ಸಾರಾಂಶ
- ಬಂಜಾರ ಸಮಾಜ ಹಿರಿಯ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ಹೇಳಿಕೆ
- - -- ಸರ್ಕಾರ ಪ್ರಬಲ ಎಡ, ಬಲಗೈ ಸಮುದಾಯದ ನಾಯಕರ ಒತ್ತಡಕ್ಕೆ ಮಣಿಯದಿರಲಿ
- ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ತಡೆಹಿಡಿದಿರುವುದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು- - -
ಕನ್ನಡಪ್ರಭ ವಾರ್ತೆ ದಾವಣಗೆರೆಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ವರ್ಗೀಕರಣಕ್ಕಾಗಿ ದತ್ತಾಂಶ ಸಂಗ್ರಹಿಸಲು ಮುಂದಾದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ಆಯೋಗದ ನಡೆ ಮತ್ತು ಎಡಗೈ-ಬಲಗೈ ಸಮುದಾಯದ ಸಚಿವರು, ಮುಖಂಡರ ಒತ್ತಡಕ್ಕೆ ಮಣಿಯುತ್ತಿರುವ ಸರ್ಕಾರ ನಡೆ ಸರಿಯಲ್ಲ ಎಂದು ಬಂಜಾರ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಹಿರಿಯ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ಅವರು, ಪರಿಶಿಷ್ಟ ಜಾತಿಯ 101 ಉಪ ಜಾತಿಗಳಲ್ಲಿ ಒಳ ವರ್ಗೀಕರಣ ಮಾಡಬೇಕಾದರೆ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಸಂಗ್ರಹಿಸಿದ ಪ್ರತಿ ಉಪ ಜಾತಿಯ ನಿಖರ ದತ್ತಾಂಶವೇ ಮಾನದಂಡ ಆಗಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಸರ್ಕಾರಗಳಿಗೆ ನೀಡಲಾದ ಈ ಅಧಿಕಾರವನ್ನು ಸಂವಿಧಾನಾತ್ಮಕವಾಗಿಯೇ ನಿರ್ವಹಿಸಬೇಕೆಂಬುದು ಸುಪ್ರೀಂ ಕೋರ್ಟ್ ತೀರ್ಪಿನ ತಿರುಳಾಗಿದೆ ಎಂದರು.ಒಳ ಮೀಸಲಾತಿ ಜಾರಿ ಆಗುವವರೆಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ತಡೆ ಹಿಡಿದಿರುವುದನ್ನು ಸರ್ಕಾರ ಕೈಬಿಡಬೇಕು. ಒಳ ಮೀಸಲಾತಿ ವರ್ಗೀಕರಣ ಆಗುವವರೆಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳದಂತೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರವು ತಕ್ಷಣ ಈ ಆದೇಶವನ್ನು ರದ್ದುಪಡಿಸಬೇಕು. ಈ ನೆಪದಲ್ಲಿ ತಡೆಹಿಡಿಯಲಾದ ಪರಿಶಿಷ್ಟ ಜಾತಿ ಅಧಿಕಾರಿ, ನೌಕರರ ಮುಂಬಡ್ತಿ ಮತ್ತಿತರೆ ಪ್ರಕ್ರಿಯೆಗಳಿಗೂ ಚಾಲನೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಬಂಜಾರ (ಲಂಬಾಣಿ), ಭೋವಿ, ಕೊರಚ, ಕೊರಮ ಸೇರಿದಂತೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಎಲ್ಲ ಸಮುದಾಯಗಳ ಅಭಿಪ್ರಾಯ ಪಡೆಯಬೇಕಿತ್ತು. ಎಲ್ಲ ಉಪ ಜಾತಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದ ನಿವೃತ್ತ ಐಎಎಸ್ ಅಧಿಕಾರಿ ಮಂಜುನಾಥ ಪ್ರಸಾದ ಅವರನ್ನು ರಾಜ್ಯಮಟ್ಟದ ಸಮನ್ವಯ ಸಮಿತಿ ಸದಸ್ಯರಾಗಿ ನೇಮಿಸಬೇಕಿತ್ತು. ಪರಿಶಿಷ್ಟರಲ್ಲಿ ಅನಗತ್ಯ ಸಂಘರ್ಷ, ಗೊಂದಲ ಸೃಷ್ಟಿಸಿ, ಕೆಲ ಉಪ ಜಾತಿಗಳನ್ನು ಪರಿಶಿಷ್ಟ ಪಟ್ಟಿಯಿಂದ ಪ್ರತ್ಯೇಕಿಸುವ ಪ್ರಕ್ರಿಯೆಗೆ ಕುಮ್ಮಕ್ಕು ನೀಡಿದ್ದ ಇ.ವೆಂಕಟಯ್ಯ ಅವರಿಗೆ ಸಮಿತಿಯಲ್ಲಿ ಸೇರಿಸಿದ್ದು ಸರ್ಕಾರದ ತಾರತಮ್ಯ ಧೋರಣೆ ಸ್ಪಷ್ಟಪಡಿಸುತ್ತಿದೆ ಎಂದರು.ಪರಿಶಿಷ್ಟ ಜಾತಿಯ 101 ಸಮುದಾಯಗಳ ಪೈಕಿ 51ಕ್ಕೂ ಹೆಚ್ಚು ಉಪ ಜಾತಿಗಳು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿವೆ. 35ಕ್ಕೂ ಹೆಚ್ಚು ಸಮುದಾಯಗಳು ಅಪರಾಧಿಕ ಹಿನ್ನೆಲೆ. ಬಾಲಕಾರ್ಮಿಕ ಪದ್ಧತಿ, ವಲಸೆ ಪ್ರವೃತ್ತಿ, ಜೀತ ಪದ್ಧತಿಯಲ್ಲಿ ಅಸಂಘಟಿತರಾಗಿ ಬದುಕುತ್ತಾ ಸಾಮಾಜಿಕ ಕಳಂಕಕ್ಕೆ ಒಳಗಾಗಿವೆ. ಇಂತಹ ಸಮುದಾಯಗಳ ಬಗ್ಗೆ ಸಮಗ್ರ, ಸಮರ್ಪಕವಾದ ದತ್ತಾಂಶವನ್ನು ಸಂಗ್ರಹಿಸಲು ಪೂರಕ ಆಗುವಂತಹ ಪ್ರಶ್ನಾವಳಿ ಸಿದ್ಧಪಡಿಸಬೇಕು. ಈ ಎಲ್ಲ ವಿಚಾರಗಳ ಬಗ್ಗೆ ರಾಜ್ಯ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಸಭೆ ಚರ್ಚಿಸಿದ್ದು, ನ್ಯಾ.ನಾಗಮೋಗನ ದಾಸ್ ಏಕ ಸದಸ್ಯ ಆಯೋಗ ಹಾಗೂ ಸರ್ಕಾರಕ್ಕೆ ಮನವಿ ಅರ್ಪಿಸಲು ನಿರ್ಧರಿಸಲಾಗಿದೆ ಎಂದು ರಾಘವೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹುಲಿಕಟ್ಟೆ ಎಲ್.ಕೊಟ್ರೇಶ ನಾಯ್ಕ, ಹನುಮಂತ ನಾಯ್ಕ, ವೆಂಕಟೇಶ, ಕವಿತಾ ಚಂದ್ರಶೇಖರ, ತಿಪ್ಪೇಸ್ವಾಮಿ, ರವಿ ಇತರರು ಇದ್ದರು.- - -
(ಕೋಟ್)ದತ್ತಾಂಶ ಸಂಗ್ರಹಕ್ಕೆ ಪೂರಕವಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸಂತ ಸೇವಾಲಾಲ್ ಮಹಾರಾಜ್ ಜನ್ಮಸ್ಥಳವಾದ ಸೂರಗೊಂಡನಕೊಪ್ಪ ಭಾಯಾಘಡ್ ಕ್ಷೇತ್ರದಲ್ಲಿ ರಾಜ್ಯದ ಲಂಬಾಣಿ ಸಮುದಾಯದ ಎಲ್ಲ ಸಂಘಟನೆಗಳ ಪ್ರಮುಖರ ಸಭೆಯನ್ನು ಶೀಘ್ರದಲ್ಲೇ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ
- ರಾಘವೇಂದ್ರ ನಾಯ್ಕ, ಮುಖಂಡ, ಲಂಬಾಣಿ ಸಮಾಜ- - -
-22ಕೆಡಿವಿಜಿ10.ಜೆಪಿಜಿ:ದಾವಣಗೆರೆಯಲ್ಲಿ ಮಂಗಳವಾರ ಲಂಬಾಣಿ ಸಮಾಜದ ಹಿರಿಯ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.