ಸಾರಾಂಶ
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ದತ್ತಪೀಠದಲ್ಲಿ ಶನಿವಾರ ಶ್ರೀ ದತ್ತ ಜಯಂತಿ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ದತ್ತಪೀಠದಲ್ಲಿ ಶನಿವಾರ ಶ್ರೀ ದತ್ತ ಜಯಂತಿ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ರಾಮನಗರ, ಬೆಂಗಳೂರು, ಮಂಡ್ಯ, ಮೈಸೂರು, ಕೋಲಾರ, ತುಮಕೂರು ಮತ್ತಿತರ ಜಿಲ್ಲೆಗಳಿಂದ ನೂರಾರು ಭಕ್ತರು ದತ್ತ ಜಯಂತಿಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಶನಿವಾರ ಪ್ರಾತಃಕಾಲ 5 ಗಂಟೆಗೆ ಗಣಪತಿ ಪ್ರಾರ್ಥನೆ, ಕಾಕಡಾರತಿ, ನಿರ್ಮಾಲ್ಯ ವಿಸರ್ಜನೆ ನಂತರ ಅಭ್ಯಂಜನ ಸ್ಥಾನದೊಂದಿಗೆ ದತ್ತ ಜಯಂತಿ ಆಚರಣೆ ಆರಂಭವಾಯಿತು. ಮಹನ್ಯಾಸಪೂರ್ವಕ ಶತರುದ್ರ ಅಭಿಷೇಕ, ಸಾರ್ವತ್ರಿಕ ಮಹಾ ಸಂಕಲ್ಪಗಳು ನಡೆದವು. ಶ್ರೀ ದತ್ತಾತ್ರೇಯ ಮೂರ್ತಿಗೆ ಬಗೆಬಗೆಯ ಹೂವಿನ ಅಲಂಕಾರ, ಆಭರಣಗಳಿಂದ ಅಲಂಕರಿಸಲಾಗಿತ್ತು. ಇಡೀ ದೇವಾಲಯ ಹೂಗಳು ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತ್ತು.ದೇವಾಲಯದ ಆವರಣದಲ್ಲಿ ಗಣಪತಿ ಹೋಮ, ದತ್ತಾತ್ರೇಯ ಹೋಮ, ರುದ್ರ ಹೋಮ, ದೇವಿ ಹೋಮ, ಸುಬ್ರಹ್ಮಣ್ಯ ಹೋಮ, ಆಂಜನೇಯ ಹೋಮ, ನವಗ್ರಹ ಹೋಮ ನಿರ್ವಿಘ್ನವಾಗಿ ನೆರೆವೇರಿತು. ಋತ್ವಿಕರ ವೇದ ಮಂತ್ರ ಘೋಷ ನೆರೆದಿದ್ದವರಲ್ಲಿ ಭಕ್ತಿ ಭಾವವನ್ನು ಇಮ್ಮಡಿಗೊಳಿಸಿತು.
ಒಂದೆಡೆ ಹೋಮ ನಡೆಯುತ್ತಿದ್ದರೆ ಮತ್ತೊಂತೆಡೆ ಔದಂಬರ ಪೂಜೆ, ಗೋಪೂಜೆ, ದತ್ತ ಪಾದುಕ ವಿಶೇಷ ಪೂಜೆ, ಕನ್ನಿಕ ಪೂಜೆ, ಸುಮಂಗಲಿ ಪೂಜೆ, ದಂಪತಿ ಪೂಜೆ ನೆರೆವೇರಿತು. ತದ ನಂತರ ಶ್ರೀ ದತ್ತಾತ್ರೇಯ ಸ್ವಾಮಿಯ ಮೆರವಣಿಗೆ ನಡೆಯಿತು. ಮಧ್ಯಾಹ್ನದ ವೇಳೆಗೆ ಪೂರ್ಣಾಹುತಿ ನಂತರ ಮಹಾ ನೈವೇದ್ಯ ಮತ್ತು ಮಹಾ ಮಂಗಳಾರತಿ, ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆದವು.ಖ್ಯಾತನಾಮರಿಂದ ದತ್ತ ಸಂಗೀತೋತ್ಸವ:
ದೇವಾಲಯದಲ್ಲಿ ದತ್ತ ಜಯಂತಿಯ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದರೆ, ಅತ್ರಿ ಅನಸೂಯ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತಗಾರರಿಂದ ದತ್ತ ಸಂಗೀತೋತ್ಸವ ನೆರೆದಿದ್ದ ಭಕ್ತರನ್ನು ಭಕ್ತಿ ಭಾವದಲ್ಲಿ ತೇಲಿಸಿತು. ವಿದ್ವಾನ್ ಮೈಸೂರು ಎಂ.ನಾಗರಾಜ್ (ಪಿಟೀಲು), ವಿದ್ವಾನ್ ಡಾ.ಮೈಸೂರು ಎಂ.ಮಂಜುನಾಥ್ (ಪಿಟೀಲು), ವಿದ್ವಾನ್ ಬೆಂಗಳೂರು ವಿ.ಪ್ರವೀಣ್ (ಮೃದಂಗ), ವಿದ್ವಾನ್ ಜಿ.ಗುರುಪ್ರಸನ್ನ (ಖಂಚಿರ) ಅವರುಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆದವು. ಇದೇ ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶನವೂ ನೆರೆವೇರಿತು.ದತ್ತ ಔಪಾಸಕ ಅನಂತ ಸತ್ಯಂ ನೇತೃತ್ವದಲ್ಲಿ ದತ್ತ ಜಯಂತ್ಯುತ್ಸವ ಆಚರಣೆಯಾಯಿತು. ಪ್ರಧಾನ ಆಗಮಿಕರಾಗಿ ಮಿಗಿನಕಲ್ಲು ವಿಶ್ವೇಶ್ವರ ಭಟ್ ಮತ್ತು ತಂಡ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಬಿ.ವಿ.ಗುರುಮೂರ್ತಪ್ಪ ಅವರ ಕುಟುಂಬಸ್ಥರು ಜಯಂತಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
14ಕೆಆರ್ ಎಂಎನ್ 1,2.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ದತ್ತಪೀಠದಲ್ಲಿ ಶನಿವಾರ ಶ್ರೀ ದತ್ತ ಜಯಂತಿ ಮಹೋತ್ಸವ ನೆರವೇರಿತು.