ದತ್ತಮಾಲಾ ಅಭಿಯಾನ: ದತ್ತಮಾಲೆ ಧರಿಸಿದ ದತ್ತಭಕ್ತರು

| Published : Oct 31 2025, 01:15 AM IST

ಸಾರಾಂಶ

ಚಿಕ್ಕಮಗಳೂರು, ಈ ಬಾರಿ ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳದ ಜತೆ ಸೇರಿ ಶ್ರೀರಾಮ ಸೇನೆ ಡಿಸೆಂಬರ್‌ನಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಹಿನ್ನಲೆಯಲ್ಲಿ ದತ್ತಪೀಠ ಸೇವಾ ಸಮಿತಿಯ ಬ್ಯಾನರ್‌ ನಡಿ ಇದೇ ಮೊದಲ ಬಾರಿಗೆ ದತ್ತಮಾಲಾ ಅಭಿಯಾನ ನಡೆಸಲಾಗುತ್ತಿದೆ.

- ದತ್ತಪೀಠ ಸೇವಾ ಸಮಿತಿ ನೇತೃತ್ವ, ಕಾರ್ತಿಕ ಮಾಸದ ಪೂಜೆ, ನ. 2 ರಂದು ದತ್ತಪೀಠಕ್ಕೆ ಭಕ್ತರ ಆಗಮನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಈ ಬಾರಿ ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳದ ಜತೆ ಸೇರಿ ಶ್ರೀರಾಮ ಸೇನೆ ಡಿಸೆಂಬರ್‌ನಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಹಿನ್ನಲೆಯಲ್ಲಿ ದತ್ತಪೀಠ ಸೇವಾ ಸಮಿತಿಯ ಬ್ಯಾನರ್‌ ನಡಿ ಇದೇ ಮೊದಲ ಬಾರಿಗೆ ದತ್ತಮಾಲಾ ಅಭಿಯಾನ ನಡೆಸಲಾಗುತ್ತಿದೆ.

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ನಡೆಸಿದ ದತ್ತಪೀಠ ಹೋರಾಟದ ಮೇಲೆ ರಾಜಕೀಯದ ನೆರಳು ಬಿದ್ದ ಪರಿಣಾಮ ಪ್ರಮೋದ್‌ ಮುತಾಲಿಕ್ ಶ್ರೀರಾಮ ಸೇನೆ ಸಂಘಟನೆ ಹುಟ್ಟು ಹಾಕಿದರು. ಅದರಡಿ 20 ವರ್ಷಗಳ ಕಾಲ ಕಾರ್ತಿಕ ಮಾಸದಲ್ಲಿ ದತ್ತಮಾಲಾ ಅಭಿಯಾನ ನಡೆಸಿಕೊಂಡು ಬರಲಾಗುತ್ತಿತ್ತು.

ಕಳೆದ ವರ್ಷ ಶ್ರೀರಾಮ ಸೇನೆ ದತ್ತಮಾಲೆ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದ ಶೋಭಾ ಯಾತ್ರೆಯಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸೇರಿದಂತೆ ವಿಶ್ವಹಿಂದೂ ಪರಿಷತ್‌, ಭಜರಂಗದಳ ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಈ ಹೋರಾಟವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಒಂದಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಂತರ ಆದ ಬೆಳವಣಿಗೆಯಲ್ಲಿ ಈ ಬಾರಿ ಶ್ರೀರಾಮ ಸೇನೆ ದತ್ತಮಾಲಾ ಅಭಿಯಾನವನ್ನು ಪ್ರತ್ಯೇಕವಾಗಿ ನಡೆಸಲು ಹಿಂದೇಟು ಹಾಕಿದೆ ಎನ್ನಲಾಗುತ್ತಿದೆ. ಅದ್ದರಿಂದ ದತ್ತಪೀಠ ಸೇವಾ ಸಮಿತಿಯನ್ನು ಹುಟ್ಟು ಹಾಕಿ ಅದರಡಿ ಈ ಬಾರಿ ದತ್ತಮಾಲಾ ಅಭಿಯಾನ ನಡೆಸಲಾಗುತ್ತಿದೆ. ಇದರ ನೇತೃತ್ವವನ್ನು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್‌ ಶೆಟ್ಟಿ ವಹಿಸಿದ್ದಾರೆ.ಮಾಲಾಧಾರಣೆ:

ನಗರದ ಶ್ರೀ ಶಂಕರಮಠದಲ್ಲಿ ಗುರುವಾರ ದತ್ತಭಕ್ತರು ದತ್ತಮಾಲೆ ಧರಿಸಿದರು. ಅ. 31 ರಂದು ದತ್ತ ದೀಪೋತ್ಸವ ನಡೆಯಲಿದ್ದು, ನ. 1 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾಧಾರಿಗಳನ್ನು ಪಡಿ ಸಂಗ್ರಹಿಸಲಿದ್ದಾರೆ. ನ. 2 ರಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ.

