ಡಾಟಾ ಅಪರೇಟರ್‌ಗಳ ವಜಾ, ಅನಾಥವಾದ ಬ್ಯಾಡಗಿಯ ಕಾರ್ಮಿಕರ ಕಚೇರಿ

| Published : Mar 29 2025, 12:32 AM IST

ಡಾಟಾ ಅಪರೇಟರ್‌ಗಳ ವಜಾ, ಅನಾಥವಾದ ಬ್ಯಾಡಗಿಯ ಕಾರ್ಮಿಕರ ಕಚೇರಿ
Share this Article
  • FB
  • TW
  • Linkdin
  • Email

ಸಾರಾಂಶ

ನೂರಾರು ಕಟ್ಟಡ ಕಾರ್ಮಿಕರು ಇಲ್ಲಿನ ವಲಯ ಕಚೇರಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಬಂದು ಹೋಗುತ್ತಿದ್ದಾರೆ.

ಬ್ಯಾಡಗಿ: ನಿಯಮ ಮೀರಿ ಕಾರ್ಡ್‌ ವಿತರಿಸಿದ ಹಿನ್ನೆಲೆ ಡಾಟಾ ಅಪರೇಟರ್‌ಗಳನ್ನು ಕೆಲಸದಿಂದ ವಜಾಗೊಳಿಸಿದ ಪರಿಣಾಮ ಕಾರ್ಮಿಕ ಇಲಾಖೆ ಕಚೇರಿಗೆ ಹತ್ತಾರು ದಿನಗಳಿಂದ ಬೀಗ ಹಾಕಲಾಗಿದ್ದು, ಸಾರ್ವಜನಿಕರು ತೊಂದರೆಗೀಡಾಗುವಂತಾಗಿದೆ.

ಕಾರ್ಮಿಕ ಇಲಾಖೆಯ ಗೋಳು ಜಿಲ್ಲೆಯ ಮಟ್ಟಕ್ಕೆ ಸದ್ಯಕ್ಕೆ ಮುಗಿಯವಂತೆ ಕಾಣುತ್ತಿಲ್ಲ. ಈಗಾಗಲೇ ನಿಯಮ ಮೀರಿ ಕಾರ್ಡ್ ವಿತರಿಸಿದ ಕಾರಣಕ್ಕೆ ಬಹಳಷ್ಟು ಕಾರ್ಡ್‌ಗಳನ್ನು ಸರ್ಕಾರ ರದ್ದುಪಡಿಸಿತ್ತು. ಹೀಗಾಗಿ ಅದರ ರೂವಾರಿಗಳಾಗಿರುವ ಡಾಟಾ ಆಪರೇಟರ್‌ಗಳನ್ನು ಕೆಲಸದಿಂದ ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಬ್ಯಾಡಗಿ ತಾಲೂಕು ಇದಕ್ಕೆ ಹೊರತಾಗಿಲ್ಲದ ಕಾರಣ ಸಿಬ್ಬಂದಿ ಇಲ್ಲದೇ ಸಾರ್ವಜನಿಕರು ಸಂಕಷ್ಟಕ್ಕೀಡು ಮಾಡಿದೆ.

ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಲ್ಲದವರಿಗೆ ಅನಧಿಕೃತ ಕಾರ್ಡ್‌ಗಳ ವಿತರಣೆ ಹಾಗೂ ಸರ್ಕಾರದ ನಿಯಮಗಳ ಉಲ್ಲಂಘನೆ, ಅರ್ಜಿದಾರರ ಸಕಾಲ ನಿಯಮದಂತೆ ನಿಗದಿತ ಅವಧಿಯೊಳಗೆ ಸೌಲಭ್ಯ ಒದಗಿಸಿಲ್ಲವೆಂಬ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಡಾಟಾ ಆಪರೇಟ್‌ರಗಳನ್ನು ಕೆಲಸದಿಂದ ತೆಗೆದು ಹಾಕಿರುವುದಾಗಿ ತಿಳಿದ ಬಂದಿದೆ. ಆದರೆ ಇದಕ್ಕೆ ಸಾರ್ವಜನಿಕರು ಹೈರಾಣಾಗಬೇಕಾಗಿದೆ.

ಮುಚ್ಚಿದ ಬಾಗಿಲು ತೆರೆದಿಲ್ಲ: ನೂರಾರು ಕಟ್ಟಡ ಕಾರ್ಮಿಕರು ಇಲ್ಲಿನ ವಲಯ ಕಚೇರಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಬಂದು ಹೋಗುತ್ತಿದ್ದಾರೆ. ಆದರೆ ಕಚೇರಿಯ ಮುಚ್ಚಿದ ಬಾಗಿಲು ಇಂದಿಗೂ ತೆರೆದಿಲ್ಲ. ಕಾರ್ಮಿಕರು ನಿರೀಕ್ಷಕರ ಪತ್ರದ ಸೂಚನೆ ಮೇರೆಗೆ ಕಚೇರಿ ಬಂದ್ ಆಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ತುರ್ತಾಗಿ ಸಂಪರ್ಕಿಸುವ ಮೊಬೈಲ್ ಸಂಖ್ಯೆ ಸೇರಿದಂತೆ ಯಾವ ಮಾಹಿತಿ ಕಚೇರಿ ಬಳಿ ಹಾಕಿಲ್ಲ.

