ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬಸವಣ್ಣನವರು ಹಾಕಿಕೊಟ್ಟ ದಾಸೋಹ ಪರಂಪರೆ ಶ್ರೇಷ್ಠವಾದದ್ದು ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.ಬಸವ ಜಯಂತಿ ನಿಮಿತ್ತ ಇಲ್ಲಿಯ ಗಾಂಧಿಗಂಜ್‌ನ ಬಸವೇಶ್ವರ ದೇವಸ್ಥಾನದಲ್ಲಿ ಗಾಂಧಿಗಂಜ್ ವ್ಯಾಪಾರಿಗಳ ವತಿಯಿಂದ ಹಮ್ಮಿಕೊಂಡಿದ್ದ ಪ್ರಸಾದ ವಿತರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ದೇವರು ಹಸಿದವರ ಬಾಯಿಯಿಂದ ಉಣ್ಣುತ್ತಾನೆಯೇ ಹೊರತು ನೈವೇದ್ಯವನ್ನಲ್ಲ ಎಂದು ಬಸವಣ್ಣನವರು ಮನವರಿಕೆ ಮಾಡಿದ್ದರು. ಅವರ ದಾಸೋಹ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವ ಗಾಂಧಿಗಂಜ್ ವ್ಯಾಪಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಗುರು ಬಸವ ಪೂಜೆ ನೆರವೇರಿಸಿ ಮಾತನಾಡಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಆಸಕ್ತಿಯಿಂದ ಭಾಗವಹಿಸಬೇಕು. ಆಗ ಮಾತ್ರ ಸುಂದರ ಸಮಾಜ ಕಟ್ಟಲು ಸಾಧ್ಯವಿದೆ. ಉದಾಸೀನ ಮನೋಭಾವದಿಂದ ವೈಯಕ್ತಿಕ ಬದುಕನ್ನೂ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ವಿಶಾಲ ಸ್ಥಳದಲ್ಲಿ ಹೊಸ ಮಾರುಕಟ್ಟೆ ಸ್ಥಾಪಿಸಬೇಕೆಂಬುದು ಗಾಂಧಿಗಂಜ್ ವ್ಯಾಪಾರಿಗಳ ಬೇಡಿಕೆಯಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮೂಲಕ ಕೃಷಿ ಮಾರುಕಟ್ಟೆ ಸಚಿವರ ಮೇಲೆ ಒತ್ತಡ ತರಲಾಗುವುದು. ಶೀಘ್ರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗಾಂಧಿಗಂಜ್‌ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ನಾಡಿನಲ್ಲಿ ಸುಖ, ಶಾಂತಿ, ಸೌಹಾರ್ದ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎನ್ನುವ ಸದುದ್ದೇಶದಿಂದ 30 ವರ್ಷಗಳಿಂದ ಗಾಂಧಿಗಂಜ್‌ನಲ್ಲಿ ವ್ಯಾಪಾರಿಗಳ ವತಿಯಿಂದ ಪ್ರತಿ ವರ್ಷ ಬಸವ ಜಯಂತಿಗೆ ಅನ್ನ ದಾಸೋಹ ಮಾಡಲಾಗುತ್ತಿದೆ. ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವವನ್ನು ಗಾಂಧಿಗಂಜ್ ವ್ಯಾಪಾರಿಗಳು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದರು.ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಕಾರ್ಯದರ್ಶಿ ಭಗವಂತ ಔದತ್ತಪುರ, ಪ್ರಮುಖರಾದ ವಿಶ್ವನಾಥ ಕಾಜಿ, ಸೋಮಶೇಖರ ಪಾಟೀಲ ಗಾದಗಿ, ರಾಜಕುಮಾರ ಬಿರಾದಾರ ಗುನ್ನಳ್ಳಿ, ಮಡಿವಾಳಪ್ಪ ಗಂಗಶೆಟ್ಟಿ, ಶಂಕರ ಗುನ್ನಳ್ಳಿ, ಅಶೋಕ ರೇಜಂತಲ್, ಸದಾನಂದ ಜೋಶಿ, ಶಾಮಸುಂದರ್ ಬೋರಾ, ನಾಗರಾಜ ನಂದಗಾಂವ್ ಮತ್ತಿತರರು ಇದ್ದರು.
ಸಾರ್ವಜನಿಕರಿಗೆ ಕುಟ್ಟಿದ ಗೋಧಿ ಹುಗ್ಗಿ, ಅನ್ನ, ಸಾಂಬಾರು, ಮುದ್ದಿ ಪಲ್ಯ ಪ್ರಸಾದ ವಿತರಿಸಲಾಯಿತು.