ಮಡಿಕೇರಿ: ಕೋಟೆ ಶ್ರೀ ಮಹಾಗಣಪತಿ ದೇವಾಲಯದ ದಸರಾ ಮಂಟಪ ಸಮಿತಿ ತನ್ನ 50ನೇ ವರ್ಷದ ದಸರಾ ಉತ್ಸವನ್ನು ಆಚರಿಸುವ ಮೂಲಕ ಈ ಬಾರಿ ಮಂಟಪ ಶೋಭಾಯಾತ್ರೆಯಲ್ಲಿ ಅತ್ಯಂತ ಉತ್ತಮ ಪ್ರದರ್ಶನ ನೀಡಿದ್ದು, ಪ್ರಶಸ್ತಿ ಗೆದಿಲ್ಲದಿದ್ದರೂ ಜನರ ಮನಸ್ಸು ಗೆದ್ದಿದ್ದೇವೆ ಎಂದು ಸಮಿತಿ ಅಧ್ಯಕ್ಷ ಅವರೆಮಾದಂಡ ಶರಣ್ ಪೂಣಚ್ಚ ಅವರು ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಹಾಗಣಪತಿ ದೇವಾಲಯ ದಸರಾ ಸಮಿತಿ ಈ ಬಾರಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದು, ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಈ ಬಾರಿ ಮಾದಕ ವಸ್ತು ಬಗ್ಗೆ ಜಾಗೃತಿ, ಪೌರ ಕಾರ್ಮಿಕರಿಗೆ ಗೌರವ, ರಾಜರ ಕೋಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಇದಲ್ಲದೆ ವಿವಿಧ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕೆಲಸ ಮಾಡಲಾಗಿದೆ. ಆದ್ದರಿಂದ ಜಿಲ್ಲೆಯ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ದಶಮಂಟಪಗಳ ಶೋಭಾಯಾತ್ರೆಯ ಸಂದರ್ಭದಲ್ಲಿ ನಮ್ಮ ಸಮಿತಿ ಈ ಬಾರಿ ಅತ್ಯಂತ ವಿನೂತನವಾಗಿ ಕಲಾಕೃತಿಗಳನ್ನು ರಚಿಸಿ ಜನರ ಮನ ಸೆಳೆದಿದೆ. ಈ ಬಗ್ಗೆ ಈಗಾಗಲೇ ಹಲವರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಶಸ್ತಿ ದೊರಕದಿರುವ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಉತ್ತಮ ಪ್ರದರ್ಶನ ನೀಡಿದ ಸಾರ್ಥಕತೆ ಇದೆ ಎಂದು ಹೇಳಿದ್ದಾರೆ.ಶ್ರಮಿಕರಿಗೆ ಧನ್ಯವಾದ: ಮಂಟಪ ಶೋಭಾಯಾತ್ರೆಗೆ ಸಹಕರಿಸಿದ ಜಿಲ್ಲಾ ಪೊಲೀಸ್ ಇಲಾಖೆ, ವಿದ್ಯುತ್ ಇಲಾಖೆ ಸಿಬ್ಬಂದಿ, ನಗರಸಭೆ, ಪೌರ ಕಾರ್ಮಿಕರು ಸೇರಿದಂತೆ ನಮ್ಮ ಸಮಿತಿಯ ಎಲ್ಲರಿಗೂ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿ ಧನ್ಯವಾದ ತಿಳಿಸುತ್ತೇವೆ. ಪ್ರತಿ ವರ್ಷ ಕೂಡ ವಿಭಿನ್ನ ರೀತಿಯಲ್ಲಿ ಮಂಟಪ ಹೊರ ತರುತ್ತಿರುವ ನಮ್ಮ ಸಮಿತಿ ಮುಂದಿನ ಬಾರಿ ಕೂಡ ಅತ್ಯುತ್ತಮ ರೀತಿಯಲ್ಲಿ ಮಂಟಪವನ್ನು ಹೊರ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಬಾರಿಯ ಮಂಟಪದಲ್ಲಿ ವಿಶೇಷವಾಗಿ 51 ಅಡಿ ಎತ್ತರದ ಲೈಟಿಂಗ್ ಬೋರ್ಡ್ ಹಾಗೂ ಪಂಚಮುಖಿ ಗಣಪತಿಯ 24 ಅಡಿಯ ಮೂರ್ತಿಯನ್ನು ಕೂಡ ಮಾಡಿದ್ದೆವು ಎಂದು ತಿಳಿಸಿದ್ದಾರೆ.