ಕಳೆದ 3 ವರ್ಷಗಳಿಂದ ಕಾರ್ಮಿಕರ ನಿರೀಕ್ಷಕರ ಕಾಯಂ ಹುದ್ದೆ ಖಾಲಿಯಿದ್ದು, ಧಾರವಾಡ, ರಾಣಿಬೆನ್ನೂರಿನ ಕಚೇರಿ ಕಾರ್ಮಿಕ ನಿರೀಕ್ಷಕರೇ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಹೀಗಾಗಿ ಸಕಾಲಕ್ಕೆ ನಿರೀಕ್ಷಕರು ವಲಯ ಕಚೇರಿಗೆ ಬರುತ್ತಿಲ್ಲ. ಇಲ್ಲಿಯವರೆಗೂ ಡಾಟಾ ಆಪರೇಟರಗಳೇ ಎಲ್ಲವನ್ನು ನಿಭಾಯಿಸುತ್ತಿದ್ದು, ಕಚೇರಿಯಲ್ಲಿ ಅವ್ಯವಹಾರಗಳಿಗೆ ಅಪ್ರತ್ಯಕ್ಷವಾಗಿ ಅವಕಾಶ ನೀಡಿದಂತಾಗಿದೆ.

ಕಾರ್ಮಿಕರಿಗೆ ತೊಂದರೆ: ತಾಲೂಕಿನ ಯಾವುದೇ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡುವ ಸಂದರ್ಭ ಅಥವಾ ಏನಾದರೂ ಸಮಸ್ಯೆಯಿದ್ದಲ್ಲಿ ತಕ್ಷಣ ತಹಸೀಲ್ದಾರರ ಗಮನಕ್ಕೆ ತರಬೇಕಿದೆ. ಆದರೆ ಕಳೆದ 10 ದಿನಗಳಿಂದ ಕಚೇರಿ ಬಾಗಿಲು ಮುಚ್ಚಿರುವುದು ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು, ಈ ಕುರಿತು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ವ್ಯವಸ್ಥೆ ಸರಿಪಡಿಸುವೆ ಎಂದು ತಹಸೀಲ್ದಾರ್ ಫಿರೋಜ್‌ಷಾ ಸೋಮನಕಟ್ಟಿ ತಿಳಿಸಿದರು.

ವ್ಯವಸ್ಥೆ ಸರಿದಾರಿಗೆ: ಬೆಂಗಳೂರು ಕಾರ್ಮಿಕ ಮಂಡಳಿ ನಿರ್ದೇಶನದಂತೆ ಬ್ಯಾಡಗಿ ವಲಯ ಕಚೇರಿಗೆ ಇಬ್ಬರು ಡಾಡಾ ಆಪರೇಟರ್ ನೇಮಿಸಲಾಗಿತ್ತು. ಈಗ ಜಿಲ್ಲೆಯಲ್ಲಿರುವ ಎಲ್ಲ ಡಾಡಾ ಆಪರೇಟರ್‌ಗಳನ್ನು ವಿವಿಧ ಕಾರಣದಿಂದ ತೆಗೆದುಹಾಕಲಾಗಿದೆ. ರಾಣಿಬೆನ್ನೂರು ಕಾರ್ಮಿಕ ನಿರೀಕ್ಷನಾಗಿರುವ ನನಗೆ ಹೆಚ್ಚುವರಿಯಾಗಿ ಬ್ಯಾಡಗಿ ವಲಯದ ಪ್ರಭಾರಿಯಾಗಿ ಒಂದು ವಾರದಿಂದ ಜವಾಬ್ದಾರಿ ನೀಡಲಾಗಿದೆ. ಕೂಡಲೇ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಬ್ಯಾಡಗಿ ವಲಯ ಪ್ರಭಾರಿ ಕಾರ್ಮಿಕ ನಿರೀಕ್ಷಕ ದೇವೇಂದ್ರಪ್ಪ ನಾಟೇಕರ್ ತಿಳಿಸಿದರು.

ಕಚೇರಿಯಲ್ಲಿ ಸಹಾಯವಾಣಿ ಅಳವಡಿಸಿ

ದೂರದ ಊರುಗಳಿಂದ ಬಂದು ಹೋಗುವ ಸಾರ್ವಜನಿಕರಿಗೆ ಕಚೇರಿಯಲ್ಲಿ ಕಾರ್ಮಿಕ ನಿರೀಕ್ಷಕರ ಹೆಸರು ಮೊಬೈಲ್ ಸಂಖ್ಯೆ, ಸಿಬ್ಬಂದಿ, ಆಪರೇಟರ್, ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ಯಾವುದೇ ಮಾಹಿತಿ ನೀಡದೆ ಕಳೆದ ಹತ್ತಾರು ದಿನಗಳಿಂದ ಕಚೇರಿ ಸ್ಥಗಿತಗೊಳಿಸಲಾಗಿದೆ. ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕ ನಿರೀಕ್ಷಕರು ಲಭ್ಯವಿರುವ ಸಮಯವೂ ಗೊತ್ತಿಲ್ಲ. ಅಷ್ಟಕ್ಕೂ ತಾಲೂಕು ಮಟ್ಟದ ಸಭೆ, ಸಮಾರಂಭಗಳಲ್ಲಿ ಕಾಣಿಸುವುದು ತೀರಾ ಕಡಿಮೆ. ಕಾರ್ಮಿಕರಿಗೆ ನೇರವಾಗಿ ಪ್ರಭಾರಿ ನಿರೀಕ್ಷಕರು ಸಿಗುವುದಿಲ್ಲ. ಈ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಕ್ಷಣ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೇ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.