ಸಾರಾಂಶ
ನರಸಿಂಹರಾಜಪುರ : ಚಿಕ್ಕಮಗಳೂರಿನ ದತ್ತ ಪೀಠ ಕರ್ನಾಟಕದ ಅಯೋದ್ಯೆಯಾಗಿದ್ದು ಲಕ್ಷಾಂತರ ಭಕ್ತರು ದತ್ತಾತ್ರೇಯ ಪಾದುಕೆ ನೋಡಿ ಪುನೀತರಾಗುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ್ಯದ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದರು.
ಮಂಗಳವಾರ ಸಂಜೆ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ನಡೆದ ಹಿಂದೂ ಸಮ್ಮಿಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ, ದತ್ತ ಪೀಠ ಋಷಿಗಳು, ಮಹಾ ಮುನಿಗಳು ತಪಸ್ಸು ಮಾಡಿದ ಪುಣ್ಯ ಭೂಮಿ. ವಿಶ್ವ ಹಿಂದೂಪರಿಷತ್ ದತ್ತ ಪೀಠ ಉಳಿಸಲು ಕಳೆದ 25 ವರ್ಷದಿಂದ ಹೋರಾಟ ಮಾಡುತ್ತಿದೆ. 1998ರಲ್ಲಿ ಬಜರಂಗದಳ ಹೋರಾಟದ ನೇತೃತ್ವ ವಹಿಸಿತ್ತು. ಈಗ ಇಡೀ ರಾಜ್ಯದಲ್ಲಿ ದತ್ತ ಪೀಠದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇಲ್ಲಿ ತ್ರಿಕಾಲ ಪೂಜೆ ನಡೆಯುತ್ತಿದೆ. ವ್ಯವಸ್ಥಾಪನ ಸಮಿತಿ ರಚನೆಯಾಗಿ, ರಾಜ್ಯದ 75 ಸ್ಥಳಗಳಲ್ಲಿ ಹಿಂದೂ ಸಮ್ಮಿಲನ ಕಾರ್ಯಕ್ರಮ ನಡೆಯುತ್ತಿದೆ. ಡಿ.14 ರಂದು ದತ್ತ ಪೀಠಕ್ಕೆ ರಾಜ್ಯದ ಎಲ್ಲಾ ಕಡೆ ಯಿಂದ ಲಕ್ಷಾಂತರ ಭಕ್ತರು ಬರಲಿದ್ದಾರೆ ಎಂದರು.
ದೇಶದಲ್ಲಿ 9. 40 ಲಕ್ಷ ಎಕರೆ ವಕ್ಫ್ ಬೋರ್ಡ್ ವಶದಲ್ಲಿದೆ. ನಮ್ಮ ದೇಶದ ನೂರಾರು ದೇವಸ್ಥಾನದ ಪಹಣಿಯಲ್ಲೂ ವಕ್ಪ್ ಬೋರ್ಡು ಹೆಸರಿದೆ. ಹಿಂದೂಗಳೆಲ್ಲರೂ ಒಟ್ಟಾದರೆ ಮಾತ್ರ ದೇಶ ಸಧೃಢವಾಗುತ್ತದೆ. ಧರ್ಮದ ರಕ್ಷಣೆ, ಸಂಸ್ಕಾರದ ಉಳಿವು ನಮ್ಮೆಲ್ಲರ ಕೈಯಲ್ಲಿದೆ. ಭಾರತದಲ್ಲಿ ನಾವು ಹಿಂದೂಗಳಾಗಿ ಹುಟ್ಟಿರುವುದೇ ಪುಣ್ಯ. ಹಿಂದೂಗಳು ಮುಸ್ಲಿಂ, ಕ್ರಿಶ್ಚಿಯನ್ನರ ವಿರೋಧಿಗಳಲ್ಲ. ಆದರೆ ಹಿಂದೂಗಳ ಮೇಲೆ ದೌರ್ಜನ್ಯವಾದರೆ, ಹಿಂದುತ್ವಕ್ಕೆ ಧಕ್ಕೆ ಬಂದರೆ ಸಿಡಿದೇಳುತ್ತೇವೆ. ಭಾರತ ಉಳಿದರೆ ಮಾತ್ರ ಈ ಜಗತ್ತು ಉಳಿಯುತ್ತದೆ. ಹಿಂದೂ ಧರ್ಮದಲ್ಲಿರುವ ಸ್ವಾತಂತ್ರ ಇನ್ಯಾವುದೇ ಧರ್ಮದಲ್ಲೂ ಇಲ್ಲ ಎಂದರು.