ಗುರುವಾರ ದತ್ತಮಾಲಾ ಧಾರಣೆ ಸಂದರ್ಭದಲ್ಲಿ ದತ್ತಪೀಠ ಸೇವಾ ಸಮಿತಿ ಸಂಚಾಲಕ ರಂಜಿತ್‌ ಶೆಟ್ಟಿ, ದತ್ತಾಶ್ರಮದ ಶ್ರೀ ರಾಜೇಂದ್ರಕುಮಾರ್‌, ಯೋಗಿ ಸಂಜೀತ್‌ ಸುವರ್ಣ, ಮಹಿಳಾ ಘಟಕದ ಸಂಚಾಲಕಿ ನವಿನಾ ರಂಜಿತ್‌ ಹಾಜರಿದ್ದರು. ಇದೇ ಸಂದರ್ಭದಲ್ಲಿ ನಡೆದ ಪೂಜೆ ಕಾರ್ಯದಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಭಾಗವಹಿಸಿದ್ದರು.--- ಬಾಕ್ಸ್‌ ---

ಕಳೆದ 20 ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ದತ್ತಮಾಲೆ ಧರಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ಶ್ರೀರಾಮ ಸೇನೆ ಈ ಕಾರ್ಯಕ್ರಮ ಕೈ ಬಿಟ್ಟಿದೆ. ಹಾಗಾಗಿ ದತ್ತಪೀಠ ಸೇವಾ ಸಮಿತಿ ನೇತೃತ್ವದಲ್ಲಿ ಈ ಬಾರಿ ದತ್ತಮಾಲಾ ಅಭಿಯಾನ ಆಯೋಜನೆ ಮಾಡಲಾಗಿದೆ. ಇದನ್ನು ಹೀಗೆಯೇ ಪ್ರತಿ ವರ್ಷ ಮುಂದುವರಿಸಿಕೊಂಡು ಹೋಗಲಾಗುವುದು.- ರಂಜಿತ್‌ ಶೆಟ್ಟಿ

-ಈ ಪದ್ಧತಿ ನಡೆಸಿಕೊಂಡು ಬಂದಿದ್ದೇವೆ. ಮುಂದಿನ ದಿನವೂ ಈ ಪದ್ಧತಿ ಮುಂದುವರಿಸುವುದಾಗಿ ಹೇಳಿದ್ದಾರೆ. ಭಕ್ತಿ ಭಾವನೆಯಿಂದ ಬರುವ ಭಕ್ತರಿಗೆ ಅಲ್ಲಿ ಸೂಕ್ತ ವ್ಯವಸ್ಥೆ ಜಿಲ್ಲಾಡಳಿತ ಮಾಡಬೇಕು. ಪ್ರಮೋದ್‌ ಮುತಾಲಿಕ್ ಅವರ ಎಲ್ಲರೂ ಒಟ್ಟಿಗೆ ಸೇರಿ ಮಾಡೋಣ ಎಂಬ ನಿರ್ಣಯ ಸೂಕ್ತವಾಗಿದೆ. ಹಿಂದೂ ಸಮಾಜ ಒಡೆಯುವ ಪ್ರಯತ್ನ ಬೇರೆ ಬೇರೆ ರೂಪದಲ್ಲಿ ಮಾಡುತ್ತಲೇ ಇದ್ದಾರೆ. ಜಾತಿ ಹೆಸರಿನಲ್ಲಿ ಸಿದ್ಧಾಂತ ಹೆಸರಿನಲ್ಲಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಸಂಚಿಗೆ ಬಲಿಯಾಗದಂತೆ ಎಲ್ಲಾ ಹಿಂದೂಗಳನ್ನು ಸಂಘಟಿಸುವ ಚಿಂತನೆ ಒಳ್ಳೆಯದು. ಹಿಂದೂ ಸಮಾಜ ದೊಳಗೆ ಇರುವ ಅಸ್ಪೃಶ್ಯತೆ, ಜಾತಿಯತೆ ಭಾವನೆ ದೂರ ಮಾಡುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಆಗ ಬೇಕು. ಸಕಲ ಮಠಾಧಿಪತಿಗಳು ಮುಂದಾಗಿ ಜಾತಿಯತೆ ಮತ್ತು ಅಸ್ಪೃಶ್ಯತೆಗೆ ಸಮಾಜದಲ್ಲಿ ಜಾಗ ಇಲ್ಲದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. - ಸಿ.ಟಿ. ರವಿ

ವಿಧಾನಪರಿಷತ್‌ ಸದಸ್ಯರು

30 ಕೆಸಿಕೆಎಂ 4ಚಿಕ್ಕಮಗಳೂರಿನ ಶ್ರೀ ಶಂಕರಮಠದಲ್ಲಿ ಗುರುವಾರ ದತ್ತಭಕ್ತರು ದತ್ತಮಾಲೆ ಧರಿಸಿದರು.