ಬಂಡಿಗಣಿ ಶ್ರೀಗಳ ದಾಸೋಹ ಸೇವೆ ಶ್ಲಾಘನೀಯ: ಶ್ರೀಶೈಲ ಶ್ರೀ

| Published : Nov 14 2024, 12:48 AM IST / Updated: Nov 14 2024, 12:49 AM IST

ಸಾರಾಂಶ

ಸಮಾಜದ ಏಳ್ಗೆಯೊಂದಿಗೆ ಶಿಕ್ಷಣ ಒದಗಿಸುತ್ತಾ ಮುಖ್ಯವಾಗಿ ಅನ್ನದಾಸೋಹ ಮಾಡುತ್ತಿರುವ ಬಂಡಿಗಣಿ ನೀಲಮಾಣಿಕ ಮಠದ ಶ್ರೀ ಅನ್ನದಾನೇಶ್ವರ ಶ್ರೀಗಳ ಕಾರ್ಯ ಅಪ್ರತಿಮ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಯಾವುದೇ ಜಾತಿ, ವರ್ಗ, ವರ್ಣ ಬೇಧವಿಲ್ಲದೆ ಎಲ್ಲರಿಗೂ ಒಳಿತಾಗುವ ದೃಷ್ಟಿಯಿಂದ ಸಮಾಜದ ಏಳ್ಗೆಯೊಂದಿಗೆ ಶಿಕ್ಷಣ ಒದಗಿಸುತ್ತಾ ಮುಖ್ಯವಾಗಿ ಅನ್ನದಾಸೋಹ ಮಾಡುತ್ತಿರುವ ಬಂಡಿಗಣಿ ನೀಲಮಾಣಿಕ ಮಠದ ಶ್ರೀ ಅನ್ನದಾನೇಶ್ವರ ಶ್ರೀಗಳ ಕಾರ್ಯ ಅಪ್ರತಿಮವಾದುದು ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಂಡಿಗಣಿಯ ನೀಲಮಾಣಿಕ ಮಠದ ಶ್ರೀಗಳಿಗೆ ರಾಜ್ಯೋತ್ಸವ ನಿಮಿತ್ತ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಅವರನ್ನು ಸನ್ಮಾನಿಸಿ ನಂತರ ಮಾತನಾಡಿದ ಶ್ರೀಗಳು, ಮನುಷ್ಯನಾಗಿ ಜನ್ಮ ಪಡೆಯುವುದು ಅಪರೂಪ. ಮೋಕ್ಷ ಪಡೆಯುವ ಇಚ್ಛೇಹೊಂದುವುದು ಅಪರೂಪ, ಮೋಕ್ಷದ ಮಾರ್ಗ ತೋರಿಸುವ ಸಮರ್ಥ ಸದ್ಗುರು ದೊರಕುವುದೂ ಇನ್ನೂ ಅಪರೂಪ. ಈ ಮೂರು ಅಪರೂಪದ ಯೋಗಗಳನ್ನು ಪಡೆಯುತ್ತಿರುವ ಭಕ್ತರ ಭಾಗ್ಯವೆಂದರು. ದಾಸೋಹ ಚಕ್ರವರ್ತಿಯಾಗಿ ರಾಜ್ಯವಷ್ಟೇ ಅಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಅನ್ನದಾಸೋಹ ಮೂಲಕ ಸೈ ಎನ್ನಿಸಿಕೊಂಡಿರುವ ಅನ್ನದಾನೇಶ್ವರ ಶ್ರೀಗಳ ಕಾರ್ಯ ವಿಶ್ವವ್ಯಾಪಿ ಹರಡಲೆಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನ್ನದಾನೇಶ್ವರ ಶ್ರೀಗಳು, ದಾಸೋಹವಿಲ್ಲದೆ ಕಾಯಕವಾಗದು, ಕಾಯಕ-ದಾಸೋಹಗಳ ಜೊತೆ ಸೇರುವ ಇನ್ನೊಂದು ತತ್ವ ಪ್ರಸಾದ-ವ್ಯಾವಹಾರಿಕ ಅರ್ಥದಲ್ಲಿ ಊಟ. ಸತ್ಯ ಶುದ್ಧ ಕಾಯಕದಿಂದ ಸಮಾಜದ ಶ್ರೇಯಸ್ಸಿಗೆ ದಾಸೋಹದ ಮೂಲಕ ಬಳಸಿದಾಗ ತಾನುಣ್ಣುವ ಊಟ ಪ್ರಸಾದವೆಂದರು. ಕೊಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ. ಶ್ರೀ ವಿಶ್ವಪ್ರಭುದೇವ ಮಹಾಸ್ವಾಮೀಜಿ, ಜಮಖಂಡಿ ಮುತ್ತಿನಕಂತಿಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಸ್ವಾಮೀಜಿ, ಬಾವಲತ್ತಿ ಶ್ರೀಗಳು, ಶಿವಾನಂದ ಹಿರೇಮಠ ವೇದಿಕೆ ಮೇಲಿದ್ದರು. ಸುಮಾರು ೧೦ ಸಾವಿರಕ್ಕೂ ಅಧಿಕ ಭಕ್ತರು ನೆರೆದಿದ್ದು ವಿಶೇಷವಾಗಿತ್ತು.