ದತ್ತಮಾಲಾ ಅಭಿಯಾನ: ರಾಜ್ಯಾದ್ಯಂತ ನ. 7 ರಂದು ದತ್ತ ದೀಪೋತ್ಸವ

| Published : Oct 26 2024, 12:51 AM IST

ದತ್ತಮಾಲಾ ಅಭಿಯಾನ: ರಾಜ್ಯಾದ್ಯಂತ ನ. 7 ರಂದು ದತ್ತ ದೀಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಶ್ರೀರಾಮ ಸೇನೆ ನೇತೃತ್ವದಲ್ಲಿ ನ.4 ರಿಂದ 10ರವರೆಗೆ ನಡೆಯಲಿರುವ ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ನ. 7 ರಂದು ರಾಜ್ಯಾದ್ಯಂತ ದತ್ತ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ನ. 4-10 ರವರೆಗೆ ದತ್ತಮಾಲಾ ಅಭಿಯಾನ, ರಥಯಾತ್ರೆಗೆ ಚಿಂತನೆ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾಹಿತಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀರಾಮ ಸೇನೆ ನೇತೃತ್ವದಲ್ಲಿ ನ.4 ರಿಂದ 10ರವರೆಗೆ ನಡೆಯಲಿರುವ ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ನ. 7 ರಂದು ರಾಜ್ಯಾದ್ಯಂತ ದತ್ತ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ದತ್ತಪೀಠದ ಮುಕ್ತಿಗೆ ನಡೆಯುತ್ತಿರುವ ಹೋರಾಟ ರಾಜ್ಯ ವ್ಯಾಪ್ತಿಯಲ್ಲಿ ವಿಸ್ತರಿಸಲು ಸಂಘಟನೆ ಮುಖಂಡರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿ ದ್ದಾರೆ. ತಾವು ಕೂಡ ಈಗಾಗಲೇ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ.4 ರಂದು ದತ್ತ ಮಾಲಾಧಾರಣೆ, 7 ರಂದು ದತ್ತ ದೀಪೋತ್ಸವ, 9 ರಂದು ಪಡಿ ಸಂಗ್ರಹ, 10 ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾ ಯಾತ್ರೆ ನಡೆಸಿ ನಂತರದಲ್ಲಿ ದತ್ತಪೀಠಕ್ಕೆ ತೆರಳಿ ಅಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲಾ ಭಕ್ತರು ಪಾಲ್ಗೊಳ್ಳಲಿದ್ದಾರೆ. ಸಂಘಟನೆ ಅಂದಾಜು ಮಾಡಿರುವ ಪ್ರಕಾರ ಸುಮಾರು 5 ಸಾವಿರ ದತ್ತ ಭಕ್ತರು ಪೀಠಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.

ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ರಥಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದ ಅವರು, ದತ್ತಪೀಠದಲ್ಲಿ ಕೊನೆ ದಿನ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಾಗ್ಮಿ ತೆಲಂಗಾಣದ ಮಾಧವಿ ಲತಾ, ಮಾಜಿ ಸಂಸದ ಪ್ರತಾಪ್‌ ಸಿಂಹ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ದತ್ತಪೀಠದ ಆವರಣದಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಯಲ್ಲಿರುವ ದರ್ಗಾದ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ದತ್ತಪೀಠದಲ್ಲಿ ಇಸ್ಲಾಂ ಆಚರಣೆಗೆ ಅವಕಾಶ ನೀಡಬಾರದು. ದತ್ತ ಮಾಲೆ ಧರಿಸಿ ಪೀಠಕ್ಕೆ ಬರುವ ಭಕ್ತರಿಗೆ ಜಿಲ್ಲಾಡಳಿತದಿಂದ ಪ್ರವಾಸದ ವ್ಯವಸ್ಥೆ ಆಗಬೇಕು. ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿನಿತ್ಯ ಪೂಜೆಗೆ ಅವಕಾಶ ನೀಡಬೇಕು ಎಂದರು.

ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೆಲವು ನಿಬಂಧನೆಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ದತ್ತಪೀಠಕ್ಕೆ ಬರುವವರು ಮದ್ಯಪಾನ ಮಾಡಿ ಬರಬಾರದು ಎಂದು ಉಲ್ಲೇಖಿಸಲಾಗಿದೆ. ಮಾಲೆ ಧರಿಸಿದವರು ಯಾರೂ ಕೂಡ ಮದ್ಯಪಾನ ಮಾಡಿರುವುದಿಲ್ಲ. ಯಾತ್ರೆ ಸಂದರ್ಭದಲ್ಲಿ ಘೋಷಣೆ ಹಾಕಬಾರದು ಎಂದು ಹೇಳಿದ್ದಾರೆ. ನಾವು ಮಾಡ್ತಾ ಇರೋದು ಶೋಭಾಯಾತ್ರೆಯೇ ಹೊರತು ಶವಯಾತ್ರೆ ಅಲ್ಲ. ಭಜನೆ, ಧ್ಯಾನ ಮಾಡಬಾರದೆಂದು ಹೇಳಿರುವುದರಲ್ಲಿ ಅರ್ಥವಿಲ್ಲ. ಈ ರೀತಿಯ ಹೊಸ ನಿಬಂಧನೆಗಳು ಸರಿಯಲ್ಲ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ವಿಭಾಗೀಯ ಅಧ್ಯಕ್ಷ ರಂಜಿತ್‌ ಶೆಟ್ಟಿ, ದತ್ತಾತ್ರೇಯ ಧರ್ಮ ಚಿಂತಕ ರಾಜೇಂದ್ರಕುಮಾರ್‌, ಜಿಲ್ಲಾಧ್ಯಕ್ಷ ಅರ್ಜುನ್‌, ದುರ್ಗಾ ಸೇನೆ ಜಿಲ್ಲಾಧ್ಯಕ್ಷ ನವೀನ ರಂಜಿತ್‌ ಉಪಸ್ಥಿತರಿದ್ದರು.

25 ಕೆಸಿಕೆಎಂ 1ಗಂಗಾಧರ್‌ ಕುಲಕರ್ಣಿ

---

25 ಕೆಸಿಕೆಎಂ 2 ಶ್ರೀ ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್‌ ಸ್ವಾಮಿ ದರ್ಗಾ.