ಸ್ಥಾನ ಪಡೆಯಿತು. ವಿಜೇತ ಮಂಟಪಗಳಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಯಿತು. ವಿಜೇತ ಮಂಟಪದ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಪ್ರಶಸ್ತಿಯೊಂದಿಗೆ ಮೆರವಣಿಗೆ ನಡೆಸಿ ವಾದ್ಯಗೋಷ್ಠಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

ತೀರ್ಪಿಗೆ ಅಸಮಾಧಾನ, ಪ್ರತಿಭಟನೆ!

ಮಡಿಕೇರಿ ದಸರಾ ದಶ ಮಂಟಪಗಳ ಶೋಭಾಯಾತ್ರೆಯ ತೀರ್ಪುಗಾರಿಕೆಯಲ್ಲಿ ರಾಜಕೀಯ ನಡೆದಿದೆ. ತೀರ್ಪುಗಾರಿಕೆಯಿಂದ ನಮ್ಮ ಮಂಟಪವನ್ನು ಹೊರಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರವಲೆ ಮಹಿಷ ಮರ್ದಿನಿ ದೇವಾಲಯ ಮಂಟಪ ಸಮಿತಿ ಸದಸ್ಯರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ಬೆಳಗ್ಗೆ 6.30ಕ್ಕೆ ಮಂಟಪಗಳ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭ ವೇದಿಕೆ ಏರಿದ ಸದಸ್ಯರು ತೀರ್ಪುಗಾರರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಮೋಸ...ಮೋಸ... ಎಂದು ಸದಸ್ಯರು ತೀರ್ಪುಗಾರರಿಗೆ ಧಿಕ್ಕಾರ ಹಾಕಿದರು. ಪ್ರತಿಭಟನೆಗೆ ಮುಂದಾದ ಸಂದರ್ಭ ದೇವಾಲಯ ಸಮಿತಿಯ ಕಾರ್ಯಕರ್ತರನ್ನು ಪೊಲೀಸರು ನಿಯಂತ್ರಿಸಿದರು.