ನೀತಿಸಂಹಿತೆ ಕೊನೆಗೊಂಡ ಬಳಿಕ ನೃತ್ಯ ಪರೀಕ್ಷೆ ದಿನಾಂಕ ನಿಗದಿ: ಪ್ರೊ.ನಾಗೇಶ್‌ ಬೆಟ್ಟಕೋಟೆ

| Published : Apr 04 2024, 01:04 AM IST

ನೀತಿಸಂಹಿತೆ ಕೊನೆಗೊಂಡ ಬಳಿಕ ನೃತ್ಯ ಪರೀಕ್ಷೆ ದಿನಾಂಕ ನಿಗದಿ: ಪ್ರೊ.ನಾಗೇಶ್‌ ಬೆಟ್ಟಕೋಟೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಂಗೀತ, ನೃತ್ಯ, ತಾಳವಾದ್ಯಗಳ ಪರೀಕ್ಷೆ ಗಂಗೂಬಾಯಿ ಹಾನಗಲ್‌ ವಿವಿಗೆ ಹಸ್ತಾಂತರಗೊಂಡಿದೆ. ಇದು ವಿವಿಯಿಂದ ಮೊದಲ ಬಾರಿಗೆ ನಡೆಸಲ್ಪಡುವ ಜೂನಿಯರ್‌, ಸೀನಿಯರ್‌, ಪೂರ್ವ ವಿದ್ವತ್‌ ಹಾಗೂ ವಿದ್ವತ್‌ ಪರೀಕ್ಷೆಯಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಶಿಕ್ಷಕರ ನೋಂದಣಿಯ ಪರಿಶೀಲನೆ ನಡೆಯುತ್ತಿದೆ. ಇದರಲ್ಲಿನ ನ್ಯೂನತೆಗಳನ್ನು ಸರಿಪಡಿಯುವ ಪ್ರಕ್ರಿಯೆಯೂ ಸಾಗುತ್ತಿದೆ. ಲೋಕಸಭಾ ಚುನಾವಣೆ ನೀತಿಸಂಹಿತೆ ಮುಕ್ತಾಯಗೊಂಡ ಕೂಡಲೇ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಾಗೇಶ್‌ ಬೆಟ್ಟಕೋಟೆ ಹೇಳಿದ್ದಾರೆ. ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷಾ ಶಿಕ್ಷಕರ ನೋಂದಣಿ ಪರಿಶೀಲನೆ ಬಳಿಕ ಬುಧವಾರ ಅವರು ಸುದ್ದಿಗಾರರಲ್ಲಿ ಮಾತನಾಡಿದರು. ಈ ವರ್ಷ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಂಗೀತ, ನೃತ್ಯ, ತಾಳವಾದ್ಯಗಳ ಪರೀಕ್ಷೆ ಗಂಗೂಬಾಯಿ ಹಾನಗಲ್‌ ವಿವಿಗೆ ಹಸ್ತಾಂತರಗೊಂಡಿದೆ. ಇದು ವಿವಿಯಿಂದ ಮೊದಲ ಬಾರಿಗೆ ನಡೆಸಲ್ಪಡುವ ಜೂನಿಯರ್‌, ಸೀನಿಯರ್‌, ಪೂರ್ವ ವಿದ್ವತ್‌ ಹಾಗೂ ವಿದ್ವತ್‌ ಪರೀಕ್ಷೆಯಾಗಲಿದೆ. ಪ್ರಸಕ್ತ ರಾಜ್ಯದ ಎಲ್ಲ ಜಿಲ್ಲೆಗಳಿಂದ 3,560 ಶಿಕ್ಷಕರು ನೋಂದಣಿಯಾಗಿದ್ದು, 17,670 ಮಂದಿ ವಿದ್ಯಾರ್ಥಿಗಳು ಸಂಗೀತ, ನೃತ್ಯ ಪರೀಕ್ಷೆ ಬರೆಯಲಿದ್ದಾರೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದರು.

ಪರೀಕ್ಷಾ ಕೇಂದ್ರ ನಿಗದಿ:

ಸಂಗೀತ, ನೃತ್ಯ ಪರೀಕ್ಷೆಗಳ ಕೇಂದ್ರಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಆಧಾರದಲ್ಲಿ ನಿಗದಿಯಾಗಲಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುವುದು. ಶಿಕ್ಷಕರ ನೋಂದಣಿ ದಾಖಲೆ ಪರಿಶೀಲನೆ ಪೂರ್ಣಗೊಂಡ ಬಳಿಕ ಪರೀಕ್ಷಾ ಕೇಂದ್ರ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಈಗಾಗಲೇ ಗಂಗೂಬಾಯಿ ಹಾನಗಲ್‌ ವಿವಿ ಜತೆ ರಾಜ್ಯದ ವಿವಿಧ ಜಿಲ್ಲೆಗಳ 43 ಕ್ಕಿಂತ ಅಧಿಕ ಸಂಸ್ಥೆಗಳು ಸಂಗೀತ, ನೃತ್ಯ, ಪ್ರದರ್ಶನ ಕಲೆಗಳ ಕಲಿಕೆ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಮಂಗಳೂರಿನಲ್ಲಿ ಸಂಗೀತ, ನೃತ್ಯಕ್ಕೆ ಸಂದೇಶ ಪ್ರತಿಷ್ಠಾನ ಹಾಗೂ ಥಿಯೇಟರ್‌ ಕಲೆಗೆ ಮಾಂಡ್‌ ಸೋಭಾಣ್‌ ಒಪ್ಪಂದ ಮಾಡಿಕೊಂಡಿದೆ ಎಂದರು.