ವಿಎಚ್‌ಪಿ ಶೃಂಗೇರಿ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ಮಾತನಾಡಿ, ಇಂದು ಮಾನವ ಹಕ್ಕುಗಳ ದಿನ. ಆದರೆ, ಹಿಂದೂ ಗಳ ಹಕ್ಕುಗಳನ್ನೇ ಕಿತ್ತುಕೊಳ್ಳುವ ಪರಿಸ್ಥಿತಿ ಬಂದಿದೆ. ನಮ್ಮ ಹಕ್ಕುಗಳನ್ನೇ ಹೊಸೆದು ಹಾಕಲು ಸಂಚು ನಡೆಯುತ್ತಿದೆ. ನಾವು ಇಂದು ಕೇವಲ ಶೋಭಾಯಾತ್ರೆ ಮಾಡಿಲ್ಲ. ಹಿಂದೂಗಳು ಇದ್ದೇವೆ ಎಂದು ತೋರಿಸಿದ್ದೇವೆ. ಅಫ್ಜಲ್ ಗುರುವಂತಹ ದೇಶದ್ರೋಹಿ ಪರವಾಗಿ ಕೆಲವರು ಮುಂಬತ್ತಿ ಬೆಳಗುತ್ತಾರೆ. ಆದರೆ, ಹಿಂದೂಗಳ ಮೇಲಿನ ದೌರ್ಜನ್ಯ ಏಕೆ ಖಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಹಕ್ಕು, ನಮ್ಮ ಧರ್ಮದ ರಕ್ಷಣೆಗೆ ಪ್ರತಿಕ್ರಿಯಿಸಿದರೆ ನಮ್ಮನ್ನು ಕೋಮುವಾದಿಗಳೆಂಬ ಪಟ್ಟ ಕಟ್ಟುತ್ತಾರೆ. ಹಿಂದೂಗಳು ಇನ್ನೂ ಎಚ್ಚೆತ್ತುಕೊಳ್ಳದೇ ಹೋದರೆ ಬಾಂಗ್ಲಾ ದೇಶದ ಹಿಂದೂಗಳ ಪರಿಸ್ಥಿತಿ ಭಾರತ ದೇಶಕ್ಕೂ ಬರಬಹದು ಎಂದು ಎಚ್ಚರಿಸಿದರು.
ಬಿ.ಎಚ್.ಕೈಮರದಿಂದ ಮುಖ್ಯ ರಸ್ತೆ ಮೂಲಕ ಕೊಟ್ಟೂರು ಬಸವೇಶ್ವರ ದೇವಸ್ಥಾನದವರೆಗೆ ವಾಹನ ಜಾಥಾ ನಡೆಯಿತು. ಬೆಳಿಗ್ಗೆ ಮಹಾವೀರ ಭವನದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ದತ್ತ ಪೀಠ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ದಿ.ಸುಧಾಕರ ರಾವ್ ನೆನಪಿನಲ್ಲಿ ಅವರ ಪುತ್ರ ಬಿ.ಎಸ್.ಆಶೀಶ್ ಕುಮಾರ್ ಅವರನ್ನು ಗೌರವಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೋಣನಕೆರೆ ಸತ್ಯನಾರಾಯಣ ವಹಿಸಿದ್ದರು. ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಅರುಣ ಜೈನ್, ಹಿಂದೂ ಪರಿವಾರದ ಮುಖಂಡರಾದ ಅಜಿತ್, ಹಂಚಿನಮನೆ ಅನೂಪ್, ವರ್ಕಾಟೆ ಧನಂಜಯ, ಮೂಡಬಾಗಿಲು ಅವಿನಾಶ್, ಕಾನೂರು ಗಿರೀಶ್, ಪ್ರಥಮ್ , ಮದನ್ ಗೌಡ ಇದ್ದರು.