ಸಾರಾಂಶ
- 4 ಸಾವಿರ ಪೊಲೀಸರು, 61 ಮಂದಿ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿಗಳ ನಿಯೋಜನೆ । 36 ಚೆಕ್ ಪೋಸ್ಟ್‌ಗಳು, ಜಂಟಿ ಸುದ್ದಿಗೋಷ್ಠಿಯಲ್ಲಿ ಡಿಸಿ- ಎಸ್‌ಪಿ ಮಾಹಿತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇದೇ ಡಿಸೆಂಬರ್ 12 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ದತ್ತ ಜಯಂತಿ ಉತ್ಸವ ಶಾಂತ ರೀತಿಯಲ್ಲಿ ನಡೆಸುವ ಸಂಬಂಧ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಡಿ.12 ರಂದು ಚಿಕ್ಕಮಗಳೂರಿನಲ್ಲಿ ಸಂಕೀರ್ತನಾ ಯಾತ್ರೆ, 13 ರಂದು ಶೋಭಾಯಾತ್ರೆ ನಡೆಯಲಿದೆ. 14 ರಂದು ದತ್ತಪೀಠದಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯದ ವಿವಿಧೆಡೆಯಿಂದ ಸಾವಿರಾರು ದತ್ತ ಭಕ್ತರು ದತ್ತಜಯಂತಿಗೆ ಆಗಮಿಸಲಿದ್ದಾರೆ. ಅವರು ತೆರಳುವ ಮಾರ್ಗವನ್ನು ಪರಿಶೀಲಿಸಲಾಗಿದೆ. ಸತತ ಮಳೆಯಿಂದಾಗಿ ಕವಿಕಲ್ ಗಂಡಿ ಹಾಗೂ ಹೊನ್ನಮ್ಮನಹಳ್ಳ ಬಳಿ ರಸ್ತೆ ಹಾಳಾಗಿದೆ. ದತ್ತಪೀಠಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸವಲತ್ತು ನೀಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ರಸ್ತೆ ಹಾಳಾಗಿದ್ದರಿಂದ ಲಾಂಗ್ ಚಾಸ್ಸಿ ವಾಹನಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಕಳೆದ ವರ್ಷವೂ ಕೂಡ ಇದೇ ಕ್ರಮ ತೆಗೆದುಕೊಂಡಿದ್ದರೂ ಕರಾವಳಿ ಜಿಲ್ಲೆಯಿಂದ ಲಾಂಗ್ ಚಾಸ್ಸಿ ವಾಹನಗಳು ಬೆಳ್ಳಂಬೆಳಿಗ್ಗೆ ಬಂದಿದ್ದವು. ರಸ್ತೆ ಹಾಳಾಗಿದ್ದ ರಿಂದ ಉದ್ದನೆ ಬಸ್‌ಗಳ ಸಂಚಾರದಿಂದ ಇತರರಿಗೂ ತೊಂದರೆಯಾಗಲಿದೆ. ಹಾಗಾಗಿ ಆದಷ್ಟು ಆ ರೀತಿಯ ಬಸ್‌ಗಳಲ್ಲಿ ಬರದಂತೆ ಆಯೋಜಕರಿಗೆ ತಿಳಿಸಲಾಗಿದೆ. ಆದರೂ ಕೂಡ ಅಂತಹದ್ದೆ ಬಸ್ಸಿನಲ್ಲಿ ಬಂದವರಿಗೆ ಚೆಕ್ ಪೋಸ್ಟ್‌ನಲ್ಲಿಯೇ ಇಳಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಕನಿಷ್ಠ 10 ಮಿನಿ ಬಸ್‌ಗಳನ್ನು ಬೇರೆ ಡಿಪೋ ಗಳಿಂದ ತರಿಸಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.ದತ್ತಪಾದುಕೆಗಳ ದರ್ಶನದತ್ತಪೀಠದ ಗುಹೆಯಲ್ಲಿರುವ ದತ್ತಪಾದುಕೆಗಳ ದರ್ಶನಕ್ಕೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಅವಕಾಶ ನೀಡಲಾಗಿದೆ. ಭಕ್ತರು ಸರದಿ ಸಾಲಿನಲ್ಲಿ ನಿಂತು ಗುಹೆಯೊಳಗೆ ತೆರಳಬೇಕು. ಗುಹೆ ಒಳ ಭಾಗದಲ್ಲಿ ಮೊಬೈಲ್ ಪೋನ್ ಬಳಕೆ ನಿಷೇಧಿಸ ಲಾಗಿದೆ. ಹಾಗಾಗಿ ಭಕ್ತರು ತಮ್ಮ ಮೊಬೈಲ್ ಪೋನ್‌ಗಳನ್ನು ವಾಹನಗಳಲ್ಲಿ ಬಿಟ್ಟು ಹೋಗಬೇಕು ಎಂದು ಹೇಳಿದರು.
ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೈಮರದಿಂದ ಮಧ್ಯಾಹ್ನ 2 ಗಂಟೆವರೆಗೆ ವಾಹನಗಳು ದತ್ತಪೀಠಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಬೆಟ್ಟದಿಂದ ಮಧ್ಯಾಹ್ನ 2 ಗಂಟೆ ನಂತರ ವಾಹನಗಳು ಕೆಳ ಭಾಗಕ್ಕೆ ಬಿಡಲಾಗುವುದು ಎಂದು ಹೇಳಿದರು.ರಾಜ್ಯದ ವಿವಿಧೆಡೆಯಿಂದ ಡಿ. 14 ರಂದು ಭಕ್ತರು ಗಿರಿಗೆ ಬರಲಿದ್ದಾರೆ. ಹಾಗಾಗಿ ಆ ದಿನದಂದು ಭಕ್ತರು ಬಂದು ಹೋಗುವ ರಸ್ತೆಯಲ್ಲಿರುವ ಸಸ್ಯಹಾರಿ ಹೊರತುಪಡಿಸಿ ಇತರೆ ಹೋಟೆಲ್‌ಗಳನ್ನು ಬಂದ್ ಮಾಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದ ಅವರು,
ಡಿ. 13ರ ಬೆಳಿಗ್ಗೆ 6 ರಿಂದ ಡಿ. 14ರ ರಾತ್ರಿ 11 ಗಂಟೆವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಿಷೇಧಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉಪಸ್ಥಿತರಿದ್ದರು.
--- ಬಾಕ್ಸ್---ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್
ದತ್ತಜಯಂತಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಶಾಂತಿ ಸಭೆಗಳನ್ನು ನಡೆಸಲಾಗಿದೆ. ನೆರೆ ಜಿಲ್ಲೆ ಗಳಲ್ಲೂ ಸಭೆಗಳನ್ನು ನಡೆಸುವಂತೆ ಕೋರಿಕೊಳ್ಳಲಾಗಿದೆ. ಈವರೆಗೆ ಒಂದು ಸಾವಿರ ಮಂದಿ ಜಿಲ್ಲೆಯಲ್ಲಿ ದತ್ತಮಾಲೆ ಧರಿಸಿದ್ದಾರೆ. ವಿ ಎಚ್ ಪಿ ಸಂಘಟನೆಯವರು ಸುಮಾರು 40 ಸ್ಥಳಗಳಲ್ಲಿ ಸಂಕೀರ್ತನಾ ಹಾಗೂ ಶೋಭಾಯಾತ್ರೆ ನಡೆಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ 4 ಸಾವಿರ ಮಂದಿ ಪೊಲೀಸರು ಮಾಡಲಾಗಿದೆ. 7 ಮಂದಿ ಎಸ್‌ಪಿ, 27 ಮಂದಿ ಡಿವೈಎಸ್ಪಿ, 45 ಮಂದಿ ಇನ್ಸ್‌ಸ್ಪೆಕ್ಟರ್, 300 ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್, 500 ಮಂದಿ ಗೃಹ ರಕ್ಷಕದಳ ಸಿಬ್ಬಂದಿ, 20 ಕೆಎಸ್‌ಆರ್‌ಪಿ, 28 ಡಿಎಆರ್ ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬಲು ರೂಟ್ ಮಾರ್ಚ್ ನಡೆಸಲು ಆರ್‌ಐಎಫ್ ತುಕಡಿ ನಿಯೋಜಿಸಲಾಗಿದೆ ಎಂದು ಹೇಳಿದರು.8-10 ದ್ರೋಣ್ ಕ್ಯಾಮೆರಾಗಳು ಬಳಸಿಕೊಳ್ಳಲಾಗುತ್ತಿದೆ. 400 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 100 ಮಂದಿ ಪೊಲೀಸ್ ಸಿಬ್ಬಂದಿಗೆ ಹ್ಯಾಂಡ್ ಹಾಗೂ ಬಾಡಿ ಕ್ಯಾಮೆರಾಗಳನ್ನೂ ನೀಡಲಾಗುವುದು. ಜಿಲ್ಲೆಯಲ್ಲಿ 36 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ನೆರೆ ಜಿಲ್ಲೆಗಳ ಗಡಿ ಭಾಗದಲ್ಲೂ ಚೆಕ್ ಪೋಸ್ಟ್ ತೆರೆಯಲು ಅಲ್ಲಿನ ಜಿಲ್ಲಾಡಳಿತಗಳಿಗೆ ಮನವಿ ಮಾಡಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 61 ಮಂದಿ ವಿಶೇಷ ದಂಡಾಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಬೇರೆ ಯಾವುದೇ ವ್ಯಕ್ತಿ ಹಾಗೂ ಕೋಮಿನ ಜನರ ಭಾವನೆಗಳಿಗೆ ದಕ್ಕೆಯಾಗದ ರೀತಿ ಕಾರ್ಯಕ್ರಮ ನಡೆಸ ಬೇಕೆಂದು ಸಂಘಟಕರಿಗೆ ಸೂಚನೆ ನೀಡಲಾಗಿದೆ. ಈ ನಿಯಮ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ನಡೆದ ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ಸಮರಸ್ಯ ಕದಡುವ ರೀತಿಯಲ್ಲಿ ಮಾತನಾಡಿರುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು. 9 ಕೆಸಿಕೆಎಂ 1 ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಡಿಸಿ ಮೀನಾ ನಾಗರಾಜ್ ಅವರು ಮಾತನಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ ಇದ್ದರು.