ಕಿಡಿಗೇಡಿಗಳಿಂದ ದತ್ತಾತ್ರೇಯ ಮೂರ್ತಿ ಧ್ವಂಸ

| Published : Oct 07 2024, 01:34 AM IST / Updated: Oct 07 2024, 01:35 AM IST

ಸಾರಾಂಶ

ಯಾರೋ ಕಿಡಿಗೇಡಿಗಳು ದತ್ತಾತ್ರೇಯ ದೇವರ ಮೂರ್ತಿಯ ನಾಲ್ಕು ಕೈಗಳನ್ನು ಧ್ವಂಸಗೊಳಿಸಿದ್ದಾರೆ‌. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಹಳೆಯ ದೇಸಾಯಿ ಗ್ಯಾಸ್ ಗೋದಾಮಿನ ಬಳಿ ಇರುವ ಅಪರ್ಣಾ ಅಪಾರ್ಟ್‌ಮೆಂಟ್ ಆವರಣದಲ್ಲಿ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ‌ ದತ್ತಾತ್ರೇಯ ದೇವರ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಭಾನುವಾರ ನಡೆದಿದೆ.

ಯಾರೋ ಕಿಡಿಗೇಡಿಗಳು ಮೂರ್ತಿಯ ನಾಲ್ಕು ಕೈಗಳನ್ನು ಧ್ವಂಸಗೊಳಿಸಿದ್ದಾರೆ‌. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಬಿಜೆಪಿ ವಕ್ತಾರ ರವಿ ನಾಯ್ಕ, ಹಿಂದೂಪರ ಸಂಘಟನೆಯ ಗಂಗಾಧರ ಸಂಗಮಶೆಟ್ಟರ, ಶಿವಾನಂದ ಸತ್ತಿಗೇರಿ, ಹಾಗೂ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ್ಟ್‌ಮೆಂಟ್‌ನ ಕಾರ್ಯದರ್ಶಿ ರೇಣುಕಾ ಗೆಜ್ಜಿಹಳ್ಳಿ ಮತ್ತು ಸ್ಥಳೀಯ ನಿವಾಸಿಗಳು ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾಂವಿ, ಉಪನಗರ ಠಾಣೆ ಇನ್‌ಸ್ಪೆಪೆಕ್ಟರ್ ಎಂ.ಎಸ್. ಹೂಗಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸಿದರು.

ದಸರಾ ಉತ್ಸವ ಅಂಗವಾಗಿ ನಿವಾಸಿಗಳು ಶನಿವಾರ ರಾತ್ರಿ ಒಂದು ಗಂಟೆ ವರೆಗೂ ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಬಳಿಕ ಈ ಕೃತ್ಯ ನಡೆದಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದರು. ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ದತ್ತಾತ್ರೇಯ ಮೂರ್ತಿಯನ್ನು 2011ರಲ್ಲಿ ಪ್ರತಿಷ್ಠಿಸಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ, ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದ್ದು, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದರು.

ಆವರಣದ ಸುತ್ತಮುತ್ತ 5 ಸಿಸಿಟಿವಿ ಕ್ಯಾಮೆರಾಗಳಿದ್ದು, ಪ್ರಮುಖ ಪ್ರವೇಶ ದ್ವಾರದಿಂದ ಹೊರಗಿನಿಂದ ಯಾವೊಬ್ಬ ಅಪರಿಚಿತ ವ್ಯಕ್ತಿಯೂ ಆವರಣಕ್ಕೆ ಬಂದಿಲ್ಲ. ಅಪಾರ್ಟ್‌ಮೆಂಟ್ ಆವರಣ ಪ್ರವೇಶಿಸಲು ಪಕ್ಕದಲ್ಲಿ ಒಂದು ದಾರಿಯಿದ್ದು, ಅಲ್ಲಿಂದ ಬಂದರೂ ಬಂದಿರಬಹುದು ಎಂದು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದರು.

24 ಗಂಟೆಯೊಳಗೆ ಬಂಧಿಸಿ

ಸ್ಥಳಕ್ಕೆ ಶಾಸಕ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ದುಷ್ಕರ್ಮಿಗಳು ಮೂರ್ತಿಯ ಕೈಗಳನ್ನು ಭಗ್ನ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿರುವುದು ಅಕ್ಷಮ್ಯ ಅಪರಾಧ. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ದೇವಸ್ಥಾನದ ಕೀಲಿ ಹಾಕಿದ್ದೇ ಇತ್ತು. ಬೆಳಗ್ಗೆ 7:30ರ ಸುಮಾರಿಗೆ ನೋಡಿದಾಗ ಮೂರ್ತಿಯ ಕೈಗಳನ್ನು ಭಗ್ನಗೊಳಿಸಲಾಗಿತ್ತು ಎಂದು ದೇವಸ್ಥಾನದ ಪೂಜಾರಿ ನಾಗಯ್ಯ ಅಕ್ಕಿಗುಂದಮಠ ತಿಳಿಸಿದ್ದಾರೆ.