ದತ್ತ ಜಯಂತಿ: ಚಿಕ್ಕಮಗಳೂರಿನಲ್ಲಿಂದು ಸಂಕೀರ್ತನಾ ಯಾತ್ರೆ

| Published : Dec 12 2024, 12:34 AM IST

ದತ್ತ ಜಯಂತಿ: ಚಿಕ್ಕಮಗಳೂರಿನಲ್ಲಿಂದು ಸಂಕೀರ್ತನಾ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿ ಉತ್ಸವದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಇಂದಿನಿಂದ 3ರು ದಿನ ದತ್ತ ಜಯಂತಿ ಉತ್ಸವ । ಮದುವಣಗಿತ್ತಿಯಂತೆ ಶೃಂಗಾರಗೊಂಡ ಚಿಕ್ಕಮಗಳೂರು । ಬಂದೋಬಸ್ತಿಗೆ 4 ಸಾವಿರ ಪೊಲೀಸರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿ ಉತ್ಸವದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಕಾರ್ಯಕರ್ತರು ಸತತ ಒಂದು ವಾರಗಳಿಂದ ಹಗಲು ರಾತ್ರಿ ನಗರದ ಪ್ರಮುಖ ರಸ್ತೆಗಳನ್ನು ಅಲಂಕಾರಗೊಳಿಸಿದ್ದಾರೆ. ಎಲ್ಲಿ ನೋಡಿದರಲ್ಲಿ ಭಗವದ್ವಜಗಳು ರಾರಾಜಿಸುತ್ತಿವೆ. ಶೋಭಾಯಾತ್ರೆ ಹಾದು ಹೋಗುವ ಟೌನ್‌ ಕ್ಯಾಂಟಿನ್‌, ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ, ಆಜಾದ್ ಪಾರ್ಕ್‌ ವೃತ್ತ, ಎನ್‌.ಎಂ.ಸಿ. ವೃತ್ತ, ಆಶೀರ್ವಾದ ಸರ್ಕಲ್‌ನಲ್ಲಿ ಅತಿ ಹೆಚ್ಚು ಶೃಂಗಾರಗೊಳಿಸಲಾಗಿದೆ.

ದೀಪಾಲಂಕಾರ ರಾತ್ರಿ ವೇಳೆಯಲ್ಲೂ ಇನ್ನಷ್ಟು ಮೆರಗು ನೀಡಿದೆ. ಪ್ರಮುಖ ರಸ್ತೆಗಳಲ್ಲಿ ಉತ್ಸವದ ಅದ್ಧೂರಿ ಕಂಡು ಬರುತ್ತಿದೆ. ಸುಮಾರು 2 ದಶಕಗಳ ಹಿಂದಿನ ವೈಭವ ಮರುಕಳಿಸಿದೆ. ಈ ಉತ್ಸವದಲ್ಲಿ ಸಾರ್ವಜನಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಕಾರ್ಯಕರ್ತರು, ಮಾಲೆ ಧರಿಸಿರುವ ಯುವಕರು ನಗರದ ಪ್ರಮುಖ ರಸ್ತೆಗಳು ಹಾಗೂ ಹೃದಯ ಭಾಗದಲ್ಲಿರುವ ಬಡಾವಣೆಗಳಲ್ಲಿ ಬೈಕ್‌ ಜಾಥವನ್ನು ನಡೆಸಿದರು. ದಾರಿ ಉದ್ದಕ್ಕೂ ಜೈ ಶ್ರೀರಾಮ್‌, ಜೈ ಹನುಮಾನ್ ಘೋಷಣೆಗಳು ಹಾಕಿ ಸಂಭ್ರಮಿಸಿದರು.

ದತ್ತ ಜಯಂತಿ ಉತ್ಸವದ ಮೊದಲ ದಿನ ಗುರುವಾರದಂದು ನಗರದ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣ ದಿಂದ ಮಾತೆಯರು ಭಜನೆ ಹಾಗೂ ಸಂಕೀರ್ತಾನೆಯೊಂದಿಗೆ ಕೆ.ಎಂ. ರಸ್ತೆ, ಆರ್‌.ಜಿ. ರಸ್ತೆ ಮೂಲಕ ಶ್ರೀ ಕಾಮಧೇನು ಗಣಪತಿ ದೇವಾಲಯಕ್ಕೆ ತೆರಳಿ ಅಲ್ಲಿಂದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ಶ್ರೀ ಗುರು ದತ್ತಾತ್ರೇಯ ಪಾದುಕೆಗಳ ದರ್ಶನ ಪಡೆಯಲಿದ್ದಾರೆ.

ಡಿ. 13 ರಂದು ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದೆ. ನಂತರ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ಡಿ. 14 ರಂದು ದತ್ತಪೀಠಕ್ಕೆ ರಾಜ್ಯದ ವಿವಿಧೆಡೆಯಿಂದ ದತ್ತಮಾಲಾಧಾರಿಗಳು ಆಗಮಿಸಲಿ ದ್ದಾರೆ. ಸದ್ಯದ ಅಂದಾಜಿನ ಪ್ರಕಾರ ಸುಮಾರು 25 ಸಾವಿರ ಮಂದಿ ಭಕ್ತರು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಬಂದೋಬಸ್ತ್:

ದತ್ತ ಜಯಂತಿ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಕ್ಷಣಕ್ಕೆ ಕಾರ್ಯ ಪ್ರವೃತ್ತರಾಗಲು 61 ಮಂದಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನು ಜಿಲ್ಲಾಡಳಿತ ನೇಮಕ ಮಾಡಿದೆ. ಈಗಾಗಲೇ ಈ ಅಧಿಕಾರಿಗಳನ್ನು ನಿಗಧಿತ ಸ್ಥಳಗಳಿಗೆ ನಿಯೋಜನೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ 36 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ನಿಯೋಜನೆ ಮಾಡಲಾಗಿದೆ. 20 ಮಂದಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳನ್ನು ಕಾಯ್ದಿರಿಸಲಾಗಿದೆ.

ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ 4 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. 7 ಮಂದಿ ಎಎಸ್ಪಿ, 27 ಮಂದಿ ಡಿವೈಎಸ್ಪಿ, 45 ಮಂದಿ ಇನ್ಸ್‌ಸ್ಪೆಕ್ಟರ್‌, 300 ಪೊಲೀಸ್ ಸಬ್ ಇನ್ಸ್‌ಸ್ಪೆಕ್ಟರ್‌, 500 ಮಂದಿ ಗೃಹ ರಕ್ಷಕದಳ ಸಿಬ್ಬಂದಿ, 20 ಕೆಎಸ್ಆರ್‌ಪಿ, 28 ಡಿಎಆರ್ ನಿಯೋಜಿಸಲಾಗಿದೆ. ಇದರ ಜತೆಗೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬಲು ರೂಟ್ ಮಾರ್ಚ್ ನಡೆಸಲು ಆರ್‌ಐಎಫ್‌ ತುಕಡಿಯನ್ನು ನಿಯೋಜಿಸಲಾಗಿದೆ. 8-10 ದ್ರೋಣ್ ಕೆಮರಾಗಳು ಬಳಸಿಕೊಳ್ಳಲಾಗುತ್ತಿದೆ. 400 ಸಿಸಿ ಟಿವಿ ಕೆಮರಾ ಅಳವಡಿಸಲಾಗಿದೆ. 100 ಮಂದಿ ಪೊಲೀಸ್ ಸಿಬ್ಬಂದಿ ಹ್ಯಾಂಡಿ ಹಾಗೂ ಬಾಡಿ ಕೆಮರಾಗಳನ್ನು ನೀಡಲಾಗಿದೆ.ರೂಟ್‌ ಮಾರ್ಚ್‌:

ಪಶ್ಚಿಮ ವಲಯದ ಐಜಿಪಿ ಅಮಿತ್‌ ಸಿಂಗ್ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರೊಂದಿಗೆ ಬಂದೋಬಸ್ತ್ ಬಗ್ಗೆ ಪರಿಶೀಲನೆ ನಡೆಸಿದರು.

ಕರ್ತವ್ಯದಲ್ಲಿರುವ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಅಡುಗೆ ತಯಾರಿಸುವ ಸ್ಥಳ, ಊಟದ ಸ್ಥಳ, ಸ್ವಚ್ಛತೆ, ಶುಚಿತ್ವ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರ ಪರಿಶೀಲಿಸಿದರು.

ಸಂಜೆ ಇಲ್ಲಿನ ಡಿಎಆರ್‌ ಮೈದಾನದಿಂದ ಹೊರಟು ಟೌನ್‌ ಕ್ಯಾಂಟಿನ್‌ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಆಜಾದ್‌ ಪಾರ್ಕ್‌, ಐ.ಜಿ. ರಸ್ತೆಯಿಂದ ಆರ್‌.ಜಿ. ರಸ್ತೆಯಲ್ಲಿ ನಡೆದ ರೂಟ್‌ ಮಾರ್ಚ್‌ನಲ್ಲಿ ಅವರು ಪಾಲ್ಗೊಂಡಿದ್ದರು.

11 ಕೆಸಿಕೆಎಂ 5ದತ್ತ ಜಯಂತಿ ಉತ್ಸವದ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರವನ್ನು ಅಲಂಕರಿಸಿರುವುದು.

---- 11 ಕೆಸಿಕೆಎಂ 6ದತ್ತ ಜಯಂತಿ ಹಿನ್ನಲೆಯಲ್ಲಿ ಬಂದೋಬಸ್ತ್‌ಗೆ ನಿಯೋಜನೆ ಮಾಡಿರುವ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಚಿಕ್ಕಮಗಳೂರಿನಲ್ಲಿ ಬುಧವಾರ ರೂಟ್‌ ಮಾರ್ಚ್‌ ನಡೆಸಿದರು.